ಮೈಸೂರು: ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತವನ್ನು ಕಂಡು ಬೇಸತ್ತಿರುವ ರಾಜ್ಯದ ಜನತೆ ಬದಲಾವಣೆ ತರಬೇಕೆಂದು ಬಯಸಿದ್ದು, ಹೀಗಾಗಿ ಮುಂದೆ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆಂದು ಆಗಮಿಸಿದ ಸಂದರ್ಭದಲ್ಲಿ ಎನ್.ಆರ್.ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರಾಹುಲ್‌ಗಾಂಧಿ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಾರೆ, ಆದರೆ ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಮಾಡಲು ನೀವು ಅಧಿಕಾರದಲ್ಲೇ ಇರೋದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ನಾವು ಇಡೀ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಇದರಲ್ಲಿ ಯಾವುದೇ ಸಂದೇಹವಿಲ್ಲ. ಎನ್.ಆರ್.ಕ್ಷೇತ್ರದಲ್ಲಿ ಅಧಿಕಾರ ಮದದಿಂದ ಮೆರೆಯುತ್ತಿರುವ ತನ್ವೀರ್‌ನನ್ನು ಹೊರಗಟ್ಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ತನ್ವೀರ್ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.
ಇದೇ ವೇಳೆ ಬಿಜೆಪಿ ಜತೆಗೆ ಮೈತ್ರಿಗೆ ಮುಂದಾದರೆ ಕುಮಾರಸ್ವಾಮಿ ಅವರನ್ನು ಮನೆಯಿಂದ ಹೊರಹಾಕುತ್ತೇನೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ನಮಗೆ ಸಂಪೂರ್ಣ ಬಹುಮತ ಸಿಗುವುದು ಶತಸಿದ್ಧ. ನಾನು ಮೇ 18ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ, ಅನುಮಾನ ಬೇಡ.
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