Advertisement

ರಾಜ್ಯಸಭೆಗೆ ಕನ್ನಡಿಗ v/s ಪರಭಾಷಿಕ 

08:15 AM Mar 08, 2018 | Team Udayavani |

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ಹೈಕಮಾಂಡ್‌ ಗಾಂಧಿ ಕುಟುಂಬದ ಆಪ್ತ ಶ್ಯಾಮ್‌ ಪಿತ್ರೋಡಾ ಅಥವಾ ಜನಾರ್ದನ ದ್ವಿವೇದಿ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಹುಲ್‌ ಗಾಂಧಿ ಹಾಗೂ ರಾಜ್ಯ ನಾಯಕರ ನಡುವೆ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ ಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ನಾಯಕರು ವಿಧಾನಸಭೆಗೆ ಚುನಾವಣೆ ಇರುವುದರಿಂದ ಹೊರ ರಾಜ್ಯದ ಅಭ್ಯರ್ಥಿ ಆಯ್ಕೆ ಮಾಡಿದರೆ, ಅದೇ
ಚುನಾವಣೆಯ ವಿಷಯವಾ ಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕನ್ನಡಿಗರನ್ನೇ ಆಯ್ಕೆ ಮಾಡಲು ಆಗ್ರಹಿಸಿದ್ದಾರೆಂದು ತಿಳಿದು ಬಂದಿದೆ.

ಮಾ.23 ರಂದು ನಡೆಯುವ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಇದೆ. ಜಾತಿ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜ್ಯ ನಾಯಕರು ಕಸರತ್ತು ನಡೆಸಿದ್ದಾರೆ. ಪ್ರಮುಖವಾಗಿ ಅಲ್ಪ ಸಂಖ್ಯಾತ ಹಾಗೂ ದಲಿತ ವರ್ಗದವರಿಗೆ ಆದ್ಯತೆ ನೀಡಲು ರಾಜ್ಯ ಕಾಂಗ್ರೆಸ್‌ ಮುಂದಾಗಿದ್ದು, ದಲಿತ ವರ್ಗಕ್ಕೆ ಸೇರಿರುವ ಎಚ್‌. 
ಹನುಮಂತಪ್ಪ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ನಜೀರ್‌ ಅಹಮದ್‌ ಅಥವಾ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ( ನ.2 ) ಸಲೀಂ ಅಹಮದ್‌ ಅವರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಿ.ಕೆ. ಜಾಫ‌ರ್‌ ಷರೀಫ್ ಹೆಸರೂ ಕೂಡ ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹೈಕಮಾಂಡ್‌ ರಾಜ್ಯ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಕಟ್ಟಿ ಹಾಕಲು ಪ್ರಬಲ ನಾಯಕರ ಅಗತ್ಯ ಇದೆ ಎಂಬ ಕಾರಣಕ್ಕೆ ಶ್ಯಾಮ್‌ ಪಿತ್ರೋಡಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಆಯ್ಕೆ ಮಾಡುವಂತೆ ಹೈಕಮಾಂಡ್‌ ಸೂಚಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ದಲಿತ ಕೋಟಾದಲ್ಲಿ ಎಚ್‌. ಹನುಮಂತಪ್ಪ ಅವರಿಗೆ ಅವಕಾಶ ತಪ್ಪಿದರೆ, ಮಾಜಿ ಸಚಿವೆ ರಾಣಿ ಸತೀಶ್‌ ಅಥವಾ ಶಾಮನೂರು ಶಿವಶಂಕರಪ್ಪ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. 

ಇನ್ನು 3ನೇ ಸ್ಥಾನಕ್ಕಾಗಿ ಪಕ್ಷದ ಹೊರಗಿನವರನ್ನು ಕಳುಹಿಸಲು ಮುಖ್ಯಮಂತ್ರಿ ಮುಂದಾಗಿದ್ದು, ತಮ್ಮ ಆಪ್ತ ರಿಯಲ್‌ ಎಸ್ಟೇಟ್‌ ಉದ್ಯಮಿ ಚೆನ್ನಾರೆಡ್ಡಿ ಅವರನ್ನು ಆಯ್ಕೆ ಮಾಡಲು ಆಸಕ್ತಿವಹಿಸಿದ್ದಾರೆ. 3 ನೇ ಅಭ್ಯರ್ಥಿಗೆ ಕಡಿಮೆ ಬೀಳುವ ಮತಗಳನ್ನು ಅವರ
ಮೂಲಕವೇ ಸೆಳೆಯಲು ಮುಖ್ಯಮಂತ್ರಿ ತೀರ್ಮಾನ ಮಾಡಿದ್ದು, ಚೆನ್ನಾರೆಡ್ಡಿ ಅವರನ್ನು ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ನಾವು ಅರ್ಜಿ ಹಾಕಿಲ್ಲ: ಕುಮಾರಸ್ವಾಮಿ
ಮಂಗಳೂರು: ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆಯುವ ಚುನಾವಣೆಯಲ್ಲಿ 3ನೇ ಸ್ಥಾನಕ್ಕಾಗಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ
ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿ ಕೊಡಿ ಎಂದು ನಾವು ಅರ್ಜಿ  ಹಾಕಿಲ್ಲ ಎಂದು ತಿಳಿಸಿದರು.

Advertisement

“ಈ ಹಿಂದೆ ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಾವು ನಿಮ್ಮ
ಮುಂದೆ ಬಂದು ಅರ್ಜಿ ಹಾಕಿಲ್ಲ; ನೀವೇ ನಮ್ಮ ಬಳಿಗೆ ಬಂದಿರಿ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ನಾವು ಎಂದಿಗೂ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ’ ಎಂದು ತಿಳಿಸಿದ ಎಚಿxಕೆ, ಸಿದ್ದರಾಮಯ್ಯ ಅವರು ಅಧಿಕಾರ ಮತ್ತು ಹಣದ ಮದದಿಂದ ದುರಹಂಕಾರದ ಮಾತು ಆಡುತ್ತಿದ್ದಾರೆ. ನಮ್ಮ ಶಕ್ತಿ ಏನೆಂಬುದನ್ನು ಅಖಾಡದಲ್ಲಿ ತೋರಿಸುತ್ತೇವೆ. ನಮಗೂ ಜನ ಇದ್ದಾರೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ ಎಂದರು.

ಜೆಡಿಎಸ್‌ ಸಖ್ಯ ಬೇಡ 
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ
ಹೈಕಮಾಂಡ್‌ ಮುಂದೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯಸಭೆಗೆ ಜೆಡಿಎಸ್‌ ಜೊತೆ ಹೊಂದಾಣಿಕೆ 
ಮಾಡಿಕೊಂಡರೆ ವಿಧಾನಸಭೆ ಚುನಾವಣೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸಂದೇಶ ರವಾನೆಯಾಗುವುದರಿಂದ ಪಕ್ಷಕ್ಕೆ
ನಷ್ಟವಾಗುವ ಸಾಧ್ಯತೆ ಇದೆ. ಅವರ ಬೆಂಬಲದ ಹೊರತಾಗಿಯೂ ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಲು ಸಾಧ್ಯವಿದ್ದು, ಅದರ ಜವಾಬ್ದಾರಿ ನನಗೆ ಬಿಡಿ ಎಂದು ರಾಹುಲ್‌ ಗಾಂಧಿಗೆ ಹೇಳಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next