ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ಉತ್ಸವದಲ್ಲಿ ವಿದುಷಿ ಶುಭಶ್ರೀ ಅಡಿಗ ಮೂಡುಕೇರಿ ಮತ್ತು ಬಳಗದವರಿಂದ ವೀಣಾ ವಾದನ ಕಛೇರಿ ಜರುಗಿತು. ಆದಿತಾಳ ನವರಾಗ ಮಾಲಿಕ ವರ್ಣದಲ್ಲಿ ಪ್ರಾರಂಭವಾದ ಕಛೇರಿಯು ನಾಟ ರಾಗದಲ್ಲಿ ಮಹಾಗಣಪತಿಂ, ಹಂಸನಾದ ರಾಗದಲ್ಲಿ ಉಂಟುರೀತಿಕೋಲು, ಶ್ರೀ ರಾಗದಲ್ಲಿ ಎಂದರೋ ಮಹಾನುಭಾವಲೂ, ಹಿಂದೋಳ ರಾಗದಲ್ಲಿ ನೀರಜಾಕ್ಷಿ ಕಾಮಾಕ್ಷಿ, ಕಲ್ಯಾಣಿ ರಾಗ ಆದಿತಾಳದಲ್ಲಿ ಫುಶನ್ ಮನಸೂರೆಗೊಂಡಿತು. ಅಭೇರಿ ರಾಗದಲ್ಲಿ ಅಂಬಿಗಾ ನಾ ನಿನ್ನ ನಂಬಿದೆ, ಸಿಂಧು ಭೈರವಿ ರಾಗದಲ್ಲಿ ತಂಬೂರಿ ಮೀಟಿದವ, ಹಾಗೂ ಕೊನೆಯಲ್ಲಿ ಅಯಿಗಿರಿ ನಂದಿನಿ ಸ್ತೋತ್ರ, ಗಣೇಶ ಸ್ತುತಿ, ಭಾಗ್ಯದ ಲಕ್ಷ್ಮಿಬಾರಮ್ಮ ಪದ್ಯದೊಂದಿಗೆ ಮಂಗಲವನ್ನು ನುಡಿಸಿ ಕಛೇರಿಯನ್ನು ಮುಗಿಸಲಾಯಿತು. ಪಕ್ಕ ವಾದ್ಯದಲ್ಲಿ ಮೃದಂಗ ವಾದಕರಾಗಿ ಬಾಲಚಂದ್ರ ಭಾಗವತ್ ಉಡುಪಿ, ತಬಲವಾದನದಲ್ಲಿ ಗುರುದತ್ ನಾಯಕ್ ಉಡುಪಿ, ರಿದಂ ಪ್ಯಾಡ್ ವಾದನದಲ್ಲಿ ಕಾರ್ತಿಕ್ ಇನ್ನಂಜೆ ಹಾಗೂ ತಾಳದಲ್ಲಿ ಕೃಪಾಸುದೇಶ್ ಮಣಿಪಾಲ ಸಹಕರಿಸಿದರು. ದೇವಸ್ಥಾನದ ವರ್ಷಾವಧಿ ಉತ್ಸವದಲ್ಲಿ ಎರಡು ತಾಸಿಗೂ ಅಧಿಕ ಹೊತ್ತು ವೀಣಾ ವಾದನ ಕಛೇರಿ ಜರಗಿದ್ದು ಒಂದು ದಾಖಲೆ.
ಅನಂತಪದ್ಮನಾಭ