ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾನವರ ಬದಲಾಗಿ ಯಂತ್ರ ಮಾನವರು ಬಂದರೆ ಹೇಗಿರುತ್ತದೆ? ಈಗ ಅದೂ ನಿಜವಾಗಿದೆ. ಭಾರತ ಸರ್ಕಾರ ಸ್ವಾಮ್ಯದ ಕೆನರಾ ಬ್ಯಾಂಕ್‌ನ ಎರಡು ಶಾಖೆಗಳಲ್ಲಿ ಇಂಥ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಈ ಯಂತ್ರಮಾನವರಿಗೆ ಹ್ಯೂಮನಾಯ್ಡ ರೋಬೋ (ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವರು)
ಎರಡು ಹ್ಯೂಮನಾಯ್ಡ ರೋಬೋಗಳ ಪೈಕಿ ಒಂದಕ್ಕೆ “ಮಿತ್ರ’ ಎಂದು ಹೆಸರಿಸಲಾಗಿದ್ದು, ಅದನ್ನು ಕೆನರಾ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ನಿಯೋಜಿಸಲಾಗಿದೆ. ಅದನ್ನು ಬೆಂಗಳೂರು ಮೂಲದ ಇನ್ವೆಂಟೊ ರೋಬೋಟಿಕ್ಸ್ ಅಭಿವೃದ್ಧಿಪಡಿಸಿದೆ. ಈ ರೋಬೋ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(ಎಐ) ಕ್ಷೇತ್ರದಲ್ಲಿ ಭಾರತ ಮತ್ತು ಚೀನಾ ನಡುವೆ ಸಹಕಾರ ವೃದ್ಧಿಯಾಗಲು ಸೇತುವಾಗಲಿದೆ. ಮತ್ತೂಂದು ಹ್ಯೂಮನಾಯ್ಡ ಹೆಸರು ಕ್ಯಾಂಡಿ. ಇದನ್ನು ಜಪಾನ್‌ನ ಸಾಫ್ಟ್ ಬ್ಯಾಂಕಿಂಗ್ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗಿದೆ. ಈ ಬಗ್ಗೆ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಮಿತ್ರದ ಕಾರ್ಯ ವೈಖರಿ: ಮಿತ್ರ ಗ್ರಾಹಕರನ್ನು ಕನ್ನಡದಲ್ಲಿಯೇ ಸ್ವಾಗತಿಸುತ್ತದೆ ಮತ್ತು ಜೆ ಸಿ ರಸ್ತೆಯಲ್ಲಿರುವ ಮುಖ್ಯ ಕಚೇರಿಯಲ್ಲಿ ಯಾವ ಕೆಲಸಕ್ಕೆ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂದು ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತದೆ. 4.5 ಅಡಿ ಎತ್ತರದ ಮಿತ್ರನನ್ನು ಮೇನಲ್ಲಿ ನಿಯೋಜಿಸಲಾಗಿತ್ತು. ಸದ್ಯ ಉನ್ನತ ಮಟ್ಟದ ತಂತ್ರಜ್ಞಾನ ಲಭ್ಯವಾಗಿರುವುದರಿಂದ ಮಿತ್ರನಿಗೆ ಸ್ವಲ್ಪ ಅಪ್‌ಡೇಟ್ ಮಾಡಲಾಗುತ್ತಿದೆ. ಹೀಗಾಗಿ ಅದು ಕಾರ್ಯವೆಸಗುತ್ತಿಲ್ಲ.
“ವಿಶಾಲವಾದ ಕಚೇರಿಯಲ್ಲಿ ಗ್ರಾಹಕರಿಗೆ ಮಾಗ್ರದರ್ಶನ ನೀಡುವಂತೆ “ಮಿತ್ರ’ನನ್ನು ಅಭಿವೃದ್ಧಿಪಡಿಸಲಾಗಿದೆ. ಸ್ವಾಗತಕಾರನ ಕೆಲಸವನ್ನೂ ಮಿತ್ರ ಮಾಡುತ್ತದೆ’ ಎನ್ನುತ್ತಾರೆ ಕೆನರಾ ಬ್ಯಾಂಕ್ ಮುಖ್ಯ ಶಾಖೆಯ ತಂತ್ರಜ್ಞಾನ ವ್ಯವಸ್ಥಾಪಕರಾದ ಬಾನು ಪ್ರಕಾಶ್. ಅಂದ ಹಾಗೆ ಇನ್ನೊಂದು ರೋಬೋನ ಹೆಸರು “ಕ್ಯಾಂಡಿ’. ಅದು ಎಂ.ಜಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕ ಸೇವೆ ಒದಗಿಸುತ್ತಿದೆ. ಇದು “ಮಿತ್ರ’ನಿಗಿಂತ ಸ್ವಲ್ಪ ಚಿಕ್ಕ ರೋಬೋ. ಅದನ್ನು ಜುಲೈ ತಿಂಗಳಲ್ಲಿ ನಿಯೋಜಿಸಲಾಯಿತು.
