Advertisement

ಅಹವಾಲು ಸ್ವೀಕರಿಸಿದ ಜಿಪಂ ಸಿಇಒ

03:11 PM Sep 07, 2018 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬೇಕಿರುವ ಹೆಚ್ಚುವರಿ ಕೋಣೆಗಳ ನಿರ್ಮಾಣ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳನ್ನು ಪರಿಶೀಲಿಸಿ, 2018-19ನೇ ಸಾಲಿನ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕ್ರಿಯಾ ಯೋಜನೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು
ಜಿಪಂ ಸಿಇಒ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌ ತಿಳಿಸಿದರು.

Advertisement

ಜಿಪಂ ಕಚೇರಿಯಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗಾಗಿ ಬೇಕಾಗುವ ಹೆಚ್ಚುವರಿ ಕೋಣೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
 
ಸಾರ್ವಜನಿಕರಿಂದ ಬಂದ ಅಹವಾಲುಗಳ ಅನುಸಾರ ಸಂಬಂಧಪಟ್ಟ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವರದಿ ಸಲ್ಲಿಸಬೇಕು. ಶಾಲೆಗಳಿಗೆ ಹೆಚ್ಚುವರಿ ಕೋಣೆಗಳ ಅವಶ್ಯಕತೆ ಇದ್ದು, ಸ್ಥಳ ಲಭ್ಯ ಇದ್ದಲ್ಲಿ ಹೊಸ ಕೋಣೆಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಕ್ರಮ ಕೈಗೊಳ್ಳಲಾಗುವುದು. ಶಿಥಿಲಾವಸ್ಥೆಯಲ್ಲಿ ಇರುವ ಕೋಣೆಗಳನ್ನು ನೆಲಸಮಗೊಳಿಸಿ, ಹೊಸ ಕೋಣೆ ನಿರ್ಮಿಸಲಾಗುವುದು ಎಂದು ಹೇಳಿದರು.

ಇಬ್ರಾಹಿಂಪೂರ ದೊಡ್ಡ ತಾಂಡಾದ ರಾಜಕುಮಾರ ಕರೆ ಮಾಡಿ, ಹಿರಿಯ ಪ್ರಾಥಮಿಕ ಶಾಲೆಯ 4ರಿಂದ 5 ಕೋಣೆಗಳಿದ್ದು, 6 ಹೆಚ್ಚುವರಿ ಕೋಣೆಗಳ ಅವಶ್ಯಕತೆ ಇದೆ. ಸದ್ಯ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಸುರಪುರ ತಾಲೂಕಿನ ಬರದೇವನಾಳದ ಹುಲಗೆಪ್ಪ, ಹಿರಿಯ ಪ್ರಾಥಮಿಕ ಶಾಲೆಯ 350 ವಿದ್ಯಾರ್ಥಿಗಳಿಗೆ ಕೋಣೆಗಳು ಚಿಕ್ಕದಾಗಿದ್ದು, 8 ಕೋಣೆಗಳು ನೆಲಸಮ ಮಾಡಬೇಕು ಮತ್ತು 2 ಕೋಣೆ ಹೆಚ್ಚುವರಿಯಾಗಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಹಾಪುರ ತಾಲೂಕಿನ ಹಳಗೇರಾದ ವಿಜಯಕುಮಾರ, ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ 4 ಕೋಣೆ ನೆಲಸಮ ಮಾಡಬೇಕು ಮತ್ತು 7 ಕೋಣೆಗಳನ್ನು ದುರಸ್ತಿ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದ ಕಾಶಪ್ಪ ಎಂಬುವರು ಹಿರಿಯ ಪ್ರಾಥಮಿಕ ಶಾಲೆಯ 2 ಕೋಣೆಗಳು ಸೋರುತ್ತಿವೆ. ಹೆಚ್ಚುವರಿಯಾಗಿ 3 ಕೋಣೆಗಳ ಅವಶ್ಯಕತೆ ಇದೆ. ಆದರೆ, ಸ್ಥಳಾವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಕೊಡೇಕಲ್‌ನಿಂದ ರಂಗನಾಥ ದೊರೆ ಕರೆ ಮಾಡಿ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 500 ವಿದ್ಯಾರ್ಥಿಗಳಿದ್ದು, ಹೆಚ್ಚುವರಿಯಾಗಿ 10 ಕೋಣೆಗಳ ಅವಶ್ಯಕತೆ ಇದೆ ಅಹವಾಲು ಸಲ್ಲಿಸಿದ್ದಾರೆ. ಸುರಪುರ ತಾಲೂಕಿನ ಏವೂರ ದೊಡ್ಡ
ತಾಂಡಾದ ವಿಠuಲ ಚವ್ಹಾಣ ಕರೆ ಮಾಡಿ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 350 ವಿದ್ಯಾರ್ಥಿಗಳಿದ್ದಾರೆ. 

Advertisement

ಹೆಚ್ಚುವರಿಯಾಗಿ 6 ಕೋಣೆಗಳ ಅವಶ್ಯಕತೆ ಇದೆ. ಆದರೆ, ಸ್ಥಳಾವಕಾಶ ಇಲ್ಲ ಎಂದು ಸಮಸ್ಯೆ ತಿಳಿಸಿದ್ದಾರೆ. ಯಾದಗಿರಿ ತಾಲೂಕಿನ ಕೊಂಕಲ್‌ನ ಅಂಜಪ್ಪ, ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿಯಾಗಿ ನಾಲ್ಕು ಕೋಣೆ ನಿರ್ಮಿಸಬೇಕು ಎಂದು ಕೋರಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ್‌ ಬಿರಾದಾರ, ಹೆಚ್‌ಕೆಆರ್‌ಡಿಬಿ ಶಾಖೆಯ ಯೋಜನಾ ಸಮನ್ವಯಾಧಿಕಾರಿ ವಿಶ್ವನಾಥ ಚಲಗೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ತಾಲೂಕಿನ ಸಾರ್ವಜನಿಕರಿಂದ ಒಟ್ಟು 63 ಕರೆ ಸ್ವೀಕೃತವಾಗಿದ್ದು, ಸಾರ್ವಜನಿಕರು ಗ್ರಾಮಗಳ ಶಾಲೆಗಳಿಗೆ ಬೇಕಾಗುವ ಹೆಚ್ಚುವರಿ ಕೋಣೆಗಳ ಬಗ್ಗೆ ಹಾಗೂ ಈಗಿರುವ ಶಾಲಾ ಕೋಣೆಗಳ ಸ್ಥಿತಿಗತಿ ಕುರಿತು ದೂರವಾಣಿ ಮೂಲಕ ಸಮಸ್ಯೆ ತಿಳಿಸಿದ್ದಾರೆ. ಕೆಲವರು ಶಾಲೆಗಳಿಗೆ ಶೌಚಾಲಯ, ಆವರಣ ಗೋಡೆ, ನೀರಿನ ವ್ಯವಸ್ಥೆ ಸೇರಿದಂತೆ ಶಿಕ್ಷಕರ ಕೊರತೆ ನೀಗಿಸುವಂತೆ ಮನವಿ ಮಾಡಿದ್ದಾರೆ.
 ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next