Advertisement
ಸೋಮವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಅನಿಷ್ಟ ಬಾಲಕಾರ್ಮಿಕ ಪದ್ಧತಿ ತಡೆಯಲು ಸಾಕಷ್ಟು ಕಾನೂನು, ಕ್ರಮ ಇವೆ. ಅವುಗಳಿಂದ ಸಂಪೂರ್ಣ ತಡೆಗಟ್ಟಲಿಕ್ಕೆ ಸಾಧ್ಯವಿಲ್ಲ ಎಂದರು.
Related Articles
Advertisement
ಹಿಂದೆಲ್ಲಾ 14 ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಆಗಿರಲಿಲ್ಲ. ಈಗ ಅದು ಕಡ್ಡಾಯ. ಎಲ್ಲ ಮಕ್ಕಳಲ್ಲಿ ಟಾಪರ್ ಆಗುವ ಸಾಮರ್ಥ್ಯ ಇದೆ. ಹಾಗಾಗಿ ಎಲ್ಲ ಮಕ್ಕಳಿಗೆ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು. ಜಗತ್ತಿನಲ್ಲಿ ಶೇ. 33ರಷ್ಟು ಮಹಿಳೆಯರು ಮತ್ತು ಮಕ್ಕಳು ಸಂಘರ್ಷ ಮತ್ತು ವಿಪತ್ತಿಗೆ ಒಳಗಾಗಿದ್ದಾರೆ.
ಸಂಘರ್ಷಕ್ಕೆ ತುತ್ತಾದ ಮಹಿಳೆಯರು ಮತ್ತು ಮಕ್ಕಳು ಕಂಡು ಬಂದಾಗ ಸಂಬಂಧಿತರ ಗಮನಕ್ಕೆ ತರಬೇಕು. ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಶಿಕ್ಷಣ ಅಗತ್ಯತೆ, ಮಹತ್ವದ ಬಗ್ಗೆ ತಿಳಿಹೇಳಬೇಕು. ಮನಪರಿವರ್ತನೆ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಅನಕ್ಷರತೆ, ಬಡತನ, ಇಂದಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಗೊತ್ತಿಲ್ಲದವರ ಮಕ್ಕಳು ಹೆಚ್ಚಾಗಿ ಬಾಲಕಾರ್ಮಿಕ ಪದ್ಧತಿಗೆ ತುತ್ತಾಗುತ್ತಿದ್ದಾರೆ. ಪೋಷಕರಲ್ಲಿ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ, ಶಿಕ್ಷಣದ ಅಗತ್ಯತೆ ಬಗ್ಗೆ ಮನಃಪರಿವರ್ತನೆ ಮಾಡುವ ಮೂಲಕ ಮಕ್ಕಳು ಬಾಲಕಾರ್ಮಿಕರಾಗುವುದ ತಪ್ಪಿಸಬೇಕು.
ಕಾನೂನು, ಕ್ರಮದಿಂದ ಪೂರ್ಣ ಪ್ರಮಾಣದ ಸಫಲತೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ಕೆಲಸಕ್ಕೆ ದೂಡುವುದರಿಂದ ಅವರ ಬಾಲ್ಯವನ್ನೇ ಕಸಿದುಕೊಂಡಂತಾಗುತ್ತದೆ. ಮಕ್ಕಳು ತಮ್ಮ ಬಾಲ್ಯವನ್ನು ಬಾಲ್ಯವಾಗಿಯೇ ಕಳೆಯುವ ಅವಕಾಶ ಮಾಡಿಕೊಡಬೇಕು.
ಸಂಘರ್ಷದಲ್ಲಿರುವ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವುದು ಆದ್ಯ ಕರ್ತವ್ಯ ಎಂದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಶಂಕರ್ ಎಸ್. ಗುಳೇದ್ ಮಾತನಾಡಿ, ಸ್ವಾತಂತ್ರ ಬಂದ 70 ವರ್ಷದ ನಂತರವೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ನಾಚಿಕೆಗೇಡಿನ ಮತ್ತು ತಲೆತಗ್ಗಿಸುವ ವಿಚಾರ.
ಕೆಲವರು ನಮ್ಮ ಮುಂದೆ ಏನೆಲ್ಲಾ ನಡೆದರೂ ಉಸಾಬರಿ ಬೇಡ ಎಂದು ಸುಮ್ಮನಾಗುತ್ತಾರೆ. ಆ ರೀತಿ ಮಾಡದೆ ಸಹಾಯವಾಣಿ 1098 ಇಲ್ಲವೇ 100ಕ್ಕೆ ಮಾಹಿತಿ ನೀಡಿ, ಮಗುವಿನ ಭವಿಷ್ಯ ಕತ್ತಲಾಗುವುದ ತಪ್ಪಿಸಬೇಕು ಎಂದು ಮನವಿ ಮಾಡಿದರು. ಆರ್.ಎಲ್. ಕಾನೂನು ಕಾಲೇಜು ಪ್ರಾಧ್ಯಾಪಕಿ ಟಿ.ಸಿ. ಪಂಕಜಾ ಉಪನ್ಯಾಸ ನೀಡಿದರು. ಮೇಯರ್ ಅನಿತಾಬಾಯಿ ಅಧ್ಯಕ್ಷತೆ ವಹಿಸಿದ್ದರು.
ಡೆಪ್ಯುಟಿ ಮೇಯರ್ ಜಿ. ಮಂಜುಳಾ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್.ಎಂ. ಪ್ರೇಮಾ, ಜಿ.ಎಂ. ರವೀಂದ್ರ, ಡಾ| ರಂಗಸ್ವಾಮಿ, ಡಿ.ಸಿ. ನಾಗೇಶ್ ಇತರರು ಇದ್ದರು. ಕಾರ್ಯಕ್ರಮದ ಮುನ್ನ ಮಿಲ್ಲತ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.