Advertisement

ಆಕಾಡೆಮಿ, ಪ್ರಾಧಿಕಾರಿಗಳ ಅಧ್ಯಕ್ಷರ ಬದಲಾವಣೆ ಸರಿಯಲ್ಲ

11:53 AM May 30, 2018 | |

ಬೆಂಗಳೂರು: “ಸರ್ಕಾರ ಬದಲಾಗುತ್ತಿದ್ದಂತೆ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರನ್ನೂ ಬದಲಾಯಿಸುವ ಪ್ರವೃತ್ತಿ ಸರಿಯಲ್ಲ . ಈ ರೀತಿಯ ಬೆಳವಣಿಗೆಗಳು ಸಾಹಿತಿಗಳಿಗೆ ಮಾಡುವ ಅವಮಾನ’ ಎಂದು ವಿಮರ್ಶಕ ಪ್ರೊ.ಸಿ.ಎನ್‌. ರಾಮಚಂದ್ರನ್‌ ತಿಳಿಸಿದ್ದಾರೆ. 

Advertisement

ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಮ್ಮಿಕೊಂಡಿದ್ದ “2017ನೇ ಸಾಲಿನ ಗೌರವ ಪ್ರಶಸ್ತಿ’ ಮತ್ತು “2016ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ’ ಸಮಾರಂಭದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅಕಾಡೆಮಿ-ಪ್ರಾಧಿಕಾರಗಳೂ ಸೇರಿದಂತೆ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಅಧಿಕಾರಾವಧಿ ಮೊಟಕುಗೊಳ್ಳುತ್ತದೆ.

ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಸರ್ಕಾರಿ ಅನುದಾನಿತ ಸಂಸ್ಥೆಗಳು ಎಂಬ ಕಾರಣಕ್ಕೆ ಈ ರೀತಿ ಬದಲಾವಣೆ ಮಾಡುವುದಾದರೆ, ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಯಾಕೆ ಈ ನಿಯಮ ಅನ್ವಯಿಸುವುದಿಲ್ಲ? ಅಕಾಡೆಮಿ ಅಥವಾ ಪ್ರಾಧಿಕಾರಗಳಿಗೆ ಮಾತ್ರ ಯಾಕೆ ಈ ನಿಯಮ ಎಂದು ಪ್ರಶ್ನಿಸಿದರು.

ಈ ರೀತಿಯ ಬೆಳವಣಿಗೆಗಳು ಸಾಹಿತಿಗಳು-ಚಿಂತಕರಿಗೆ ಮಾಡುವ ಅವಮಾನ. ಇದು ತಕ್ಷಣ ನಿಲ್ಲಬೇಕು. ಈ ನಿಟ್ಟಿನಲ್ಲಿ “ಸಾಂಸ್ಕೃತಿಕ ನೀತಿ’ಯ ಶಿಫಾರಸುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಅನುವಾದಿತ ಕೃತಿಗಳನ್ನು ಪ್ರಕಟಿಸುವುದು ಮಾತ್ರವಲ್ಲ. ಆ ಕೃತಿಗಳು ಎಷ್ಟು ಜನರನ್ನು ಮತ್ತು ಯಾವ ವರ್ಗವನ್ನು ತಲುಪುತ್ತಿದೆ ಎಂಬುದು ಕೂಡ ಮುಖ್ಯ. ಈ ನಿಟ್ಟಿನಲ್ಲಿ ಅಕಾಡೆಮಿಗಳು-ಪ್ರಾಧಿಕಾರಗಳು ಹೊರತರುವ ಎಲ್ಲ ಕೃತಿಗಳನ್ನು ಸರ್ಕಾರವೇ ಮುಂದೆ ಬಂದು, ಸಗಟು ರೂಪದಲ್ಲಿ ಖರೀದಿಸಿ ಶಾಲಾ-ಕಾಲೇಜುಗಳಿಗೆ ತಲುಪಿಸುವಂತಾಗಬೇಕು ಎಂದು ಹೇಳಿದರು.

Advertisement

“ಭಾಷಾ ಬಾಂಧವ್ಯದ ಕೊಂಡಿ’: ಪ್ರಾಧಿಕಾರದ ಅಧ್ಯಕ್ಷ ಪ್ರೊ.ಕೆ. ಮರುಳ ಸಿದ್ದಪ್ಪ ಪ್ರಾಸ್ತಾವಿಕ ಮಾತನಾಡಿ, ಭಾಷೆಗಳ ನಡುವೆ ಬಾಂಧವ್ಯ ಬೆಸೆಯುವುದರಲ್ಲಿ ಅನುವಾದ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಭಾಷಾ ಭಾರತಿ ಆರಂಭದಿಂದಲೂ 340 ಪುಸ್ತಕಗಳನ್ನು ಅನುವಾದ ಮಾಡಿದೆ. ನನ್ನ ಆಡಳಿತಾವಧಿಯಲ್ಲೇ 60 ಪುಸ್ತಕಗಳು ಅನುವಾದಕ್ಕೆ ಸಿದ್ಧವಾಗಿವೆ. ಡಾ.ಅಂಬೇಡ್ಕರ್‌ ಅವರ ಸಮಗ್ರ ಬರಹಗಳ ಸಂಪುಟ ಕೂಡ ಮರುಮುದ್ರಣಕ್ಕೆ ತಯಾರಾಗಿದೆ ಎಂದು ವಿವರಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಮಾತನಾಡಿ, ಅಕಾಡೆಮಿ ಅಥವಾ ಪ್ರಾಧಿಕಾರ ಪ್ರಕಟಿಸುವ ಎಲ್ಲ ಕೃತಿಗಳನ್ನು ಉಚಿತವಾಗಿ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳಿಗೆ ಪೂರೈಸಲು ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಅನುವಾದಕ ಮತದಾನಿದ್ದಂತೆ: “ಟಾಲ್‌ಸ್ಟಾಯ್‌, ರವೀಂದ್ರನಾಥ ಟ್ಯಾಗೋರ್‌ ಎಲ್ಲರಿಗೂ ಗೊತ್ತು. ಆದರೆ, ಅವರನ್ನು ಪರಿಚಯಿಸಿದ ಅನುವಾದಕರು ಮಾತ್ರ ಯಾರಿಗೂ ಗೊತ್ತಿಲ್ಲ’. ಎಷ್ಟೋ ಅನುವಾದಕರು ಬೇರೆ ಬೇರೆ ಭಾಷೆಗಳಲ್ಲಿ ಇರುವ ಕೃತಿಗಳನ್ನು ಅನುವಾದಿಸಲು ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ. ಆದರೆ, ಅವರಾರೂ ನೆನಪಿನಲ್ಲಿ ಇರುವುದೇ ಇಲ್ಲ. ಅನುವಾದಕ ಒಂದು ರೀತಿ ಮತದಾರರಂತೆ. ಗೆದ್ದುಬಂದ ಶಾಸಕರು, ನಂತರದಲ್ಲಿ ಆ ಕ್ಷೇತ್ರದ ಮತದಾರರನ್ನು ಮರೆತುಬಿಡುತ್ತಾರೆ ಎಂದು ಪ್ರೊ.ಸಿ.ಎನ್‌. ರಾಮಚಂದ್ರನ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next