ಬೆಂಗಳೂರು: ಕಳೆದ ಏಳು ದಿನಗಳ ಹಿಂದೆ ದುಷ್ಕರ್ಮಿಯಿಂದ ಅಪಹರಣಕ್ಕೊಳಗಾದ ನಮ್ರತಾ (7) ನಮಿತ್ (5) ತಿರುಪತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ದುಷ್ಕರ್ಮಿಯಿಂದ ರಕ್ಷಿಸಿರುವ ಸಂಜಯ್‌ನಗರ ಠಾಣೆ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ಮಕ್ಕಳಿಗೆ ಸಿಹಿ ತಿಂಡಿ ಕೊಡಿಸುವ ನೆಪ ಹೇಳಿ ಅಪಹರಿಸಿದ್ದ ಆರೋಪಿ ವಿನೋದ್ (24) ಪೊಲೀಸರ ಬೆನ್ನುಬಿದ್ದಿದ ಸುದ್ದಿ ತಿಳಿದ ಕೂಡಲೇ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಚಿಂದಿ ಆಯುವ ಆರೋಪಿ ವಿನೋದ್ ಅ.25ರ ರಾತ್ರಿ ಭೂಪಸಂದ್ರ ಮುಖ್ಯರಸ್ತೆಯಿಂದ ಇಬ್ಬರೂ ಮಕ್ಕಳನ್ನು ಅಪಹರಿಸಿದ್ದ, ಬಳಿಕ ಮಕ್ಕಳಿಗೆ ನಿಮ್ಮ ಅಪ್ಪ-ಅಮ್ಮ ತಿರುಪತಿಗೆ ಹೋಗಿದ್ದಾರೆ ಎಂದು ನಂಬಿಸಿ ತಿರುಪತಿ ಹೋಗಿ ಬರೋಣ ಎಂದು ಹೇಳಿ ಯಾಮಾರಿಸಿದ್ದ. ಅಲ್ಲಿ ಪರಿಚಯಸ್ಥ ವೆಂಕಟೇಶ್ ಎಂಬುವವರ ಬಳಿ ನನ್ನ ಮಕ್ಕಳಿಬ್ಬರಿಗೂ ಕೆಲಸ ಕೊಡಿ ಎಂದು ಕೇಳಿದ್ದ ಎಂದು ಪೊಲೀಸರು ತಿಳಿಸಿದರು.
ವಂಡರ್‌ಗಣ್ಣು ನೀಡಿತು ಆರೋಪಿ ಸುಳಿವು!: ಈ ಮಧ್ಯೆ ಮಕ್ಕಳ ಸುಳಿವು ಪತ್ತೆಗೆ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಭೂಪಸಂದ್ರ, ಗೆದ್ದಲಹಳ್ಳಿ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಕೆಲವೆಡೆ ಮಾಹಿತಿ ಕಲೆಹಾಕಿ, ಸಾರ್ವಜನಿಕರು ಆಟೋ ಚಾಲಕರೂ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು.
ಮತ್ತೂಂದೆಡೆ ಆರೋಪಿ ಮಕ್ಕಳಿಬ್ಬರನ್ನೂ ತಿರುಪತಿಯಲ್ಲಿ ಕೆಲಸಕ್ಕೆ ಸೇರಿಸಲು ವಿಫಲನಾಗಿದ್ದು ಅಲ್ಲಿಯೇ ಉಳಿದುಕೊಂಡಿದ್ದ. ಕೆಲವರ್ಷಗಳ ಹಿಂದೆ ಬೆಂಗಳೂರಲ್ಲಿ ನೆಲೆಸಿದ್ದ ವೆಂಕಟೇಶ್ ಬುಧವಾರ ರಾತ್ರಿ ಬೆಂಗಳೂರಿನ ಸ್ನೇಹಿತ ನವೀನ್‌ಗೆ ಕರೆ ಮಾಡಿದ್ದ ವೇಳೆ ವಿನೋದ್ ಎಂಬ ವ್ಯಕ್ತಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದಿದ್ದು, ಹೆಬ್ಟಾಳ ಎಂದು ವಿಳಾಸ ಹೇಳುತ್ತಿದ್ದಾರೆ ಎಂದಿದ್ದಾನೆ. ಈ ವಿಷಯ ತಿಳಿದ ಕೂಡಲೇ ನವೀನ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ.
ಅದರಂತೆ ಪೊಲೀಸರು ವೆಂಕಟೇಶ್ ಜೊತೆ ಮಾತನಾಡಿ ಕರೆದುಕೊಂಡು ಬಂದ ವ್ಯಕ್ತಿ ಹೇಗಿದ್ದ ಎಂದು ಕೇಳಿದ್ದು, ಆತನಿಗೆ ವಂಡರ್‌ಗಣ್ಣಿದೆ ಎಂದು ಮುಖಚಹರೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯ ಫೋಟೋವನ್ನು ವೆಂಕಟೇಶ್ ಅವರಿಂದ ವಾಟ್ಸಾಪ್ ಮಾಡಿಕೊಂಡಿದ್ದಾರೆ. ಅಲ್ಲದೇ ಮಕ್ಕಳು ಅಲ್ಲಿಯೇ ಇರುವುದು ಖಚಿತವಾಗಿದ್ದು, ಕೂಡಲೇ ಸಿಬ್ಬಂದಿ ಹಾಗೂ ಮಕ್ಕಳ ಪೋಷಕರನ್ನು ತಿರುಪತಿಗೆ ಕಳುಹಿಸಿ ಮಕ್ಕಳನ್ನು ಕರೆತರಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿ ವಿನೋದ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಯತ್ನ ಪ್ರಕರಣವಿದೆ. ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ ಎಂದು ತಿಳಿದ ಕೂಡಲೇ ವಿನೋದ್ ಎಸ್ಕೇಪ್ ಆಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.