Advertisement

ಸದ್ಯಕ್ಕಿಲ್ಲ ಹೋಟೆಲ್‌ ತಿಂಡಿ ತಿನಿಸಿನ ಬೆಲೆ ಇಳಿಕೆ

06:00 AM Nov 16, 2017 | Team Udayavani |

ಬೆಂಗಳೂರು: ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಜಿಎಸ್‌ಟಿ ತೆರಿಗೆ ಶೇ.5ಕ್ಕೆ ಇಳಿಕೆ ಬುಧವಾರದಿಂದ ಅನುಷ್ಠಾನವಾಗಿದ್ದರೂ ಇದರ ಲಾಭ ಗ್ರಾಹಕರಿಗೆ ಸಿಗಲು ಇನ್ನೂ ಕೆಲ ದಿನ ಬೇಕಾಗಬಹುದು.

Advertisement

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಕೆಲವೇ ಕೆಲವು ಹೋಟೆಲ್‌ಗ‌ಳಲ್ಲಿ ತಿಂಡಿ- ತಿನಿಸಿನ ಬೆಲೆ ಬುಧವಾರದಿಂದ ಇಳಿಕೆಯಾಗಿದೆ. ಆದರೆ ತೆರಿಗೆ ಇಳಿಕೆಗೆ ಪೂರಕವಾಗಿ ಬೆಲೆ ಪರಿಷ್ಕರಿಸಿ ರಸೀದಿ ನೀಡಲು ಸಾಫ್ಟ್ವೇರ್‌ನಲ್ಲೇ ಬದಲಾವಣೆ ಆಗಬೇಕಿರುವುದರಿಂದ ಹಲವು ಹೋಟೆಲ್‌ಗ‌ಳಲ್ಲಿ ದರ ಪರಿಷ್ಕರಣೆಯಾಗಿಲ್ಲ. ಯಂತ್ರಗಳನ್ನು ಪೂರೈಸಿರುವ ಸಂಸ್ಥೆಯ ಪ್ರತಿನಿಧಿಗಳೇ ಸಾಫ್ಟ್ವೇರ್‌ನಲ್ಲಿ ಬದಲಾವಣೆ ಮಾಡಬೇಕಿರುವುದರಿಂದ ದರ ಇಳಿಕೆ ತುಸು ವಿಳಂಬವಾಗುವ ಸಾಧ್ಯತೆ ಇದೆ.

ಹವಾನಿಯಂತ್ರಿತ, ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಹೋಟೆಲ್‌ಗ‌ಳಿಗೆ ಜಿಎಸ್‌ಟಿಯಡಿ ಕ್ರಮವಾಗಿ ವಿಧಿಸಲಾಗಿದ್ದ ಶೇ.18, ಶೇ.12ರಷ್ಟು ತೆರಿಗೆಯನ್ನು ಶೇ.5ಕ್ಕೆ ಇಳಿಸಲಾಗಿದೆ. ಅದರಂತೆ ಎಸಿ ಸೌಲಭ್ಯವಿರುವ ಹೋಟೆಲ್‌ನಲ್ಲಿ ಶೇ.13 ಹಾಗೂ ಎಸಿ ಸೌಲಭ್ಯವಿಲ್ಲದ ಹೋಟೆಲ್‌ಗ‌ಳಲ್ಲಿ ಶೇ.7ರಷ್ಟು ದರ ಇಳಿಸಲು ನಿರ್ಧರಿಸಲಾಗಿದೆ ಎಂದು ಹೋಟೆಲ್‌ ಮಾಲೀಕರ ಸಂಘ ತಿಳಿಸಿದೆ.

