Advertisement

ಸೃಷ್ಟಿಕರ್ತನಿಗೇ ಸವಾಲು ಬಸವ ಕ್ರಾಂತಿ

12:34 PM Feb 12, 2018 | Team Udayavani |

ಬೀದರ: ರಾಜಪ್ರಭುತ್ವ ಮೆರೆದು ಅನಿಶ್ಚಿತತೆ ಪರಿಸ್ಥಿತಿ ಕಾಡುತ್ತಿದ್ದ ಹನ್ನೆರಡನೇ ಶತಮಾನದಲ್ಲಿನ ಕತ್ತಲೆ ಅಳಿಸಿತ್ತು ಶರಣರ ಕಲ್ಯಾಣ ಕ್ರಾಂತಿ. ಇದಕ್ಕೆ ನೇತೃತ್ವ ವಹಿಸಿದವರು ಬಸವಣ್ಣ. ಸೃಷ್ಟಿಕರ್ತನಿಗೆ ಸವಾಲು ಹಾಕುವ ಧೈರ್ಯವನ್ನು ಈ ಕ್ರಾಂತಿ ತಂದುಕೊಟ್ಟಿತ್ತು ಎಂದು ಸಿಡ್ನಿಯ ವೇದಾಂತ ಕೇಂದ್ರದ ಶ್ರೀ ಸ್ವಾಮಿ ವಿರೇಶಾನಂದಜೀ ಮಹಾರಾಜ್‌ ಹೇಳಿದರು.

Advertisement

ಬಸವಕಲ್ಯಾಣದ ತೇರು ಮೈದಾನದಲ್ಲಿ ರವಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮೂರು ದಿನಗಳ ಬಸವ ಉತ್ಸವ ಮುಕ್ತಾಯ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಅವರು,  ಧೀರ ನುಡಿ ಸಂದೇಶಗಳನ್ನು, ಜನ ಸಾಮಾನ್ಯರನ್ನು ಮಹಾತ್ಮರಾಗಿ ಉದ್ಧರಿಸಿದ್ದು ಹಾಗೂ ಸಾಮಾನ್ಯ ಜನರಿಗೂ ಅತಿ ಆತ್ಮವಿಶ್ವಾಸ ತಂದುಕೊಟ್ಟಿರುವುದು ಈ ವಚನ ಕ್ರಾಂತಿ. ಕಲ್ಲಿನಲ್ಲಿದ್ದ ದೇವರನ್ನು ನಡೆದಾಡುವ ಶ್ರೀಸಾಮಾನ್ಯರಲ್ಲೂ ಕಾಣುವಂತ ಚಿಂತನೆಯನ್ನು ಹುಟ್ಟುಹಾಕಿತ್ತು ಎಂದು ಬಣ್ಣಿಸಿದರು.

ಬಸವಕಲ್ಯಾಣದ ಈ ನೆಲದಲ್ಲಿ ವಿಷಮತೆ ಹರಡಿ ಸಮಾಜ ಅಧಪತನಕ್ಕೆ ತಳ್ಳಲ್ಪಟ್ಟಿತ್ತು. ಮೂಢತನ ತಾಂಡವಾಡುತ್ತಿತ್ತು. ಬಸವ ಚಳವಳಿ ರಕ್ತ ಕ್ರಾಂತಿ ಆಗಿರಲಿಲ್ಲ. ಯಾವುದೇ ಧರ್ಮ ಮತ್ತು ಅಧ್ಯಾತ್ಮಿಕ ಕ್ರಾಂತಿಯೂ ಆಗಿರದೇ ವಿಶ್ವತೋಮುಖವಾದ ಸಾಮಾಜಿಕ ಕ್ರಾಂತಿ ಅದಾಗಿತ್ತು. ಕನ್ನಡದ ಮೂಲಕ ಕನ್ನಡಿಗರೇ ಕರ್ನಾಟಕದಲ್ಲಿ ನಡೆಸಿದ ಚಳವಳಿ ಅದಾಗಿತ್ತು. ಈ ಮಣ್ಣಿನಲ್ಲಿ ನೆಲೆಸಿ ಸ್ಮರಣೆ ಮಾಡುತ್ತಿರುವ ನಾವೆಲ್ಲ ಧನ್ಯರು, ಪುಣ್ಯವಂತರು ಎಂದು ಹೇಳಿದರು.

ವಚನಗಳು ಕೇವಲ ಸಾಹಿತ್ಯವಲ್ಲ, ಬಸವಾದಿ ಶರಣರ ಬಾಯಿಂದ ಮೂಡಿಬಂದ ಅನುಭಾವದ ಮಾತುಗಳು. ದ್ವೈತ್ವ- ಅದ್ವೈತಗಳಲ್ಲಿನ ತಾತ್ವಿಕ ಸಮನ್ವಯತೆಯನ್ನ ವಚನಗಳಲ್ಲಿ ಕಾಣುತ್ತಿದ್ದೇವೆ. ಶತ ಶತಮಾನಗಳು ಕಳೆದರೂ ಇಂದಿಗೂ ವಚನಗಳಲ್ಲಿ ನಾವಿನ್ಯತೆ ಕಾಣುತ್ತಿದ್ದೇವೆ. ಧರ್ಮ ಸಮಾಜಮುಖೀ ಆಗಬೇಕು. ಹಾಗೆಯೇ ಸಮಾಜವೂ ಧರ್ಮ ಮುಖೀಯಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಜನರ ಪಾಲುದಾರಿಕೆ ಕಡಿಮೆ ಇದ್ದರೂ ಸಾಕಷ್ಟು ಯಶಸ್ಸು ಸಾಧಿಸಿದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸ್ಥಳೀಯ ಗಣ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಚಿವ ಈಶ್ವರ ಖಂಡ್ರೆ ಮತ್ತು ಸಂಸದ ಭಗವಂತ ಖೂಬಾ ಮಾತನಾಡಿದರು. ರಾಜೇಶ್ವರದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಹಿರನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ, ಸಾಯಗಾಂವನ ಶ್ರೀ ಶಿವಾನಂದ ದೇವರು, ಶ್ರೀ ಗಾಯತ್ರಿತಾಯಿ, ಶ್ರೀ ಚಿತ್ರಮ್ಮಾತಾಯಿ, ಬೀದರನ ಶ್ರೀ ಜ್ಯೋತಿರ್ಮಯಾನಂದಜೀ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಎಂಎಲ್‌ಸಿ ಅಮರನಾಥ ಪಾಟೀಲ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ನಗರ ಸಭೆ ಅಧ್ಯಕ್ಷ ಮೀರ ಅಜರ್‌ ಅಲಿ ನವರಂಗ, ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ, ಸಿಇಒ ಡಾ| ಸೆಲ್ವಮಣಿ, ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ, ತಹಶೀಲ್ದಾರ ಜಗನ್ನಾಥ ರೆಡ್ಡಿ, ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಸ್ವಾಗತಿಸಿದರು. ರಶ್ಮಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next