Advertisement

ಕೃತಕ ಅಭಾವ ಸೃಷ್ಟಿ ಇಲ್ಲ

06:00 AM Oct 26, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್‌ ಶೆಡ್ಡಿಂಗ್‌ ಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು, ಲೋಡ್‌ ಶೆಡ್ಡಿಂಗ್‌, ಕೃತಕ ಅಭಾವ ಸ್ರಷ್ಟಿ ಸಂಬಂಧಪಟ್ಟಂತೆ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.

Advertisement

ಕಲ್ಲಿದ್ದಲು ದಾಸ್ತಾನು ಭಾರಿ ಪ್ರಮಾಣದಲ್ಲಿ ಕುಸಿದಿರುವ ಸಂಗತಿ ಬಯಲಾಗುತ್ತಿದ್ದಂತೆ ಲೋಡ್‌ ಶೆಡ್ಡಿಂಗ್‌ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಲಾಭ ಪಡೆದು ವಿದ್ಯುತ್‌ ಖರೀದಿ ಪ್ರಯತ್ನನಡೆಸುವ ಸಾಧ್ಯತೆ ಬಗ್ಗೆ ಗುಸುಗುಸು ಕೇಳಿಬಂದಿತ್ತು.

ಗುರುವಾರ ಇಂಧನ ಇಲಾಖೆ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ , ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್‌ಗೆ ಸೂಚಿಸಿಲ್ಲ. ಮುಂದೆಯೂ ಲೋಡ್‌ ಶೆಡ್ಡಿಂಗ್‌ ಇರುವುದಿಲ್ಲ. ವಿದ್ಯುತ್‌ ಖರೀದಿ ಮಾಡಲು ಕೃತಕ ಅಭಾವ ಸೃಷ್ಟಿಸುತ್ತಿಲ್ಲ. ವಿದ್ಯುತ್‌ ಖರೀದಿಸಿ ದುಡ್ಡು ಮಾಡುವ ಅಗತ್ಯ ನನಗಿಲ್ಲ ವಿದ್ಯುತ್‌ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಕೊರತೆ ನೀಗಿಸಲು ವಿದೇಶದಿಂದ ಐದು ಲಕ್ಷ ಮೆಟ್ರಿಕ್‌ ಟನ್‌ ಆಮದು ಮಾಡಿಕೊಳ್ಳಲಾಗುವುದು ಎಂದು  ತಿಳಿಸಿದ್ದಾರೆ.

ಸಂಜೆ 5 ರಿಂದ 10 ಗಂಟೆ ನಡುವೆ ವಿದ್ಯುತ್‌ ಸಮಸ್ಯೆ ಇದ್ದು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸುವಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಹೇಳಿದರು.

ಕೇಂದ್ರದ ವಿರುದ್ಧ ಆರೋಪ ಇಲ್ಲ
ಸೌರ ವಿದ್ಯುತ್‌ ಹೆಚ್ಚಿನ  ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಹಾಗೂ ಜಲ ವಿದ್ಯುತ್‌ ಮೂಲದಿಂದ  ಕೊರತೆ ನೀಗಿಸಲಾಗುತ್ತಿದೆ . ಕಲ್ಲಿದ್ದಲು ಕೊರತೆ ನೀರಿಸಲು 5 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಮಂಡಳಿ  ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜನವರಿಯಲ್ಲಿ ವಿದೇಶದಿಂದ ಕಲ್ಲಿದ್ದಲು ಬರುತ್ತದೆ. ಕಲ್ಲಿದ್ದಲು ಸಮಸ್ಯೆಯಿಂದ ರಾಯಚೂರಿನ ಘಟಕಗಳ ನಿರ್ವಹಣೆಗೆ ತೊಂದರೆಯಾಗಿದೆ.  ನಾನು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ತಿತ್ಲಿ ಚಂಡ ಮಾರುತದಿಂದ ಮಹಾನದಿಯಿಂದ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ ಎಂದು ತಿಳಿಸಿದರು.

