Advertisement

ಕುಂಭದ್ರೋಣ ಮಳೆಗೆ ತತ್ತರಿಸಿದ ದಾವಣಗೆರೆ ನಗರ

04:58 PM Sep 26, 2017 | Team Udayavani |

ದಾವಣಗೆರೆ: ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವ 3 ಗಂಟೆ ವರೆಗೆ ಇಡೀ ಜಿಲ್ಲೆಯಲ್ಲಿ 90 ಮಿ.ಮೀ ಮಳೆ ಸುರಿದಿದೆ. ಎಡೆಬಿಡದೇ ಸುರಿದ ಕುಂಭದ್ರೋಣ ಮಳೆಗೆ ನಗರದ ತಗ್ಗು ಪ್ರದೇಶಗಳೆಲ್ಲಾ ಜಲಾವೃತಗೊಂಡು ಜನ ಜೀವನ ಅಸ್ತವ್ಯವಸ್ಥಗೊಂಡಿದೆ. ಸುಮಾರು 1000 ಮನೆಗಳು ಹಾನಿಗೊಳಗಾಗಿವೆ.

Advertisement

ಯಾವುದೇ ಜೀವ ಹಾನಿಯಾಗಿಲ್ಲ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸಮರೋಪಾದಿಯಲ್ಲಿ ಕೆಲಸ ಕೈಗೊಂಡಿದ್ದಾರೆ. ಎರಡು ಕಡೆಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ, ರಾತ್ರಿಯಿಡೀ ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ನೆರವು ಒದಗಿಸಿದರು.

ಮಳೆಯಿಂದಾಗಿ ಸಂಪೂರ್ಣ ಸಂತ್ರಸ್ತರಾದವರಿಗಾಗಿ ಭಾರತ್‌ ಕಾಲೋನಿ, ಚಿಕ್ಕನಹಳ್ಳಿ ಬೆಂಕಿನಗರದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಬೆಂಕಿನಗರ ನಿವಾಸಿಗಳಿಗೆ ಎಪಿಎಂಸಿಯ ಗೋದಾಮಿನಲ್ಲಿ ಆಶ್ರಯ ಒದಗಿಸಲಾಗಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ, ಶಿವಕುಮಾರ ಸ್ವಾಮಿ ಬಡಾವಣೆ, ಬಾಪೂಜಿ ಆಸ್ಪತ್ರೆ, ಎಂಸಿ ಕಾಲೋನಿ ಬಿ ಬ್ಲಾಕ್‌, ನೀಲಮ್ಮನ ತೋಟ, ಎಸ್‌ಪಿಎಸ್‌ ನಗರ, ಚೌಡಾಂಬಿಕ ನಗರ, ಜಾಲಿ ನಗರ, ಆವರಗೆರೆ ದನುವಿನ ಓಣಿ, ಚಿಕ್ಕನಹಳ್ಳಿ ಹಳ್ಳದ ಪಕ್ಕದ ಬೆಂಕಿ ನಗರ, ಎಸ್‌. ಎಂ. ಕೃಷ್ಣ ನಗರ, ಭಾರತ್‌ ಕಾಲೋನಿ, ಹೊಳೆಹೊನ್ನೂರು ತೋಟದ ಮನೆಗಳಿಗೆ ನೀರು ನುಗ್ಗಿದೆ.

ಇದೇ ರೀತಿ ರಾಜ್ಯ ಸಾರಿಗೆ ಬಸ್‌ ನಿಲ್ದಾಣ, ಅಗ್ನಿಶಾಮಕ ದಳದ ಕಚೇರಿ ಸಂಪೂರ್ಣ ಜಲಾವೃತಗೊಂಡಿದ್ದವು. ಅಗ್ನಿಶಾಮಕ ದಳದ ಕಚೇರಿ ಆವರಣದಲ್ಲಿ ತುಂಬಿದ್ದ ನೀರು ಹೊರ ತೆಗೆಯಲು ಸೋಮವಾರ ಸಂಜೆಯವರೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯನಿರತವಾಗಿತ್ತು. ಈ ಕಾರ್ಯಕ್ಕೆ ಹಾವೇರಿಯಿಂದ ಸಿಬ್ಬಂದಿ ಕರೆಸಿ, ಮೋಟಾರ್‌ಪಂಪ್‌ ಬಳಸಿ ನೀರು ಹೊರಹಾಕಲಾಯಿತು. 

