ತೀರ್ಥಹಳ್ಳಿ: ಪೋಷಕರೆಲ್ಲ ನಿದ್ದೆಯಲ್ಲಿದ್ದಾಗ ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದ ಮಗು ಕಾಡಿನ ಹಾದಿ ಬದಿಯಲ್ಲೇ ರಾತ್ರಿ ಕಳೆದು ಪೊಲೀಸ್ ಠಾಣೆ ತಲುಪಿ, ಕೊನೆಗೆ ಪೋಷಕರ ಮಡಿಲು ಸೇರಿದೆ! ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಸಿನಿಮೀಯ ರೀತಿಯ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಐದು ವರ್ಷದ ಆನ್ವಿ ಯಾವುದೇ ಅಪಾಯವಿಲ್ಲದೆ ತಾಯಿಯ ಮಡಿಲು ಸೇರಿದೆ.
ನಡೆದಿದ್ದೇನು?: ಗುರುವಾರ ರಾತ್ರಿ 9.30ರ ಸಮಯ. ಕಾರೊಂದು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೊರಟಿತ್ತು. ಈ ವೇಳೆ, ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ತಲೆ ಕೆದರಿದ ರೀತಿಯಲ್ಲಿ ಅಳುತ್ತಾ ನಿಂತಿರುವುದನ್ನು ಕಾರು ಚಾಲಕ ಗಮನಿಸಿದ. ಆದರೆ, “ದೆವ್ವ’ವಿರಬಹುದು ಎಂಬ ಭಯದಲ್ಲಿ ಕಾರು ನಿಲ್ಲಿಸದೆ ಮುಂದೆ ಸಾಗಿದ್ದ. ಆದರೂ ಮಗು ಕಂಡು ಮರುಕಪಟ್ಟು ವಾಪಸ್ ಮಗುವಿನ ಬಳಿ ಬಂದ.
ರಸ್ತೆ ಬದಿಯಲ್ಲೇ ನಿಂತಿದ್ದ ಮಗುವನ್ನು ಕಾರಿನಲ್ಲಿದ್ದ ನಾಲ್ವರೂ ಮಾತನಾಡಿಸಿದರು. ಆದರೆ ಮಗು ಮಾತನಾಡಿಲ್ಲ. ಗಾಬರಿಗೊಂಡಿದ್ದ ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ನೇರ ಆಗುಂಬೆ ಪೋಲಿಸ್ ಠಾಣೆಗೆ ಕರೆ ತಂದು ಪೊಲೀಸರ ಸುಪರ್ದಿಗೆ ಒಪ್ಪಿಸಿದರು. ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೇ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ ಎಂದೇ ಪೊಲೀಸರು ಭಾವಿಸಿದ್ದರು. ಮಗುವಿನ ಪೋಷಕರ ಪತ್ತೆಗೆ ಮುಂದಾದಾಗ ಪೊಲೀಸರಿಗೆ ಮತ್ತೂಂದು ಶಾಕ್ ಎದುರಾಗಿತ್ತು..!
ಕಾರಿಂದ ಬಿತ್ತು ಮಗು!: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮೂಲದ ಬೀನು ಎಂಬುವರು ಕುಟುಂಬ ಸಮೇತ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದರು. ರಾತ್ರಿಯಾಗಿದ್ದರಿಂದ ಕಾರಿನಲ್ಲಿದ್ದ ಮಗುವಿನ ಪೋಷಕರೆಲ್ಲ ನಿದ್ರೆಗೆ ಜಾರಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹಿಂದಿನ ಬಾಗಿಲು ಓಪನ್ ಆಗಿದ್ದು, ಮಗು ಆನ್ವಿ ಘಾಟಿಯ ಏಳನೇ ಕ್ರಾಸ್‌ನಲ್ಲಿ ಕಾರಿನಿಂದ ಕೆಳಗೆ ಬಿದ್ದಿದೆ.
ನಿದ್ರೆಯಲ್ಲಿದ್ದವರಿಗೆ ಮಗು ಬಿದ್ದಿದ್ದು ಗಮನಕ್ಕೆ ಬಂದಿಲ್ಲ. ಘಾಟ್‌ನಲ್ಲಿ ವಾಹನ ನಿಧಾನಕ್ಕೆ ಸಾಗುತ್ತಿದ್ದುದರಿಂದ ಬಿದ್ದ ಮಗುವಿಗೂ ಯಾವುದೇ ಗಾಯವಾಗಿಲ್ಲ. ಆದರೆ, ಕಂಗಾಲಾದ ಮಗು ರಸ್ತೆ ಬದಿಯಲ್ಲೇ ನಿಂತಿದ್ದರೆ, ಮಾರ್ಗ ಮಧ್ಯೆ ಕೊಪ್ಪದ ಸಮೀಪ ಎಚ್ಚರಗೊಂಡ ಪೋಷಕರು ಮಗು ಕಾಣದೆ ಆತಂಕಗೊಂಡರು. ವಾಹನದಿಂದ ಇಳಿದು ಸುತ್ತಮುತ್ತ ಹುಡುಕಾಡಿದರು.
ಠಾಣೆ ತಲುಪಿದರು: ನಂತರ, ಬಂದ ದಾರಿಯಲ್ಲೇ ಮಗುವನ್ನು ಹುಡುಕುತ್ತ ಸಾಗಿದರು. ಆಗುಂಬೆಯ ಫಾರೆಸ್ಟ್ ಚೆಕ್‌ಗೆàಟ್‌ನಲ್ಲಿ ಮಗು ಪೊಲೀಸ್ ಠಾಣೆಯಲ್ಲಿ ಇರುವ ವಿಷಯ ತಿಳಿಯಿತು. ನೇರ ಪೊಲೀಸ್ ಠಾಣೆಗೆ ತೆರಳಿದರು. ತಾಯಿಯನ್ನು ಕಂಡ ಮಗು ಅವರ ಬಳಿ ಓಡಿ ಬಂತು. ನಂತರ ಪೊಲೀಸರು ತಂದೆ- ತಾಯಿಗೆ ಎಚ್ಚರಿಕೆ ನೀಡಿ ಮಗುವನ್ನು ಅವರ ಕೈಗಿತ್ತಿದ್ದಾರೆ. ಅದೃಷ್ಟವಶಾತ್ ಮಗು ವಾಪಸ್ ತನ್ನ ಮನೆ ಸೇರಿದೆ.