Advertisement

ಮೋಡಗಳ ಹೊರೆ ಹೊತ್ತಿರುವ ದ್ವೀಪ “ಲಿಟ್ಲಾ ಡೆಮುನ್”ಬಗ್ಗೆ ಗೊತ್ತಿರಲಿ!

06:01 PM Oct 05, 2018 | Sharanya Alva |

ಜೋಡಿ ಕೊರಳಿನ ಪರ್ವತ ಎಂದು ಕರೆಸಿಕೊಳ್ಳುವ ಈ ಪರ್ವತವಿರುವುದು ಡೆನ್ಮಾರ್ಕ್ ನಲ್ಲಿ. ಇದರ ಮೇಲೇ ಹಾದುಹೋಗುವ ಬಿಳಿ ಮೋಡಗಳನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ!

Advertisement

ಹಸುರಿನ ಹಚ್ಚಡ ಹೊದ್ದಿರುವ ಪರ್ವತದ ಮೇಲುಭಾಗದಲ್ಲಿ ಹಾಲಿನ ಕೆನೆಯಂತೆಯೋ ಹತ್ತಿಯ ಮೂಟೆಯಂತೆಯೋ ಕಾಣುವ ಬಿಳಿಯ ಮೋಡಗಳ ರಾಶಿಯ ಅನನ್ಯ ನೋಟ ವರ್ಷದ ಎಲ್ಲ ದಿನಗಳಲ್ಲಿಯೂ ನೋಡಲು ಸಿಗುತ್ತದೆ. ಜಗತ್ತಿನ ಬೇರೆ ಎಲ್ಲಿಯೂ ಇಂಥ ಅಪರೂಪದ ದೃಶ್ಯವನ್ನು ಏಕಪ್ರಕಾರವಾಗಿ ನೋಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸನಿಹದ ಹಲ್ಟಾ ಮತ್ತು ಸ್ಯಾಂಡ್ವಿಕ್ ಎಂಬ ಹಳ್ಳಿಗಳಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅಲ್ಲಿ ನಿಂತು ನಿಸರ್ಗದ ಈ ವಿಶೇಷ ಸೊಬಗನ್ನು ಸವಿದು ಹೋಗುತ್ತಾರೆ. ಕಠಿನವಾದ ದ್ವೀಪಕ್ಕೆ ಹೋಗುವುದು ಶ್ರಮದಾಯಕವಾದ ಕಾರಣ ದೂರದಲ್ಲಿಯೇ ನಿಂತು ಇದರ ನೋಟವನ್ನು ಆಸ್ವಾದಿಸಿ ಹೋಗುವವರು ಸಂಖ್ಯೆಯೇ ದೊಡ್ಡದು.

ಮೋಡಗಳ ಹೊರೆ ಹೊತ್ತಿರುವ ಈ ಲಿಟ್ಲಾ ಡೆಮುನ್ ದ್ವೀಪವಿರುವುದು ಡೆನ್ಮಾರ್ಕಿನಲ್ಲಿ. ಅಲ್ಲಿರುವ 18 ಪ್ರಮುಖ ದ್ವೀಪಗಳಲ್ಲಿ ಇದು ಚಿಕ್ಕದು.ಸುವಾರೊ ಮತ್ತು ಸ್ಟೋರಾ ಎಂಬ ದ್ವೀಪಗಳ ನಡುವೆ ಇರುವ ಈ ಲಿಟ್ಲಾ ಡೆಮುನ್ ದ್ವೀಪ 250 ಚದರ ಎಕರೆಗಳಿಗಿಂತಲೂ ಸಣ್ಣದು. ಇದರಲ್ಲಿರುವ ಪರ್ವತದ ಮೇಲಿಂದ ಸದಾ ಕಾಣುವ ಚಪ್ಪರದಂತಿರುವ ಮೋಡಗಳಿಗೆ ವೈಜ್ಞಾನಿಕವಾಗಿ ‘ಲೆಂಟಿಕ್ಯೂಲರ್’ ಮೋಡಗಳೆಂದು ಕರೆಯುತ್ತಾರೆ. ಕ್ಯಾಮರಾದ ಲೆನ್ಸಿನಂತೆ ಅವು ಕಾಣಿಸುತ್ತವೆ. ಈ ಪರ್ವತದ ಹೆಸರಿಗೆ ‘ಜೋಡಿ ಕೊರಳಿನ ಪರ್ವತ’ (ಸ್ಲೆಟನಿನ್) ಎಂಬ ಅರ್ಥವಿದೆಯಂತೆ.

