ನಾವು ನೀರು ಕುಡಿಯಲು ಲೋಟವನ್ನು ಬಳಸುತ್ತೇವೆ. ಲೋಟಕ್ಕೆ ನೀರನ್ನು ಹಿಡಿದಿಡುವ ಸಾಮರ್ಥ್ಯವಷ್ಟೇ ಅಲ್ಲ, ನಾಣ್ಯವನ್ನು ನುಂಗುವ ಶಕ್ತಿಯೂ ಇದೆ ಅನ್ನೋದು ಗೊತ್ತಾ? ಈ ಮ್ಯಾಜಿಕ್ ಕಲಿತರೆ ಅದನ್ನು ಇತರರ ಮುಂದೆ ಪ್ರದರ್ಶಿಸಿ ಲೋಟ ನಾಣ್ಯವನ್ನು ನುಂಗುವುದನ್ನು ತೋರಿಸಿಕೊಡಬಹುದು.
ಬೇಕಾಗುವ ವಸ್ತು: ಗಾಜಿನ ಲೋಟ ಮತ್ತು ಒಂದು ನಾಣ್ಯ.
ಪ್ರದರ್ಶನ: ಹಳದಿ ಬಟ್ಟೆ ಹಾಸಿದ ಟೇಬಲ್ ಮೇಲೆ ಒಂದು ಗಾಜಿನ ಲೋಟವನ್ನು ಉಲ್ಟಾ ಮಾಡಿ ಇಟ್ಟಿರುತ್ತಾರೆ. ಪಕ್ಕದಲ್ಲಿ ಒಂದು ನಾಣ್ಯ ಇರುತ್ತದೆ. ಜಾದೂಗಾರ ಲೋಟವನ್ನು ಎತ್ತಿ ಉಲ್ಟಾ ಮಾಡಿ ನಾಣ್ಯದ ಮೇಲೆ ಮುಚ್ಚಿಡುತ್ತಾನೆ. ಲೋಟ ಗಾಜಿನದ್ದು ಎಂದ ಮೇಲೆ ನಾಣ್ಯ ನಮಗೆ ಕಾಣಿಸಬೇಕು ತಾನೇ? ಆದರೆ, ಆ ಜಾಗದಲ್ಲಿ ನಾಣ್ಯ ಇರುವುದಿಲ್ಲ. ಅಂದರೆ, ಲೋಟ ನಾಣ್ಯವನ್ನು ನುಂಗಿಬಿಟ್ಟಿರುತ್ತದೆ. ಮತ್ತೆ ಜಾದೂಗಾರ ಲೋಟವನ್ನು ಪಕ್ಕಕ್ಕೆ ಸರಿಸಿದಾಗ ನಾಣ್ಯ ಮೊದಲಿದ್ದ ಜಾಗದಲ್ಲಿಯೇ ಪ್ರತ್ಯಕ್ಷವಾಗುತ್ತದೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಗಾಜಿನ ಲೋಟದಲ್ಲಿ. ಅದರ ಬಾಯಿಗೆ ಸರಿ ಹೊಂದುವಂತೆ ಹಳದಿ ಬಣ್ಣದ ಪೇಪರ್ ಅಥವಾ ರಟ್ಟನ್ನು ಅಂಟಿಸಿ. ಲೋಟವನ್ನು ಯಾವುದೇ ಕಾರಣಕ್ಕೂ ಬಾಯಿ ಮೇಲೆ ಮಾಡಿ ಇಡಕೂಡದು. ಏಕೆಂದರೆ ಹಾಗಿಟ್ಟರೆ ಅದರ ಬಾಯಿಗೆ ಅಂಟಿಸಿರುವ ಹಳದಿ ರಟ್ಟು ಕಂಡುಬಿಡುತ್ತದೆ. ಇನ್ನೊಂದು ವಿಷಯವೆಂದರೆ ಹಳದಿ ಬಣ್ಣದ ರಟ್ಟೇ ಆಗಬೇಕೆಂದಿಲ್ಲ. ಯಾವುದೇ ಬಣ್ಣದ ರಟ್ಟನ್ನು ಬಳಸಬಹುದು. ಆದರೆ ಅದು ಟೇಬಲ್ ಕ್ಲಾತಿನ ಬಣ್ಣದ್ದೇ ಆಗಿರಬೇಕು. ಇಲ್ಲಿ ನೀಡಿರುವ ಚಿತ್ರಗಳಲ್ಲಿ ಹಳದಿ ಟೇಬಲ್ ಕ್ಲಾತ್ ಮತ್ತು ಹಳದಿ ರಟ್ಟನ್ನು ಬಳಸಲಾಗಿದೆ. ಮ್ಯಾಜಿಕ್ ಶುರು ಮಾಡುವ ಮುನ್ನ ಲೋಟವನ್ನು ಉಲ್ಟಾ ಮಾಡಿ ಟೇಬಲ್ ಮೇಲೆ ಇಟ್ಟಿರಬೇಕು. ನಂತರ ಲೋಟವನ್ನು ಎತ್ತಿ ನಾಣ್ಯದ ಮೇಲೆ ಇಡಿ. ಹಾಗೆ ಎತ್ತಿಡುವಾಗ ಲೋಟದ ಬಾಯಿಗೆ ಅಂಟಿಸಿರುವ ರಟ್ ಕಾಣದಂತೆ ಎಚ್ಚರವಹಿಸಿ. ಲೋಟವನ್ನು ನಾಣ್ಯದ ಮೇಲೆ ಇರಿಸಿದಾಗ ರಟ್ ನಾಣ್ಯದ ಮೇಲೆ ಕೂರುವುದರಿಂದ ಕಾಣಿಸದೇ ಹೋಗುತ್ತದೆ. ಇದರಿಂದಾಗಿ ನಾಣ್ಯ ಮಾಯವಾದಂತೆ ತೋರುತ್ತದೆ. ಪುನಃ ಲೋಟವನ್ನು ಪಕ್ಕಕ್ಕೆ ಸರಿಸಿದಾಗ ನಾಣ್ಯ ಗೋಚರಿಸುತ್ತದೆ.
– ವಿನ್ಸೆಂಟ್ ಲೋಬೋ