Advertisement

ಸಂತ್ರಸ್ತರಿಗೆ ಹಣ ಹಿಂದಿರುಗಿಸುವುದೇ ಸವಾಲು

12:33 AM Oct 20, 2019 | Team Udayavani |

ಬೆಂಗಳೂರು: “ಐಎಂಎ, ಆ್ಯಂಬಿಡೆಂಟ್‌ ಸೇರಿದಂತೆ ವಿವಿಧ ಕಂಪನಿಗಳಿಂದ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವುದಕ್ಕೆ ಹಲವು ಸವಾಲುಗಳಿವೆ’ ಎಂದು ಸರ್ಕಾರಿ ಅಭಿಯೋಜಕ ನಾರಾಯಣ ರೆಡ್ಡಿ ಎಂ. ಹೇಳಿದರು.

Advertisement

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಇಂಡಿಯನ್‌ ಮೀಡಿಯಾ ಬುಕ್‌ ಸಹಯೋಗದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ಹಿಂದೆಯು ಕೆಲವು ಖಾಸಗಿ ಸಂಸ್ಥೆಗಳು ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿದ್ದವು. ಮೋಸ ಮಾಡಿದ ಸಂಸ್ಥೆಗಳಿಂದ ಹಣ ಹಿಂಪಡೆಯುವುದಕ್ಕೆ ಸಂತ್ರಸ್ತರು ದಶಗಳ ಕಾಲ ಕಾದಿದ್ದರು. ಈ ರೀತಿಯ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಕಾಲಮಿತಿಯಲ್ಲಿ ಹಣ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಐಎಂಎನಲ್ಲಿ ಸುಮಾರು 80 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಜನ ಹಣ ಹೂಡಿಕೆ ಮಾಡಿರುವ ಸಾಧ್ಯತೆ ಇದೆ. ಹಣ ಹಿಂದಿರುಗಿಸುವ ಸಮಯದಲ್ಲಿ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸುವುದೂ ಸವಾಲಿನ ಕೆಲಸವಾಗಿದೆ. ಸರ್ಕಾರ ಈ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳುವುದಕ್ಕೆ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.

ಹೂಡಿಕೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಹಣ ಹಿಂದಿರುಗಿಸುವ ಮುನ್ನ ಸರ್ಕಾರ ಸಂತ್ರಸ್ತರಿಂದ ದಾಖಲೆ ಮತ್ತು ಮಾಹಿತಿ ಪಡೆದುಕೊಳ್ಳುವುದಕ್ಕೆ ಅಧಿಸೂಚನೆ ನೀಡುತ್ತದೆ. ಸರ್ಕಾರ ಅಧಿಸೂಚನೆ ಹೊರಡಿಸಿದ 30 ದಿನಗಳ ಒಳಗಾಗಿ ಸಂತ್ರಸ್ತರು ಮಾಹಿತಿ ನೀಡಬೇಕು ಎಂದು ಹೇಳಿದರು.

ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ಐಎಂಎ ಸೇರಿದಂತೆ ವಿವಿಧ ಕಂಪನಿಗಳು ಮುಸ್ಲಿಂ ಸಮುದಾಯದವರನ್ನು ವಂಚಿಸುವುದಕ್ಕೆ ಮುಸ್ಲಿಂ ನಾಯಕರನ್ನೇ ಬಳಸಿಕೊಂಡಿರುವುದು ಈಗ ಸ್ಪಷ್ಟವಾಗಿದೆ. ಮುಗ್ಧ ಜನರನ್ನು ಮೋಸ ಮಾಡುವುದಕ್ಕೆ ಚುನಾಯಿತ ಪ್ರತಿನಿಧಿಗಳು, ಪೊಲೀಸರೇ ಲಂಚ ಪಡೆದಿದ್ದಾರೆ. ಡಿಸಿಪಿ ಅಜಯ್‌ ಹಿಲೋರಿ ಅವರು 13 ಕೋಟಿ ರೂ. ಹಾಗೂ 25 ಕೆ.ಜಿ ಚಿನ್ನವನ್ನು ಮನ್ಸೂರ್‌ ಖಾನ್‌ನಿಂದ ಪಡೆದುಕೊಂಡಿದ್ದಾರೆ ಎಂಬ ಆರೋಪಗಳೂ ಇವೆ ಎಂದರು.

Advertisement

ಕುರಿಗಳು ತಮ್ಮ ರಕ್ಷಣೆಗೆ ತೋಳ ನೇಮಿಸಿಕೊಂಡಂತೆ ಮುಸ್ಲಿಂ ಸಮುದಾಯದವರು ಮುಸ್ಲಿಂ ನಾಯಕರನ್ನು ಮೆಚ್ಚಿಕೊಂಡು ಬೀದಿಗೆ ಬೀಳುವಂತಾಗಿದೆ. ಈ ರೀತಿ ವಂಚನೆ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗುವ ರೀತಿಯಲ್ಲೇ ಅವರೊಂದಿಗೆ ಶಾಮೀಲಾಗಿರುವ ರಾಜಕೀಯ ನಾಯಕರು, ಪೊಲೀಸ್‌ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಆ್ಯಂಬಿಡೆಂಟ್‌ ಪ್ರಕರಣದ ರುವಾರಿ ಫ‌ರೀದ್‌ ಅಹಮದ್‌ಗೆ ಇಂದಿಗೂ ಶಿಕ್ಷೆಯಾಗಿಲ್ಲ. ಈ ಪ್ರಕರಣದಲ್ಲಿ ಹೋರಾಟ ಮಾಡುವಾಗ ನನ್ನ ಪೋನ್‌ ಕದ್ದಾಲಿಕೆಯಾಗಿತ್ತು ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಶರ್ಯಾರ್‌ ಖಾನ್‌, ಈಗಾಗಲೇ ಹಣ ಕಳೆದುಕೊಂಡು ಕುಗ್ಗಿದ್ದೀರಿ. ಇದೇ ಚಿಂತೆಯಲ್ಲಿ ಕುಟುಂಬ, ಉದ್ಯೋಗದ ಮೇಲೆ ಒತ್ತಡ ಹಾಕಿಕೊಳ್ಳಬಾರದು. ಆರೋಗ್ಯವನ್ನೂ ಕೆಡಿಸಿಕೊಳ್ಳಬಾರದು ಈ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬೇಕು ಎಂದು ಸಂತ್ರಸ್ತರಿಗೆ ಸಲಹೆ ನೀಡಿದರು.

ರೋಷನ್‌ಬೇಗ್‌ ಹಮ್‌ಕೊ ಡುಬಾದಿಯಾ!: “ಎಕ್ಸ್‌ ಮಿನಿಸ್ಟರ್‌ ರೋಷನ್‌ಬೇಗ್‌ ಹಮ್‌ ಸಬ್‌ಕೊ ಡುಬಾದಿಯಾ’ (ಹಳ್ಳಕ್ಕೆ ತಳ್ಳಿಬಿಟ್ಟರು)ಎಂದು ಸಂತ್ರಸ್ತ ಮಹಿಳೆಯರು ದು:ಖ ತೋಡಿಕೊಂಡರು. ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಂತ್ರಸ್ತ ಮಹಿಳೆಯರು, ಅವರ ಮಾತು ಕೇಳಿಯೇ ನಾವು ಹಣ ಹೂಡಿಕೆ ಮಾಡಿ ಮೋಸ ಹೋದೆವು. ನೆರವು ಕೇಳಲು ಹೋದಾಗ ಅಮಾನುಷವಾಗಿ ನಡೆಸಿಕೊಂಡರು ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next