ಖಾಸಗಿಯವರ  ಒಡೆತನ
ದ್ವೀಪದ ಮೂರನೆಯ ಒಂದು ಭಾಗ ಪೂರ್ಣವಾಗಿ ಬಂಡೆಗಳಿಂದ ತುಂಬಿದೆ. ಉಳಿದ ಭಾಗದಲ್ಲಿರುವುದೇ ಮೋಡ ಹೊತ್ತಿರುವ ಸ್ಲೆಟಿನಿನ್ ಪರ್ವತ. 13ನೆಯ ಶತಮಾನದಲ್ಲಿ ಉತ್ತರ ಯುರೋಪಿನಿಂದ ಇಲ್ಲಿಗೆ ಗಿಡ್ಡವಾದ ಕಪ್ಪು ಉಣ್ಣೆಯ ಕುರಿ ಜಾತಿಗಳನ್ನು ತಂದುಬಿಡಲಾಯಿತು. ಇಲ್ಲಿರುವ ಹಸುರನ್ನು ಮೇದು ಅವುಗಳ ಸಂತತಿ ಸಾವಿರಾರು ಸಂಖ್ಯೆಗೇರಿದೆ. ನಿರ್ಜನವಾಗಿರುವ ವಾತಾವರಣ ಅವುಗಳ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಶರತ್ಕಾಲ ಬಂದಾಗ ಮೀನುಗಾರಿಕಾ ದೋಣಿಗಳಲ್ಲಿ ಜನ ದ್ವೀಪಕ್ಕೆ ಬರುತ್ತಾರೆ. ಕುರಿಗಳ ವಾಸಸ್ಥಾನದ ಬಳಿ ಹಗ್ಗದ ಉರುಳುಗಳನ್ನು ಎಸೆಯುತ್ತಾರೆ. ಅವುಗಳ ಕಾಲುಗಳು ಈ ಉರುಳಿನಲ್ಲಿ ಸಿಲುಕಿದಾಗ ಸುಲಭವಾಗಿ ಹಿಡಿದು ಹೋಗಿ ಮಾಂಸಾಹಾರಕ್ಕೆ ಬಳಸುತ್ತಾರೆ.

Advertisement

ಒಂದು ದೋಣಿಯಲ್ಲಿ ಹದಿನೈದು ಕುರಿಗಳನ್ನು ಸಾಗಿಸಬಹುದು.ಕುರಿ ಹಿಡಿಯುವವರು ಬಿಟ್ಟು ಹೋದ ಹಗ್ಗಗಳನ್ನು ಉಪಯೋಗಿಸಿ ದ್ವೀಪದ ವೀಕ್ಷಣೆಗೆ ಬರುವ ಪ್ರವಾಸಿಗರು ದುರ್ಗಮವಾದ ಪರ್ವತವನ್ನು ಏರುತ್ತಾರೆ, ಬಿಳಿಯ ಮೋಡದ ಹಂದರವನ್ನು ಕೈಯಲ್ಲಿ ಹಿಡಿಯಲು ಮುಂದಾಗುತ್ತಾರೆ.

ಕಡಲು ಹಕ್ಕಿಗಳ ವಾಸ
ದ್ವೀಪ ಒಂದು ಪಕ್ಷಿಧಾಮವೆಂಬ ಖ್ಯಾತಿಯನ್ನೂ ಪಡೆದಿದೆ. ಯುರೋಪಿಯನ್ ಪೆಟ್ರೆಲ್ಸ್ ಮತ್ತು ಅಟ್ಲಾಂಟಿಕ್ ಪಫಿನ್ಸ್ ಜಾತಿಯ ಸಾವಿರಾರು ಕಡಲು ಹಕ್ಕಿಗಳನ್ನು ನೋಡುವ ಅಪೂರ್ವ ಅವಕಾಶವೂ ಇಲ್ಲಿದೆ.ಬಹು ಹಿಂದೆ ರಾಜ ಬ್ರೆಸ್ಟುರ್ ಮತ್ತು ಗೊಟಿಸ್ಕೆಗ್ಜರ್ ಎಂಬಿಬ್ಬರ ನಡುವೆ ಲಿಟ್ಲಾ ಡೆಮುನ್ ದ್ವೀಪದಲ್ಲಿ ಯುದ್ಧ ನಡೆದ ದಾಖಲೆಗಳಿವೆ. ಡ್ಯಾನಿಷ್ ಸಾಮ್ರಾಜ್ಯಕ್ಕೆ ಸೇರಿದ ದ್ವೀಪವನ್ನು 1852 ರಲ್ಲಿ 9640 ಡಿಕ್ ಬೆಲೆಗೆ ಹರಾಜು ಹಾಕಲಾಯಿತು.ಖಾಸಗಿಯವರು ಅದನ್ನು ಕೊಂಡುಕೊಂಡಿದ್ದರು. ಸ್ವಲ್ಪ ಸಮಯ ಇದೊಂದು ಮಾರಾಟ ಕೇಂದ್ರವಾಗಿ ಬಳಕೆಯಲ್ಲಿತ್ತು. ಬೇರೆಯವರು ಬಾಡಿಗೆಗೂ ಪಡೆದು ಬಳಸಿಕೊಂಡಿದ್ದರು. ಈಗಲೂ ಅದರ ಒಡೆತನ ಖಾಸಗಿಯವರದ್ದು. ಆದರೆ ದ್ವೀಪ ಕಡಿದಾಗಿರುವುದರಿಂದ ಜನ ನೆಲೆಸಲು ಅಲ್ಲಿ ಆಸ್ಪದವಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next