ಕಾರವಾರ: ಇಲ್ಲಿನ ಬಾಡ ತೇಲಂಗ್ ರಸ್ತೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮೇಲ್ಛಾವಣಿ ರವಿವಾರ ಕುಸಿದು ಬಿದ್ದಿದ್ದು, ಭಾರಿ ದುರಂತ ತಪ್ಪಿದಂತಾಗಿದೆ.
ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಈ ಕೊಠಡಿಯಲ್ಲಿ ಮಳೆಗಾಲದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಹಾಗೂ ಯೋಗಾಭ್ಯಾಸ ಹೇಳಿಕೊಡಲಾಗುತ್ತಿತ್ತು. ಜೊತೆಗೆ ಕ್ರೀಡಾ ಸಾಮಗ್ರಿ ಸಹ ದಾಸ್ತಾನು ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.
ಕೊಠಡಿ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಮೇಲ್ಛಾವಣಿ ಹೆಂಚು ಹಾಗೂ ಕಟ್ಟಿಗೆ ಸಾಮಗ್ರಿಗಳೆಲ್ಲ ಕ್ರೀಡಾ ವಸ್ತುಗಳ ಮೇಲೆ ಬಿದ್ದು ಹಾನಿಯಾಗಿದೆ. ಇದಲ್ಲದೇ ಅಕ್ಕ-ಪಕ್ಕದ ಕೊಠಡಿಯೂ ಕುಸಿಯುವ ಹಂತದಲ್ಲಿದೆ. ಇದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾಲಕರು ಆತಂಕಕ್ಕೊಳಗಾಗುವಂತಾಗಿದೆ.
ಅತ್ಯಂತ ಹಳೆಯ ಕಟ್ಟಡ ಇದಾಗಿತ್ತು. ಶಾಲೆ ಕಟ್ಟಡದ ಗುಣಮಟ್ಟ ಸರಿಯಾಗಿಲ್ಲವಾಗಿತ್ತು. ಹೀಗಾಗಿ ಶಾಲೆಯ ಕಟ್ಟಡ ಸರಿ ಇಲ್ಲದಿರುವುದನ್ನು ಗಮನಿಸಿ ಪಾಲಕರು ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ದಶಕಗಳ ಹಿಂದೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಸದ್ಯ ಅತೀ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಮೇಲ್ಛಾವಣಿ ದುರಸ್ತಿ ಮಾಡಿಕೊಡುವಂತೆ ಈ ಹಿಂದೆ ಮೂರು ಬಾರಿ ಶಿಕ್ಷಣ ಇಲಾಖೆಗೆ ಆಡಳಿತ ಮಂಡಳಿ ಮನವಿ ಸಲ್ಲಿಸಿದೆ. ಆದರೂ ಇಲಾಖೆ ನಿರ್ಲಕ್ಷ್ಯ ವಹಿಸಿರುವುದನ್ನು ನಗರದ ನಿವಾಸಿಗಳು ದಾಖಲೆಗಳೊಂದಿಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಯ ಎಲ್ಲ 12 ಕೊಠಡಿಗಳ ಮೇಲ್ಛಾವಣಿ ಹಾಳಾದ ಬಗ್ಗೆ ಕಳೆದ ಜ. 25ರಂದು ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಚರ್ಚಿಸಿ ದುರಸ್ತಿ ಮಾಡಲು ನಿರ್ಣಯಿಸಲಾಗಿತ್ತು. ಮಳೆ-ಗಾಳಿ ಅವಧಿಯಲ್ಲಿ ಯಾವುದೇ ಸಮಯದಲ್ಲೂ ಶಾಲೆ ಕೊಠಡಿ ಕುಸಿಯಬಹುದು. ಎಲ್ಲ ಕೊಠಡಿಗಳನ್ನು ನೆಲಸಮ ಮಾಡಿ ಹೊಸದಾಗಿ ನಾಲ್ಕು ಕೊಠಡಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆಗೆ ಒತ್ತಾಯಿಸಲಾಗಿತ್ತು. ಹಲವಾರು ಬಾರಿ ಎಸ್‌ಡಿಎಂಸಿ ವತಿಯಿಂದ ಸಂಬಂಧಪಟ್ಟವರಿಗೆ ಲಿಖೀತವಾಗಿಯೇ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಅನುದಾನ ಬಿಡುಗಡೆಯಾಗಿರಲಿಲ್ಲ.
ಜಿಲ್ಲಾಧಿಕಾರಿ ಎಚ್ಚರಿಕೆ: ಪ್ರವಾಹ ಪೀಡಿತ ಪ್ರದೇಶಗಳ ಶಾಲಾ ಕಟ್ಟಡಗಳು ಬಳಕೆಗೆ ಯೋಗ್ಯವಾಗಿರುವ ಬಗ್ಗೆ ಎಂಜಿನಿಯರ್ ಅವರ ದೃಢೀಕರಣ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ್ ಕೆ. ಆದೇಶಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಟ್ಟಡಗಳು ಅಪಾಯ ತಂದೊಡ್ಡುವ ಸಾಧ್ಯತೆ ಇರುವುದರಿಂದ ಈ ಆದೇಶ ನೀಡಲಾಗಿದ್ದು, ಸಂಬಂಧಿಸಿದ ಎಂಜಿನಿಯರ್ ಪ್ರಮಾಣ ಪತ್ರ ಕಡ್ಡಾಯ ಪಡೆಯಬೇಕು. ಇಲ್ಲವಾದರೆ ಅದರಿಂದಾಗಬಹುದಾದ ಅನಾಹುತಕ್ಕೆ ಸಂಬಂಧಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.