Advertisement

ಎಪಿಎಂಸಿ ಪಕ್ಕ, ಚಿಕ್ಕನಹಳ್ಳಿ ಹಳ್ಳದ ದಡದ ಮೇಲಿನ ಬೆಂಕಿನಗರವಂತೂ ಸಂಪೂರ್ಣ ಜಲಾವೃತವಾಗಿತ್ತು. ರಾತ್ರಿಯೇ ಇಲ್ಲಿನ ಜನ ತಮ್ಮ ಮನೆ ಬಿಟ್ಟು ಎಪಿಎಂಸಿಯ ಗೋದಾಮಿನಲ್ಲಿ ಆಶ್ರಯ ಪಡೆದರು. 

ಇನ್ನು ಭಾರತ್‌ ಕಾಲೋನಿ ಸ್ಥಿತಿ ಸಹ ಇದೇ ಆಗಿತ್ತು. ಇನ್ನು ಆಶ್ರಯ ಬಡಾವಣೆಗಳಲ್ಲಿನ ಸ್ಥಿತಿಯಂತೂ ಹೇಳತೀರದಾಗಿತ್ತು. ಮೊದಲೇ ಕಪ್ಪು ಮಣ್ಣಿನ ನೆಲವಾಗಿದ್ದರಿಂದ ರಸ್ತೆಗಳು ಪೂರ್ತಿ ಗದ್ದೆಯಂತೆ ಆಗಿದ್ದವು. ಬಹುತೇಕ ಮನೆಗಳಿಗೆ ನೀರು ನುಗ್ಗಿತ್ತು. ಕೆಲ ಮನೆಗಳಲ್ಲಿ 3 ಅಡಿಯಷ್ಟು ನೀರು ನಿಂತಿದ್ದು, ಮನೆಯವರೆಲ್ಲಾ ಸೇರಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಳೆಯಿಂದಾಗಿ ಶಾಮನೂರು ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್‌ ದಾಸ್ತಾನು ಮಾಡಿದ್ದ ಶೆಡ್‌ ಕುಸಿದು ಬಿದ್ದು 100 ಚೀಲ ಸಿಮೆಂಟ್‌ ನೀರು ಪಾಲಾಗಿದೆ. ಎಂಸಿಸಿ ಬಿ ಬ್ಲಾಕ್‌ನ ಪವಾರ್‌ ಹೋಟೆಲ್‌ ಬಳಿ ಯುಜಿಡಿಗೆ ತೆಗೆದಿದ್ದ ಗುಂಡಿಯಲ್ಲಿ ಎರಡು ಬೈಕ್‌ಗಳು ಬಿದ್ದು, ಎರಡೂ ಬೈಕ್‌ನಲ್ಲಿ ಸವಾರಿಮಾಡುತ್ತಿದ್ದ ಐವರು ಸಣ್ಣಪುಟ್ಟ ಗಾಯಕ್ಕೆ ತುತ್ತಾದರು.

ಇನ್ನು ಕೆಎಸ್‌ಆರ್‌ಟಿಸಿ ಬೈಕ್‌ ನಿಲ್ದಾಣದಲ್ಲಿದ್ದ ಪ್ರಯಾಣಿಕರ ದ್ವಿಚಕ್ರ ವಾಹನಗಳು ಸಂಪೂರ್ಣ ಮುಳುಗಿದ್ದರಿಂದ ಬೆಳಿಗ್ಗೆ ವಾಹನಗಳನ್ನು ಅಲ್ಲಿಂದ ಹೊರ ತೆಗೆಯುವುದೇ ಸಾಹಸವಾಗಿತ್ತು. ಹೊರ ತೆಗೆದ ವಾಹನಗಳನ್ನು ಗ್ಯಾರೇಜ್‌ವರೆಗೂ ತಳ್ಳಿಕೊಂಡೇ ಹೋದ ಮಾಲಿಕರು 300-400 ರೂ. ತೆತ್ತು ದುರಸ್ತಿ ಮಾಡಿಸಿಕೊಂಡು ತೆರಳಿದರು. ಮೆಕ್ಯಾನಿಕ್‌ಗಳು ದಿನವಿಡೀ ದಿಚಕ್ರ ವಾಹನಗಳ ದುರಸ್ತಿಯಲ್ಲಿ ನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next