Advertisement

ಶಾಲೆಯ ಮೇಲ್ಛಾವಣಿ ಕುಸಿತ: ಪವಾಡ ಸದೃಶ ರೀತಿಯಲ್ಲಿ ಪಾರಾದ ಮಕ್ಕಳು

01:17 PM May 26, 2022 | Team Udayavani |

ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆ ಪಕ್ಕದ ಮಹಿಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಮತ್ತು ಇಂಗ್ಲೀಷ್ ಮೀಡಿಯಂ ಶಾಲೆಯ ಕೊಠಡಿಯೊಂದರ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರಿಟ್ ಪದರ‌ ಕುಸಿದು ಬಿದ್ದಿದ್ದು, ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಗುರುವಾರ ನಡೆದಿದೆ.

Advertisement

ವಿದ್ಯಾರ್ಥಿಗಳು ಪ್ರಾರ್ಥನೆಗೆಂದು ತರಗತಿಯಿಂದ ಹೊರಗೆ ಬಂದಿರುವ ವೇಳೆ ಕೊಠಡಿಯೊಳಗಿಂದ ಭಾರೀ ಸದ್ದು ಕೇಳಿಬಂದಿದೆ. ಕೂಡಲೇ ಶಿಕ್ಷಕರು ಹೋಗಿ ನೋಡಿದಾಗ ಮೇಲ್ಛಾವಣಿಯ ಪದರ ಕುಸಿದು ಬಿದ್ದಿರುವುದು ಕಂಡು ಬಂದಿದೆ.

ವಿಷಯ ತಿಳಿದು ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸ್ಥಳಕ್ಕಾಗಮಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಆ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿದರು. ಇದೇ ವೇಳೆ ಮತ್ತೊಂದು ಬಿರುಕು ಬಿಟ್ಟ ಕೊಠಡಿಯನ್ನೂ ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮವಹಿಸಲು ಶಾಲೆಯ ಮುಖ್ಯಾಧ್ಯಾಪಕಿ ಬಾಗವಾನ ಅವರಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ:ಮಂಗಳೂರು ವಿವಿಯಲ್ಲಿ ಮತ್ತೆ ಹಿಜಾಬ್‌ ವಿವಾದ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹಲವು ಬಾರಿ ಬಿಇಓ ಕಚೇರಿಗೆ ಶಾಲೆ ದುರಸ್ಥಿ, ಹೆಚ್ಚುವರಿ ಕೊಠಡಿ ಒದಗಿಸಲು ಕೋರಿ ಮನವಿಗಳ ಮೇಲೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಮುಖ್ಯಾಧ್ಯಾಪಕಿ ಅಸಮಾಧಾನ ತೋಡಿಕೊಂಡರು.

Advertisement

ಪ್ರತಿಭಟನೆ ಎಚ್ಚರಿಕೆ

ಮಹಿಬೂಬ ಗೊಳಸಂಗಿ ಮಾತನಾಡಿ ಶಾಲೆ ಸಂಪೂರ್ಣ ಜೀರ್ಣಾವಸ್ಥೆಗೀಡಾಗಿದೆ. ದುರಸ್ತಿಗೆ, ಹೊಸ ಕೊಠಡಿ ಮಂಜೂರಾತಿಗೆ ಯಾರೂ ಗಮನ ಹರಿಸುತ್ತಿಲ್ಲ. ಕೆಲ ಸಣ್ಣ ಪುಟ್ಟ ಕೆಲಸಗಳನ್ನೂ ಶಿಕ್ಷಕರು, ಎಸ್ಡಿಎಂಸಿಯವರ ಸಹಾಯದಿಂದ ಮಾಡಿದ್ದೇವೆ. ಈ ಘಟನೆಯಿಂದಾದರೂ ಇಲಾಖೆ ಎಚ್ಚೆತ್ತುಕೊಂಡು ಮಕ್ಕಳ ಪ್ರಾಣ ರಕ್ಷಣೆಗೆ ಕ್ರಮವಹಿಸಬೇಕು. ಇಲ್ಲವಾದರೆ ಮಕ್ಕಳ ಸಮೇತ ಬಿಇಓ ಕಚೇರಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆಯಿಂದಲೇ ನಿರ್ಲಕ್ಷ ಆರೋಪ

ಕ್ಷೇತ್ರ ಸಮನ್ವಯಾಧಿಕಾರಿ ಧರಿಕಾರ ಮಾತನಾಡಿ ಶಾಲೆ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಸಣ್ಣಪುಟ್ಟ ದುರಸ್ಥಿಗೆ, ಕಂಪೌಂಡ್ ನಿರ್ಮಾಣಕ್ಕೆ ಪುರಸಭೆಯವರು ಮುಂದಾಗಬೇಕು. ಹಲವು ಬಾರಿ ಪುರಸಭೆ ಆಡಳಿತಕ್ಕೆ ಈ ಕುರಿತು ಗಮನ ಸೆಳೆದರೂ ಅವರು ಸ್ಪಂದಿಸಿಲ್ಲ. ನಮ್ಮಲ್ಲಿ ಅನುದಾನ ಇಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next