ಮಹಾನಗರ, ಮೇ 12: ಕೇಂದ್ರ ಸರಕಾರದ ಆವಾಸ್ ಯೋಜನೆಯಿಂದ ದೊರಕುವ ಒಂದೂವರೆ ಲಕ್ಷ ಅನುದಾನ, ರಾಜ್ಯ ಸರಕಾರ, ಮನಪಾದ ಸಹಕಾರದೊಂದಿಗೆ ಮತ್ತು ಬಿಜೆಪಿ ಸ್ಥಳೀಯ ಕಾರ್ಯಕರ್ತರು ಮತ್ತು ದಾನಿಗಳ ನೆರವಿನಿಂದ ಉರ್ವದ 26ನೇ ವಾರ್ಡ್‌ನಲ್ಲಿ ಗೀತಾ ಎಂಬುವವರಿಗೆ ಒಟ್ಟು ಆರು ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಲಾದ ‘ಅಟಲ್ ನಿಲಯ’ ಮನೆಯನ್ನು ರವಿವಾರ ಹಸ್ತಾಂತರಿಸಲಾಯಿತು.
ಮನೆ ಹಸ್ತಾಂತರ ಮಾಡಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಕೇಂದ್ರ ಸರಕಾರದ ಆವಾಸ್ ಯೋಜನೆಯಿಂದ ಹಲವಾರು ಬಡಜನರಿಗೆ ಮನೆ ಕಟ್ಟಲು ಅವಕಾಶ ಸಿಕ್ಕಿದೆ. ಇದರಂತೆ ಬಡ ಜನರ ನೆರವಿಗಾಗಿ ಮಾಡಿದ ಹಲವಾರು ಯೋಜನೆಗಳು ಮಾಹಿತಿಯ ಕೊರತೆಯಿಂದ ಅರ್ಹರಿಗೆ ಸಿಗುತ್ತಿಲ್ಲ. ಈ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
ಹಲವರಿಗೆ ಉಪಯೋಗ:
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಕೇಂದ್ರದ ವಿವಿಧ ಜನಪರ ಯೋಜನೆಗಳಿಂದ ಜಿಲ್ಲೆಯ ಸಾವಿರಾರು ಮಂದಿ ಉಪಯೋಗ ಪಡೆದು ಕೊಂಡಿದ್ದು, ಅದರೊಂದಿಗೆ ಗೀತಾ ಅವರ ಮನೆ ಸಂಪೂರ್ಣ ಕಟ್ಟಿಸಿಕೊಡು ವಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಶ್ರಮ ಮತ್ತು ದಾನಿಗಳ ಸಹಾಯವನ್ನು ಶ್ಲಾಘಿಸಿದರು.
ದಾನಿಗಳಾದ ಬಾಬಾ ಆಲಂಗಾರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಮಹಾಶಕ್ತಿ ಕೇಂದ್ರದ ಜನಾರ್ದನ ಕುಡ್ವ, ಮನಪಾ ಮಾಜಿ ಸದಸ್ಯರಾದ ರೂಪಾ ಡಿ. ಬಂಗೇರ, ಜಯಂತಿ ಆಚಾರ್, ವಾರ್ಡ್ ಅಧ್ಯಕ್ಷ ಅರುಣ್ ಉರ್ವ, ವಾರ್ಡ್ ಉಸ್ತುವಾರಿ ಗಣೇಶ್ ಕುಲಾಲ್, ಶಕ್ತಿ ಕೇಂದ್ರದ ಪ್ರಮುಖ್ ಕಿಶೋರ್ ಕುಮಾರ್, ಸುಧೀರ್ ಬಜಿಲಕೇರಿ, ಬಿಜೆಪಿ ಮುಖಂಡರಾದ ವಿನಯ ಎಲ್. ಶೆಟ್ಟಿ, ವಸಂತ ಜೆ. ಪೂಜಾರಿ, ಮೋಹನ್ ಆಚಾರ್, ಅಮಿತಕಲಾ, ವಿಜಯ ಉರ್ವ, ಸುಭೋದ್ ಕುಮಾರ್, ಸುಬ್ರಹ್ಮಣ್ಯ, ರಾಜಕುಮಾರ್ ಚಿಲಿಂಬಿ, ಚೆನ್ನಕೇಶವ, ದಾನಿಗಳಾದ ರಾಕೇಶ್ ಚಿಲಿಂಬಿ, ಅಜಿತ್ ಶೆಟ್ಟಿ, ರಂಜನ್ ಕುಮಾರ್, ಉಪೇಂದ್ರ ಉರ್ವಸ್ಟೋರ್, ಚಂದ್ರಹಾಸ್ ಬೋಳಾರ್, ಸುದರ್ಶನ್ ರಾವ್ ಉರ್ವ ಮತ್ತು ಇತರ ದಾನಿಗಳು ಉಪಸ್ಥಿತರಿದ್ದರು.