Advertisement

ಸೌರ, ಪವನ, ಜಲ ವಿದ್ಯುತ್‌ ಉತ್ಪಾದನೆ ಮೂಲಕ ಎಷ್ಟು ವಿದ್ಯುತ್‌ ಬರುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸಂಜೆ 5 ರಿಂದ ರಾತ್ರಿ 10 ರವರೆಗೆ 300 ಮೆಗಾವ್ಯಾಟ್‌ ವಿದ್ಯುತ್‌ ಸಮಸ್ಯೆಯಾಗಿದೆ. ಜಲ ವಿದ್ಯುತ್‌ ಉತ್ಪಾದನೆಗೆ  ಇನ್ನೂ ಜಲಾಶಯಗಳಲ್ಲಿ ನೀರು ಇದೆ. ಹೀಗಾಗಿ, ಸಮಸ್ಯೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ  ಈಗಾಗಲೇ ಪತ್ರ ಬರೆದಿದ್ದೇನೆ. ಮತ್ತೂಮ್ಮೆ ಪತ್ರ ಬರೆಯಲಾಗುವುದು.  ಕಲ್ಲಿದ್ದಲು ಸಾಗಾಣಿಕೆ ಸಕಾಲದಲ್ಲಿ ಆಗುವುದನ್ನು ಖಾತರಿಪಡಿಸಲು ಕಲ್ಲಿದ್ದಲು ಸಚಿವಾಲಯ, ಕೇಂದ್ರ ರೈಲ್ವೆ ಕಚೇರಿಗೆ ಕೆಪಿಸಿಎಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ನಮಗೆ ರೈಲಿನ ಮೂಲಕ ಸರಬರಾಜು ಮಾಡಲು ರೇಕ್‌ಗಳ ಕೊರತೆ ಇದೆ. ಅದನ್ನು ಒದಗಿಸಲು ಕೇಂದ್ರ  ಒಪ್ಪಿದೆ ಎಂದರು.

ಮಹಾನಗರಗಳಲ್ಲಿ ಮತ್ತು ಕೈಗಾರಿಕೆಗಳಿಗೆ 24 ಗಂಟೆ ನಿರಂತರ ವಿದ್ಯುತ್‌, ನಿರಂತರ ಜ್ಯೋತಿಯಲ್ಲಿ 22 ರಿಂದ 24 ಗಂಟೆ ವಿದ್ಯುತ್‌ ಪೂರೈಕೆ, ಗ್ರಾಮೀಣ ಪ್ರದೇಶದಲ್ಲಿ  7 ಗಂಟೆ 3 ಫೇಸ್‌, ಒನ್‌ ಫೇಸ್‌ 9 ಗಂಟೆ ವಿದ್ಯುತ್‌ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

9000 ಟನ್‌ ಪೂರೈಕೆ
ಕಲ್ಲಿದ್ದಲು ಕಾರಣಕ್ಕೆ ಲೋಡ್‌ ಶೆಡ್ಡಿಂಗ್‌ ಶುರುವಾಗಲಿದೆ ಎಂದೇ ಚರ್ಚೆಯಾಗುತ್ತಿತ್ತು. ಆದರೆ ಸದ್ಯದಲ್ಲೇ ಕಲ್ಲಿದ್ದಲು ಪೂರೈಕೆ ಹೆಚ್ಚಾಗಲಿದ್ದು, ಹಾಲಿ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಪ್ರಮಾಣದ ಜತೆಗೆ ಹೆಚ್ಚುವರಿಯಾಗಿ ಸುಮಾರು 9000 ಟನ್‌ ನಿತ್ಯ ಪೂರೈಕೆಯಾಗಲಿದ್ದು, ಲೋಡ್‌ ಶೆಡ್ಡಿಂಗ್‌ ಅಗತ್ಯವೇ ಬೀಳುವುದಿಲ್ಲ ಎಂಬುದಾಗಿ ‘ ಉದಯವಾಣಿ’ ಮೊದಲೇ ಪ್ರಕಟಿಸಿತ್ತು. ಯಾವ ಗಣಿ ಸಂಸ್ಥೆಗಳಿಂದ ಎಷ್ಟು ಪ್ರಮಾಣದಲ್ಲಿ ಹೆಚುÌವರಿ ಕಲ್ಲಿದ್ದಲು ಪೂರೈಕೆ ಸಾಧ್ಯತೆ ಇದೆ ಎಂಬ ಬಗ್ಗೆಯೂ ಅಂಕಿಸಂಖ್ಯೆ ಸಮೇತ ಪ್ರಕಟಿಸಿತ್ತು. ನಿತ್ಯ ಸಂಜೆ 6ರಿಂದ  10ರವರೆಗಿನ ಬೇಡಿಕೆ ನಿಭಾಯಿಸಲು ಇಲಾಖೆ ಹರಸಾಹಸ ನಡೆಸುತ್ತಿರುವುದನ್ನು ಉಲ್ಲೇಖೀಸಿತ್ತು.

