Advertisement

ಸಮ್ಮಿಶ್ರ ಸರಕಾರ ಅಸ್ಥಿರ ಯತ್ನ ಫಲಿಸದು

12:30 AM Jan 24, 2019 | Team Udayavani |

ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ಫಲಿಸದು. ಬಿಜೆಪಿ ಜತೆ ಹೋಗಲು ನಿರ್ಧರಿಸಿದ್ದರೆನ್ನಲಾದ ಕಾಂಗ್ರೆಸ್‌ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು ಪಕ್ಷದಲ್ಲೇ ಉಳಿಯುವುದಾಗಿ ಹೇಳಿದ್ದಾರೆ ಎಂದು ಮುಖ್ಯ ಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

‘ಸಮ್ಮಿಶ್ರ ಸರಕಾರ ಹೆಚ್ಚು ಸಮಯ ಬಾಳುವುದಿಲ್ಲ; ಮೋದಿ ಅವರ ಸರಕಾರ ಮಾತ್ರ ಉಳಿಯುತ್ತದೆ’ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇತ್ತೀಚಿನ ಸಮೀಕ್ಷೆಯೊಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ; ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಕೂಟಕ್ಕೆ 25ರಿಂದ 27 ಸೀಟುಗಳು ಸಿಗಲಿವೆ ಎಂದು ತಿಳಿಸಿದ್ದರಿಂದ ಹೇಗಾದರೂ ಮಾಡಿ ರಾಜ್ಯದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೆ ಲೋಕ ಸಭಾ ಸ್ಥಾನಗಳನ್ನು ಗೆಲ್ಲಲು ಸುಲಭ ಎಂಬ ಭಾವನೆ ಅವರದ್ದು ಎಂದರು.

ಕಾಂಗ್ರೆಸ್‌ನ ಶಾಸಕರಿಗೆ 30 ಕೋಟಿ ರೂ.ಗಳಿಂದ 60 ಕೋಟಿ ರೂ. ವರೆಗೂ ಹಣ ನೀಡುವ ಆಮಿಷವನ್ನು ಬಿಜೆಪಿ ನಾಯಕರು ಒಡ್ಡಿದ್ದರೂ ನಮ್ಮ ಶಾಸಕರು ಬಲಿಯಾಗಿಲ್ಲ. ಬಿಜೆಪಿಯರು ಇನ್ನೂ ಅಂತಹ ದುಸ್ಸಾಹಸವನ್ನು ಮುಂದುವರಿಸಿದರೆ ಕಾಂಗ್ರೆಸ್‌ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಸಾಲ ಇಳಿದಿಲ್ಲ; ಏರಿದೆ
‘ಬೇಟಿ ಪಡಾವೊ ಬೇಟಿ ಬಚಾವೊ’ ಯೋಜನೆಗೆ ಕೇಂದ್ರ ಸರಕಾರ ಕಾದಿರಿಸಿದ ಹಣದಲ್ಲಿ ಶೇ. 55ರಷ್ಟನ್ನು ಪ್ರಚಾರಕ್ಕೇ ವಿನಿಯೋಗಿಸಲಾಗಿದೆ; ಕೇವಲ ಶೇ. 23 ಮಾತ್ರ ಯೋಜನೆಗೆ ಲಭಿಸುತ್ತದೆ. ದೇಶದ ಸಾಲದ ಮೊತ್ತ ಯುಪಿಎ ಸರಕಾರ ಇದ್ದಾಗ 54 ಲಕ್ಷ ಕೋಟಿ ರೂ. ಇದ್ದರೆ, ಈಗ ಅದು 82 ಲಕ್ಷ ಕೋಟಿ ರೂ.ಗಳಿಗೇರಿದೆ. ಎನ್‌ಡಿಎ ಸರಕಾರದ ನಾಲ್ಕುವರೆ ವರ್ಷ ಅವಧಿಯಲ್ಲಿ 28 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ ಎಂದು ಐವನ್‌ ಆಪಾದಿಸಿದರು.

ಎಷ್ಟು ಅನುದಾದ ಬಂದಿದೆ?
ತನ್ನ ಸಾಧನೆ ಬಗ್ಗೆ ಹೇಳುವ ಸಂಸದ ನಳಿನ್‌ ಕುಮಾರ್‌ ಕಟೀಲು, ಕೇಂದ್ರದಿಂದ ಅಧಿಕೃತವಾಗಿ ಲಭ್ಯವಿರುವ ಅನುದಾನದ ಹೊರತಾಗಿ ಹೆಚ್ಚುವರಿಯಾಗಿ ಎಷ್ಟು ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರಿಸಿದ್ದಾರೆ ಎನ್ನುವ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಐವನ್‌ ತಿಳಿಸಿದರು. ಕಾಂಗ್ರೆಸ್‌ ಪಕ್ಷ ಅವಕಾಶ ನೀಡಿದರೆ ತಾನು ನಳಿನ್‌ ಕುಮಾರ್‌ ಕಟೀಲು ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದರು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಯು.ಎಚ್. ಖಾಲಿದ್‌, ಮುಸ್ತಾಫಾ, ಸಿರಾಜ್‌, ನಝೀರ್‌ ಬಜಾಲ್‌, ಪಿಯುಸ್‌ ಮೊಂತೇರೊ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next