ಆದರೆ ಜಿಎಸ್‌ಟಿ ಜಾರಿಗೂ ಮೊದಲಿನ ಅಂದರೆ ಜೂನ್‌ ಅಂತ್ಯದ ಸಂದರ್ಭಕ್ಕೆ ಹೋಲಿಸಿದರೆ ರಾಜಿ ತೆರಿಗೆ ಪದ್ಧತಿಯಿದ್ದ ಹೋಟೆಲ್‌ಗ‌ಳಲ್ಲಿ ತಿಂಡಿ, ತಿನಿಸಿನ ಬೆಲೆಯಲ್ಲಿ ಶೇ.1ರಷ್ಟು ಹೆಚ್ಚಳವಾದರೆ ಹಾಗೂ ರಾಜಿ ತೆರಿಗೆ ಪದ್ಧತಿಯಿಲ್ಲದ ಹೋಟೆಲ್‌ಗ‌ಳಲ್ಲಿ ಶೇ.9.5ರಷ್ಟು ತೆರಿಗೆ ಇಳಿಕೆಯಾಗಬೇಕು. ಆ ಪ್ರಮಾಣದಲ್ಲಿ ತೆರಿಗೆ ಇಳಿಕೆಯಾಗದ ಕಾರಣ ಜನರಿಗೆ ಹೆಚ್ಚಿನ ಸೌಲಭ್ಯ ಸಿಗದಂತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಕೇಂದ್ರ ಸರ್ಕಾರವು ವಾರ್ಷಿಕ 20 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಹೋಟೆಲ್‌, ದರ್ಶಿನಿ, ಕ್ಯಾಂಟೀನ್‌ ಹೊರತುಪಡಿಸಿ ಹವಾನಿಯಂತ್ರಿತ ಹೋಟೆಲ್‌ಗ‌ಳಿಗೆ ಶೇ.18, ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಹೋಟೆಲ್‌ಗ‌ಳಿಗೆ ಶೇ.12ರಷ್ಟು ತೆರಿಗೆಯನ್ನು ಜಿಎಸ್‌ಟಿಯಡಿ ವಿಧಿಸಿ ಜುಲೈ 1ರಿಂದ ಜಾರಿಗೊಳಿಸಿತ್ತು. ಕಟ್ಟಡದ ಯಾವುದೇ ಭಾಗದಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿದ್ದರೂ ಇಡೀ ಹೋಟೆಲ್‌, ರೆಸ್ಟೋರೆಂಟ್‌, ದರ್ಶಿನಿಗೆ ಶೇ.18ರಷ್ಟು ತೆರಿಗೆ ವಿಧಿಸುತ್ತಿದ್ದರಿಂದ ಹೋಟೆಲ್‌ ಮಾಲೀಕರಿಗೆ ಹೊರೆಯಾಗಿ, ಅದನ್ನು ಗ್ರಾಹಕರಿಗೆ ವರ್ಗಾಯಿಸಲಾಗಿತ್ತು. ಇದರಿಂದ ತಿಂಡಿ, ತಿನಿಸಿನ ಬೆಲೆ ಸಾಕಷ್ಟು ಏರಿಕೆಯಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿತ್ತು.

Advertisement

ಹೋಟೆಲ್‌,ರೆಸ್ಟೋರೆಂಟ್‌ ಮಾಲೀಕರ ಮನವಿಯಂತೆ ಕೇಂದ್ರ ಸರ್ಕಾರ ತೆರಿಗೆ ಪ್ರಮಾಣ ಇಳಿಕೆ ಮಾಡುವುದಾಗಿ ಪ್ರಕಟಿಸಿತು. ಅದರಂತೆ ಮಂಗಳವಾರ ಅಧಿಸೂಚನೆಯೂ ಪ್ರಕಟವಾಗಿದ್ದು, ಪರಿಷ್ಕೃತ ತೆರಿಗೆ ದರಗಳು ಬುಧವಾರದಿಂದ ಜಾರಿಯಾಗಿವೆ.

ಶೇ.13, ಶೇ.7ರಷ್ಟು ಬೆಲೆ ಇಳಿಕೆ:
ಹಲವು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ತಿಂಡಿ, ತಿನಿಸಿನ ಬೆಲೆ ಇಳಿಕೆಯಾಗಿದೆ. ಎಸಿ ಹೋಟೆಲ್‌ಗ‌ಳಲ್ಲಿ ಶೇ.13 ಹಾಗೂ ಎಸಿರಹಿತ ಹೋಟೆಲ್‌ಗ‌ಳಲ್ಲಿ ಶೇ.7ರಷ್ಟು ಬೆಲೆ ಇಳಿಕೆ ಮಾಡಿ ಪೈಸೆ, ರೂಪಾಯಿ ಹೊಂದಾಣಿಕೆಗಾಗಿ ಪೂರ್ಣ ಬೆಲೆ ನಿಗದಿಪಡಿಸಿವೆ. ಇದು ಗ್ರಾಹಕರಿಗೆ ಸಂತಸ ತರಬಹುದು. ಆದರೆ ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಇಳಿಕೆಯ ಅಷ್ಟೂ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ ಎಂಬ ಮಾತು ಬಲವಾಗಿ ಕೇಳಿಬಂದಿದೆ.