ಇದು ಗ್ರಾಹಕರ ಹಲವಾರು ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರ ನೀಡುತ್ತದೆ. “ಕ್ಯಾಂಡಿಯಲ್ಲಿ 2 ಮೋಡ್‌ಗಳಿವೆ. ಒಂದು ಬ್ಯಾಂಕಿಂಗ್ ಮೋಡ್ ಮತ್ತೂಂದು ನಾರ್ಮಲ್ ಮೋಡ್. ನಾರ್ಮಲ್ ಮೋಡ್‌ನಲ್ಲಿ ಕ್ಯಾಂಡಿ ಎಷ್ಟಾದರೂ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ನಾವು ಅದನ್ನು ಬ್ಯಾಂಕಿಂಗ್ ಮೋಡಲ್ಲಿ ಇರಿಸಿರುತ್ತೇವೆ. ಇಲ್ಲಿ ಅದು ಕೇವಲ 215 ಮೊದಲೇ ಸಿದ್ಧಪಡಿಸಲಾಗಿರುವ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಠೇವಣಿ ಎಲ್ಲಿ ಇರಿಸಬೇಕು ಎಂಬುದು ಬಹಳ ಸಾರಿ ಕೇಳಲ್ಪಡುವ ಪ್ರಶ್ನೆ’ ಎಂದು ಎಂ.ಜಿ. ರೋಡ್ ಶಾಖೆಯ ಅಧಿಕಾರಿ ಶ್ವೇತಾ ಹೇಳುತ್ತಾರೆ.
“ಕೆನರಾ ಬ್ಯಾಂಕನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ “ಮಿತ’ ಮತ್ತು “ಕ್ಯಾಂಡಿ’ ಯನ್ನು ಪ್ರಾಯೋಗಿಕವಾಗಿ ಬಳಸಿದ್ದೇವೆ. ಇವೆರಡೂ ಬಹಳ ಅನುಕೂಲಕಾರಿಯಾಗಿವೆ. ಶೀಘ್ರದಲ್ಲೇ ಬ್ಯಾಂಕ್‌ನ 50 ಶಾಖೆಗಳಲ್ಲಿ ಈ ವ್ಯವಸ್ಥೆ ವಿಸ್ತರಿಸಲು ಯೋಜನೆ ನಡೆಸುತ್ತಿದ್ದೇವೆ’ ಎಂದು ಮಾರ್ಕೆಟಿಂಗ್ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದರು. ಮಿತ್ರ ಬೆಲೆ 3 ಲಕ್ಷ ರೂ. ಇದ್ದರೆ, ಕ್ಯಾಂಡಿ ಬೆಲೆ 10 ಲಕ್ಷ ರೂ. ಇದೆ.
ಇನ್ವೆಂಟೊ ರೊಬೋಟಿಕ್ಸ್: ಇನ್ವೆಂಟೊ ರೊಬೋಟಿಕ್ಸ್ ಬೆಂಗಳೂರು ಮೂಲದ ರೋಬೋಟಿಕ್ಸ್ ಸಂಸ್ಥೆ. ಇದರ ಸಂಸ್ಥಾಪಕ ಬಾಲಾಜಿ ವಿಶ್ವನಾಥನ್ ಹೇಳುವಂತೆ, ರೊಬೋಗಳ ಕಂಪ್ಯೂಟರ್ ಆಧರಿತ ವಿನ್ಯಾಸ ಮತ್ತು ತಂತ್ರಜ್ಞಾನ ಅಭಿವೃದ್ಧಿ ಭಾರತದಲ್ಲೇ ನಡೆಯುತ್ತದೆ. ರೊಬೋದ ಪ್ಲಾಸ್ಟಿಕ್ ದೇಹ ಮತ್ತು ಸರ್ಕ್ನೂಟ್ ಬೋರ್ಡ್ ಮತ್ತು ಮೋಟರ್ ಕಂಟ್ರೋಲ್‌ಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುತ್ತದೆ.
-4.5 ಅಡಿ- ಮಿತ್ರನ ಎತ್ತರ
-50 ಶಾಖೆ- ರೋಬೋ ಪ್ರವೇಶಗೊಳ್ಳಲಿರುವ ಶಾಖೆಗಳು
-3 ಲಕ್ಷ ರೂ- ಮಿತ್ರನ ಬೆಲೆ
-10 ಲಕ್ಷ ರೂ- ಕ್ಯಾಂಡಿಯ ಬೆಲೆ