ಬೆಂಗಳೂರು: “ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ನೂರು ದಿನಗಳ ಸಮ್ಮಿಶ್ರ
ಸರ್ಕಾರದ ಸಾಧನೆ ಶೂನ್ಯ’ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಧಾನಸೌಧದಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲ. ಜಿಲ್ಲೆಗಳಿಗೆ ಹೋಗಿ ಜನರ ಕಷ್ಟ ಕೇಳುತ್ತಿಲ್ಲ. ಎರಡೂ ಪಕ್ಷದ ನಾಯಕರಲ್ಲಿ ವಿಶ್ವಾಸದ ಕೊರತೆ ಇದೆ’ ಎಂದು ಹೇಳಿದರು.
ರಾಜ್ಯದ ಹಲವೆಡೆ ನೆರೆ ಪರಿಸ್ಥಿತಿಯಿದೆ. ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರಲ್ಲಿನ ಗೊಂದಲಗಳನ್ನು ಬೇರೆಯವರ ಮೇಲೆ ಹಾಕಿ ಕಾಲಹರಣ ಮಾಡುತ್ತಿದ್ದಾರೆ. ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಗೊಂದಲವಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ನೆರೆಸಂತ್ರಸ್ತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚು ನೆರವು ಪಡೆಯಲು ನಾವು ಪ್ರಯತ್ನಿಸಲಿದ್ದೇವೆ ಎಂದು ಹೇಳಿದರು.