Advertisement

ನದಿ ದಾಟಲು ಮಕ್ಕಳಿಗೆ ಮನೆಯವರೇ ಆಸರೆ

10:59 AM Aug 22, 2022 | Team Udayavani |

ಹಾಲಾಡಿ: ಈ ಊರಲ್ಲಿ ಜೋರು ಮಳೆ ಬಂದರೆ ಇಡೀ ಊರಿಗೆ ದಿಗ್ಬಂಧನ ವಿಧಿಸಿದಂತೆ. ಇನ್ನು ನದಿ ದಾಟಲಾಗದೆ ಮಕ್ಕಳಿಗೆ ವಾರ ಪೂರ್ತಿ ರಜೆ ಮಾಡಬೇಕಾದ ಸ್ಥಿತಿ. ಮಳೆಗಾಲದಲ್ಲಿ ನದಿ ದಾಟಿ ಶಾಲೆಗೆ ಹೋಗುವ ಮಕ್ಕಳಿಗೆ ಮನೆಯವರೇ ಆಸರೆಯಾಗಿದ್ದಾರೆ.

Advertisement

ಇದು ಅಮಾಸೆಬೈಲು ಗ್ರಾಮದ ಎರಡನೇ ವಾರ್ಡಿನ ಬಳ್ಮನೆ ಸಮೀಪದ ಕುಡಿಸಾಲು – ಹಂದಿಮನೆ ಭಾಗದ ಜನ ನದಿ ದಾಟಲು ಪಡುವ ನಿತ್ಯದ ಪಡಿಪಾಟಿಲು.

ಮಳೆ ಜೋರಾದರೆ ಅಘೋಷಿತ ರಜೆ…

ಕುಡಿಸಾಲು – ಹಂದಿಮನೆ ಭಾಗ ದವರು ಶಾಲೆ ಅಥವಾ ಅಂಗನವಾಡಿಗೆ ಸುಮಾರು 2 ಕಿ.ಮೀ. ದೂರದ ಬಳ್ಮನೆಗೆ ಬರಬೇಕು. ಇನ್ನು ಪೇಟೆಗೆ ಬರಬೇಕಾದರೆ ಅಮಾಸೆಬೈಲಿಗೆ ಬರಬೇಕು.

ಊರಿನಿಂದ ಆಚೆ ಬರಬೇಕಾದರೆ ನದಿ ದಾಟಿಕೊಂಡೇ ಬರಬೇಕು. ಆದರೆ ನದಿಗೆ ಸೇತುವೆಯಿಲ್ಲ. ಮಳೆಗಾಲದಲ್ಲಿ ಸಣ್ಣ – ಸಣ್ಣ ಮಕ್ಕಳನ್ನು ತಂದೆ- ತಾಯಿ ಅಥವಾ ಮನೆಯವರು ಎತ್ತಿಕೊಂಡು ನದಿ ದಾಟಿಸಿ, ಬಿಡಬೇಕಾದ ಪರಿಸ್ಥಿತಿಯಿದೆ. ಮಳೆ ಜೋರಾದರೆ ನದಿ ತುಂಬಿ ಹರಿಯುತ್ತಿದ್ದು, ದೊಡ್ಡವರು ದಾಟುವುದು ಕಷ್ಟ. ಆಗೆಲ್ಲ ಇಲ್ಲಿನ ಮಕ್ಕಳಿಗೆ ಅಘೋಷಿತ ರಜೆ. ಮಳೆಗಾಲದಲ್ಲಿ ಆಗಾಗ ಇಂತಹ ರಜೆಗಳು ಇಲ್ಲಿನ ಮಕ್ಕಳಿಗೆ ಖಾಯಂ. ಇನ್ನು ಮಳೆಗಾಲದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ದೇವರೇ ಕಾಪಾಡಬೇಕು. ತುಂಬಿ ಹರಿಯುವ ನದಿಯಲ್ಲಿ ವಾಹನ ಬರುವುದು ಕಷ್ಟ. ಅಲ್ಲಿಯವರೆಗೆ ಎತ್ತಿಕೊಂಡು ಬರಬೇಕಾದ ಸ್ಥಿತಿಯಿದೆ.

Advertisement

ಅನೇಕ ವರ್ಷದ ಬೇಡಿಕೆ

ಈ ಭಾಗದಲ್ಲಿ 7-8 ಮನೆಗಳಿದ್ದು, ಪ್ರತೀ ದಿನ 10 ಮಕ್ಕಳನ್ನು ಮನೆಯವರೇ ನದಿ ದಾಟಿಸುತ್ತಾರೆ. ಆದರೆ ಇಲ್ಲಿ ಸೇತುವೆಯಾದರೆ ಗುಳಿಗೆಬೈಲು ಸಹಿತ ಸುತ್ತಮುತ್ತಲಿನ ಊರಿಗೂ ಹತ್ತಿರವಾಗಲಿದೆ. ಈಗವರು ಪರ್ಯಾಯ ಮಾರ್ಗಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ಸೇತುವೆಯಾಗಬೇಕು ಎನ್ನುವುದು ಈ ಭಾಗದ ಜನರ ದಶಕಗಳಿಗೂ ಹೆಚ್ಚು ಕಾಲದ ಬೇಡಿಕೆ.

ಕೊಚ್ಚಿ ಹೋಗುವ ಕಾಲುಸಂಕ

ಊರವರೇ ಮರದ ದಿಮ್ಮಿಯಿಂದ ತಾತ್ಕಾಲಿಕವಾಗಿ ನದಿ ದಾಟಲು ಕಾಲು ಸಂಕ ನಿರ್ಮಿಸಿದರೂ ಭಾರೀ ಮಳೆಗೆ ತುಂಬಿ ಹರಿಯುವ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಅದಕ್ಕೆ ಈಗೀಗ ಕಾಲು ಸಂಕ ಹಾಕುವುದನ್ನೇ ಬಿಟ್ಟಿದ್ದಾರೆ ಊರವರು. ಮಕ್ಕಳಿಗೆ ಶಾಲೆಗೆ ಹೋಗಲು, ಊರವರಿಗೆ ಪೇಟೆಗೆ ಹೋಗಲು, ಕೆಲಸಕ್ಕೂ ಹೋಗಲು ಸೇತುವೆಯಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ ಎನ್ನುವುದು ಊರವರ ಒಕ್ಕೊರಲ ಬೇಡಿಕೆಯಾಗಿದೆ.

ಪ್ರಸ್ತಾವನೆ ಸಲ್ಲಿಕೆ: ನಾವು ಈ ಕುಡಿಸಾಲು – ಹಂದಿಮನೆ ಪರಿಸರದ ನದಿಗೆ ಸೇತುವೆಗಾಗಿ ಗ್ರಾ.ಪಂ.ನಿಂದ ನಿರ್ಣಯ ಮಾಡಿ ಜಿ.ಪಂ., ಶಾಸಕರಿಗೆ, ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದಾರೆ. ಮತ್ತೆ ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲಾಗುವುದು. –ಚಂದ್ರಶೇಖರ ಶೆಟ್ಟಿ, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next