ಜೇವರ್ಗಿ: ಪಟ್ಟಣದ 17ನೇ ಶತಮಾನದ ಶ್ರೇಷ್ಟ ವಚನಕಾರ ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಪೀಠಾಧಿಪತಿ ವಿಷಯಕ್ಕೆ ಸಂಬಂಧಿ ಸಿದಂತೆ ಸೋಮವಾರ ಸಂಜೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಶ್ರೀಮಠದ ಟ್ರಸ್ಟ್ ಕಮಿಟಿ ಗೌರವಾಧ್ಯಕ್ಷನ ಮೇಲೆ ಹಲ್ಲೆ ನಡೆದ ಬಗ್ಗೆ ವರದಿಯಾಗಿದೆ.
ಟ್ರಸ್ಟ್ ಅಧ್ಯಕ್ಷ ಷಣ್ಮುಖಪ್ಪ ಹಿರೇಗೌಡ ಗಾಯಗೊಂಡಿದ್ದು, ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 15 ದಿನಗಳಿಂದ ಭಕ್ತರ ಒಂದು ಗುಂಪು ಟ್ರಸ್ಟ್ ಕಮಿಟಿ ಅನುಮತಿ ಇಲ್ಲದೇ ಮಠದಲ್ಲಿ ಪುರಾಣ ಕಾರ್ಯಕ್ರಮ ಆಯೋಜಿಸಿದೆ.
ಸೋಮವಾರ ನಾಲವಾರದ ಡಾ| ಸಿದ್ದತೋಟೇಂದ್ರ ಶಿವಾಚಾರ್ಯರ ಹಾಗೂ ತಾಂಬಾಳದ ವಿಜಯಕುಮಾರ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ಮಠಕ್ಕೆ ಕರೆತಂದು ಉಚ್ಚಾಯ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಏಪ್ರಿಲ್ 24ರಿಂದ ಮಠದ ಟ್ರಸ್ಟ್ ಕಮಿಟಿ ಸದಸ್ಯರು, ಷಣ್ಮುಖ ಶಿವಯೋಗಿ ಮಠಕ್ಕೆ ಕ್ರಿಮಿನಲ್ ಕೇಸು ಹೊಂದಿರುವ ತಾಂಬಾಳದ ವಿಜಯಕುಮಾರ ಸ್ವಾಮೀಜಿ ಎಂಬುವರು ಪಟ್ಟಣದಲ್ಲಿ ಒಂದು ಗುಂಪು ಕಟ್ಟಿಕೊಂಡು ಪೀಠಾಧಿಪತಿಯಾಗಲು ಯತ್ನಿಸುತ್ತಿದ್ದಾರೆ.
ಅವರ ಮೇಲೆ 50 ಲಕ್ಷ ರೂ.ವಂಚನೆ ಹಾಗೂ ಇತರೆ ಹಲವಾರು ಕ್ರಿಮಿನಲ್ ಕೇಸುಗಳು ಇರುವುದರಿಂದ ಮಠಕ್ಕೆ ಬರಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಇದರ ನಡುವೆಯೂ ಸೋಮವಾರ ಸಂಜೆ ಒಂದು ಗುಂಪು ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸ್ ಠಾಣೆ ಎದುರು ಎರಡೂ ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಗಿದೆ. ಘಟನೆ ಅರಿತ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದೋಬಸ್ತ್: ಷಣ್ಮುಖ ಶಿವಯೋಗಿಗಳ ಮಠದ ವಿವಾದ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಮಂಗಳವಾರ ರಥೋತ್ಸವ ನಡೆಯುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ತಿಳಿಸಿದ್ದಾರೆ.