ಬೆಂಗಳೂರು: ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಆದರೆ, ಚೌಕಿದಾರ್ ಯಾವುದೇ ತನಿಖೆ ಕೈಗೊಳ್ಳುತ್ತಿಲ್ಲ. ಆ ಲೂಟಿಯಲ್ಲಿ ಚೌಕಿದಾರರ ಪಾಲು ಎಷ್ಟು ಎಂದು ಕೇಳಬೇಕಾಗುತ್ತದೆ ಎಂದು ಎಐಸಿಸಿ ವಕ್ತಾರೆ ಖುಷ್ಬು ಸುಂದರ್ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಾತೆತ್ತಿದರೆ ಚೌಕಿದಾರ್ ಎಂದು ಹೇಳುತ್ತಿದ್ದಾರೆ.ಆದರೆ, ಅವರ ಕಣ್ಣೆದುರೇ ಮಲ್ಯ, ನೀರವ್ ಮೋದಿಯಂತ ಉದ್ಯಮಿಗಳು ಸಾವಿರಾರು ಕೋಟಿ ರೂ. ಲೂಟಿ ಮಾಡಿಕೊಂಡು ಹೋಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸದೇ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಯಾರೂ ಪ್ರಶ್ನಿಸದಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ಬಿಜೆಪಿ ಗೇಮ್ ಚೇಂಜರ್ ಆಗಿ ಕೆಲಸ ಮಾಡಿಲ್ಲ. ಬರಿ ನೇಮ್ ಚೇಂಜರ್ ಆಗಿದೆ. ಐದು ವರ್ಷದಲ್ಲಿ ತನ್ನದೇ ಆದ ಒಂದೇ ಒಂದು ಯೋಜನೆಯನ್ನು ಜಾರಿ ಮಾಡಲಿಲ್ಲ.
ಬಿಜೆಪಿಯ ಹೊಸ ಪ್ರಣಾಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಘೋಷಿಸಿರುವ ನ್ಯಾಯ್ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹಿಂದೆ ಯುಪಿಎ ಅವಧಿಯಲ್ಲಿ ನರೇಗಾ ಯೋಜನೆ ಜಾರಿಗೊಳಿಸಿದಾಗಲೂ ನರೇಂದ್ರ ಮೋದಿ ವಿರೋಧಿಸಿದ್ದರು.
ಆದರೆ, ಕಾಂಗ್ರೆಸ್ ಅದನ್ನು ಯಶಸ್ವಿಗೊಳಿಸಿತು. ಈಗಲೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತದೆ. ಮಹಿಳಾ ಮೀಸಲಾತಿ, ಉದ್ಯೋಗ ಸೃಷ್ಟಿ, ಬಡವರಿಗೆ ಕನಿಷ್ಠ ಆದಾಯ, ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತರುತ್ತದೆ ಎಂದು ಹೇಳಿದರು.
ಮೋದಿ ಸರ್ಕಾರ ಸ್ಟಾರ್ಟ್‌ಅಪ್, ಸ್ಟಾಂಡ್‌ಅಪ್, ಅವೈಜ್ಞಾನಿಕ ಜಿಎಸ್‌ಟಿ ಜಾರಿ, ನೋಟು ಅಮಾನ್ಯದಂತಹ ಯೋಜನೆಗಳನ್ನು ಜಾರಿಗೊಳಿಸಿ ಸಾಮಾನ್ಯ ಜನರು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದರು. ಕಳೆದ ಅವಧಿಯಲ್ಲಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದರು. ಮತ್ತೂಮ್ಮೆ ಬಿಜೆಪಿಯನ್ನು ಜನರು ಅಧಿಕಾರಕ್ಕೆ ತರಲು ಬಯಸುವುದಿಲ್ಲ ಎಂದು ಹೇಳಿದರು.
ರಫೇಲ್ ಡೀಲ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ದೇಶವನ್ನು ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಿರುವ ಮೋದಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.