ಕೆಲವೆಡೆ ಇನ್ನೂ ಬೆಲೆ ಇಳಿಕೆಯಾಗಿಲ್ಲ:
ಜಿಎಸ್‌ಟಿಯಡಿ ತೆರಿಗೆ ಇಳಿಕೆ ಬುಧವಾರದಿಂದ ಜಾರಿಯಾದರೂ ಅಧಿಸೂಚನೆ ಮಂಗಳವಾರ ರಾತ್ರಿ ಪ್ರಕಟವಾಗಿದೆ. ಇದರಿಂದ ಸರಿಯಾದ ಮಾಹಿತಿ ಸಿಕ್ಕಿಲ್ಲ. ಹಲವು ಹೋಟೆಲ್‌ಗ‌ಳಲ್ಲಿ ಸಾಫ್ಟ್ವೇರ್‌ ಬದಲಾವಣೆ ವಿಳಂಬವಾಗಿದ್ದು, ಹಳೆಯ ದರಗಳೇ ಮುಂದುವರಿದಿತ್ತು. ಕೆಲವೆಡೆ ಗ್ರಾಹಕರು ಕ್ಯಾಶಿಯರ್‌ಗಳ ಮಾಹಿತಿ ಕೇಳುತ್ತಿದ್ದುದು, ಬೆಲೆ ಇಳಿಕೆ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಸಹ ಕಂಡುಬಂತು.

ಎಸಿ, ಎಸಿರಹಿತ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಸಮಾನವಾಗಿ ಶೇ.5ಕ್ಕೆ ತೆರಿಗೆ ಇಳಿಕೆಯಾಗಿದ್ದು, ಅದರಂತೆ ಎಸಿ ಹೋಟೆಲ್‌ಗ‌ಳಲ್ಲಿ ಶೇ.13 ಹಾಗೂ ಎಸಿರಹಿತ ಹೋಟೆಲ್‌ಗ‌ಳಲ್ಲಿ ಶೇ.7ರಷ್ಟು ತೆರಿಗೆ ಇಳಿಕೆಯಾಗಲಿದೆ. ತೆರಿಗೆ ಇಳಿಕೆಯ ಅಷ್ಟೂ ಲಾಭ ಗ್ರಾಹಕರಿಗೆ ನೀಡುವಂತೆ ತಿಳಿಸಲಾಗಿದೆ. ಸಾಫ್ಟ್ವೇರ್‌ನಲ್ಲಿ ಪರಿಷ್ಕರಣೆಯಾಗಬೇಕಿರುವುದರಿಂದ ಕೆಲವೆಡೆ ದರ ಇಳಿಕೆಯಾಗಿಲ್ಲ. ಕೆಲ ದಿನಗಳಲ್ಲೇ ಎಲ್ಲ ಹೋಟೆಲ್‌ಗ‌ಳಲ್ಲಿ ದರ ಇಳಿಕೆಯಾಗಲಿದೆ.
– ಎಂ.ರಾಜೇಂದ್ರ, ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್ಸ್‌ ಸಂಘದ ಅಧ್ಯಕ್ಷ

ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ತೆರಿಗೆ ಇಳಿಕೆ ಮಾಡಿರುವುದರಿಂದ ಅದರ ಲಾಭವನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗುವುದು. ದಿನಸಿ, ತರಕಾರಿ ಬೆಲೆ ಏರಿಕೆಯಾಗಿದ್ದರೂ ಗ್ರಾಹಕರಿಗೆ ನೆರವಾಗಲು ಬೆಲೆ ಇಳಿಸಲು ನಿರ್ಧರಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಹೋಟೆಲ್‌ಗ‌ಳಲ್ಲೂ ಬೆಲೆ ಇಳಿಕೆಯಾಗಲಿದೆ.
– ಚಂದ್ರಶೇಖರ ಹೆಬ್ಟಾರ್‌, ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next