Advertisement

ಪರ್ಯಾಯ ಬೆಳೆಗಳತ್ತ ರೈತರನ್ನು ಸೆಳೆಯಲು ಕೇಂದ್ರದ ಯತ್ನ

11:18 PM Jun 09, 2022 | Team Udayavani |

ವಾರಗಳ ಹಿಂದೆಯಷ್ಟೇ ದೇಶದ ಪಶ್ಚಿಮ ಕರಾವಳಿಯನ್ನು ನೈಋತ್ಯ ಮಾರುತಗಳು ಪ್ರವೇಶಿಸಿದ್ದು, ನಿಧಾನವಾಗಿ ದೇಶದ ಒಂದೊಂದೇ ರಾಜ್ಯಕ್ಕೆ ಕಾಲಿಡಲಾರಂಭಿಸಿವೆ. ಮುಂಗಾರನ್ನೇ ಅವಲಂಬಿಸಿರುವ ದೇಶದ ಕೃಷಿ ವಲಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಸಜ್ಜಾಗುತ್ತಿದೆ. ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂಬ ಹವಾಮಾನ  ಇಲಾಖೆಯ ಮುನ್ಸೂಚನೆಯಿಂದ ಆಶಾವಾದದಲ್ಲಿರುವ ರೈತರು ಬೇಸಾಯ ಕಾರ್ಯಗಳನ್ನು ಆರಂಭಿಸಿದ್ದಾರೆ. ಈ ನಡುವೆಯೇ ಕೇಂದ್ರ ಸಂಪುಟ ಸಮಿತಿ ಭತ್ತ, ರಾಗಿ, ಸೂರ್ಯಕಾಂತಿ, ಸೋಯಾ, ಮೆಕ್ಕೆ ಜೋಳ, ಹತ್ತಿ ಸಹಿತ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ರೈತರಲ್ಲಿ ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದೆ.

Advertisement

ಮುಂಗಾರು ಮಳೆ ಸುರಿಯಲಾರಂಭಿಸಿರುವ ರಾಜ್ಯಗಳಲ್ಲಿ ರೈತರು ಬೇಸಾಯ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿದ್ದು ಕೃಷಿ ಭೂಮಿ ಯನ್ನು ಹದಗೊಳಿಸುವಲ್ಲಿ ನಿರತರಾಗಿದ್ದಾರೆ. ಇದೀಗ ಸರಕಾರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾ ರವನ್ನು ಪ್ರಕಟಿಸಿರುವುದರಿಂದ ರೈತರು ಬಿತ್ತನೆಗೂ ಮುನ್ನವೇ ಯಾವ ಬೆಳೆ ಬೆಳೆದರೆ ಹೆಚ್ಚಿನ ಆದಾಯ ಗಳಿಸಬಹುದು ಮತ್ತು ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸೀತು ಎಂದು ನಿರ್ಧರಿಸಿ ಆ ಬೆಳೆಗಳನ್ನು ಬೆಳೆಯಲು ಇದು ಅನುಕೂಲವಾಗಲಿದೆ. ಅಷ್ಟು ಮಾತ್ರವಲ್ಲದೆ  ಸಾಂಪ್ರದಾಯಿಕವಾಗಿ ಬೆಳೆಯುತ್ತ ಬಂದಿರುವ ಬೆಳೆಗಳ ಹೊರತಾಗಿ ಪರ್ಯಾಯ ಬೆಳೆಗಳನ್ನು ಬೆಳೆದಲ್ಲಿ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವೇ ಎಂದು ಮುಂದಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಕೇಂದ್ರದ  ಈ ನಿರ್ಧಾರ ಪೂರಕವಾಗಲಿದೆ.

“ಬಿತ್ತನೆ ಬೀಜದಿಂದ ಮಾರುಕಟ್ಟೆಯವರೆಗೆ’ ಎಂಬ ವಿನೂತನ ಪರಿಕಲ್ಪನೆಯಡಿ ಕೇಂದ್ರ ಸರಕಾರ  ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿದ್ದು ಇದು ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಲಭಿಸುವುದನ್ನು ಖಾತರಿಪಡಿಸಲಿದೆ. ಆಹಾರ ಬೆಳೆಗಳಲ್ಲದೆ ಧಾನ್ಯ, ವಾಣಿಜ್ಯ ಮತ್ತು ಎಣ್ಣೆಕಾಳು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ನಿರಾಶೆ ಅನುಭವಿಸಿದ್ದ ವಾಣಿಜ್ಯ ಬೆಳೆಗಾರರಿಗೆ ಇದರಿಂದ ಉತ್ತೇಜನ ಲಭಿಸಲಿದೆ. ಅದರಲ್ಲೂ ಮುಖ್ಯವಾಗಿ ಕೆಲವು ಎಣ್ಣೆಕಾಳು ಬೆಳೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಎರಡು ವರ್ಷಗಳಿಂದೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ದೇಶದಲ್ಲಿ ಖಾದ್ಯ ತೈಲ ಬೆಲೆ ಒಂದೇ ಸಮನೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹವಾಗಿದ್ದು ಈ ಬಾರಿಯ ಖಾರಿಫ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಎಣ್ಣೆಕಾಳುಗಳನ್ನು ಬೆಳೆಯಲು ಮುಂದಾಗುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಏತನ್ಮಧ್ಯೆ ದೇಶದ ಪ್ರಮುಖ ರೈತ ಸಂಘಟನೆಗಳು ಬೆಂಬಲ ಬೆಲೆ ಹೆಚ್ಚಳದ ಪ್ರಮಾಣ  ಸಾಲದು ಎಂದು ಅಸಮಾಧಾನ ವ್ಯಕ್ತ ಪಡಿಸಿವೆ. ಹಣ ದುಬ್ಬರ ಒಂದೇ ಸಮನೆ ಏರಿಕೆಯಾಗುತ್ತಿದ್ದರೆ ಡೀಸೆಲ್‌, ರಸಗೊಬ್ಬರದ ಬೆಲೆಯೂ ಏರಿಕೆಯಾಗಿದೆ. ಮುಂದಿನ ದಿನ ಗಳಲ್ಲಿ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿರುವುದರಿಂದ   ಬೆಂಬಲ ಬೆಲೆ ತೀರಾ ಅತ್ಯಲ್ಪವಾಗಿದೆ ಎಂದು ಪ್ರತಿಕ್ರಿಯಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ರೈತ ಸಂಘಟನೆಗಳ ಈ ಆಕ್ಷೇಪ ವಾಸ್ತವಕ್ಕೆ ಸನಿಹವಾಗಿದ್ದು ಇತ್ತ ಕೇಂದ್ರ ದೃಷ್ಟಿ ಹರಿಸುವ ಅಗತ್ಯವಿದೆ. ರೈತನಿಗೆ ಉತ್ಪಾದನ ವೆಚ್ಚಕ್ಕಿಂತ ಒಂದಿಷ್ಟು ಹೆಚ್ಚಿನ ಪ್ರಮಾಣದ ಆದಾಯ ಲಭಿಸುವಂತೆ ನೋಡಿಕೊಳ್ಳಬೇಕಾಗಿರುವುದು ಕೂಡ ಸರಕಾರದ ಕರ್ತವ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next