ದೆಹಲಿಯಲ್ಲಿ ನಾಳೆ ಸಭೆ
ಕೇಂದ್ರ ಕಲ್ಲಿದ್ದಲು ಸಚಿವಾಲಯವು ಶುಕ್ರವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದು, ಕಲ್ಲಿದ್ದಲು ಪೂರೈಕೆ ಸಂಬಂಧ ರಾಜ್ಯಕ್ಕೆ ಮಹತ್ವವೇನಿಸಿದೆ.  ಸಭೆಯಲ್ಲಿ ಕೇಂದ್ರದ ಎಲ್ಲ ಕಲ್ಲಿದ್ದಲು ಗಣಿ ಕಂಪೆನಿಗಳು, ರಾಜ್ಯಗಳ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ದೇಶದಾದ್ಯಂತ ಒಟ್ಟು ಬೇಡಿಕೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ರಾಜ್ಯದ ಪ್ರತಿನಿಧಿಯಾಗಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್‌ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ರಾಜ್ಯಕ್ಕೆ ಕಲ್ಲಿದ್ದಲು ಗಣಿ ಕಂಪೆನಿಗಳು ಪೂರೈಕೆ ಮಾಡಬೇಕಿರುವ ಕಲ್ಲಿದ್ದಲು ಪ್ರಮಾಣ ಹಾಗೂ ವಾಸ್ತವ ಪೂರೈಕೆ ಬಗ್ಗೆಯೂ ಗಮನ ಸೆಳೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿರುವ ಸಂದರ್ಭದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸ್ಪಂದನೆ ವ್ಯಕ್ತವಾದರೆ, ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಸುಧಾರಿಸುವ ನಿರೀಕ್ಷೆಯಿದೆ.

ಸಿಎಂ ಗರಂ
ಲೋಡ್‌ಶೆಡ್ಡಿಂಗ್‌ ಹಾಗೂ ಕೃತಕ ಅಭಾವ ಕುರಿತು ವರದಿಗಳ ಬಗ್ಗೆ ಮಾಧ್ಯಮಗಳ ಮೇಲೆ ಗರಂ ಆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ದೀಪಾವಳಿಗೆ ಲೋಡ್‌ಶೆಡ್ಡಿಂಗ್‌ ಎಂದು ಸುದ್ದಿ ಮಾಡಿದ್ದೀರಿ. ಯಾರನ್ನೂ  ಕತ್ತಲೆಗೆ ತಳ್ಳಲು ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿಲ್ಲ. ನಮ್ಮ ವಿದ್ಯುತ್‌ ಕಂಪನಿಗಳು ಲೋಡ್‌ ಶೆಡ್ಡಿಂಗ್‌ ಮಾಡಿಲ್ಲ. ಸರ್ಕಾರದಿಂದಲೂ ಯಾವುದೇ ತೀರ್ಮಾನ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿ ಸಹಿ ಮಾಡದೆ ಲೋಡ್‌ಶೆಡ್ಡಿಂಗ್‌ ಹೇಗೆ ಮಾಡುತ್ತಾರೆ. ನೀವು ಮಾಡಿರುವ ಡ್ಯಾಮೇಜ್‌ನಿಂದ  ಎಷ್ಟು ಹಾನಿಯಾಗುತ್ತಿದೆ ಗೊತ್ತಿದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next