ಬೆಂಗಳೂರು: ಬ್ಲ್ಯಾಕ್ ಆಂಡ್ ವೈಟ್ ದಂಧೆ, ದರೋಡೆ, ಅಪಹರಣ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಲ್ಲಿರುವ ಮಾಜಿ ಕಾರ್ಪೊರೇಟರ್ ವಿ. ನಾಗರಾಜ್ ಹಾಗೂ ಆತನ ಪುತ್ರರು ತಮ್ಮ ಮೇಲಿನ ಪ್ರಕರಣಗಳ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ.
ಮಾಜಿ ಕಾರ್ಪೊರೇಟರ್ ನಾಗರಾಜ್, ಆತನ ಮಕ್ಕಳಾದ ಗಾಂಧಿ, ಶಾಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ತನಿಖೆ ನಡೆಸಲಿ ಎಂದು ಅಭಿಪ್ರಾಯಪಟ್ಟಿತು.
“ನಾನು ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದೇ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದ್ದು, ವಿನಾಕಾರಣ ಶ್ರೀರಾಂಪುರ, ಬಾಣಸವಾಡಿ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ರಾಜ್ಯ ಪೊಲೀಸರೇ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವುದರಿಂದ ನ್ಯಾಯ ಸಿಗುವ ಭರವಸೆಯಿಲ್ಲ. ಹೀಗಾಗಿ ತಮ್ಮ ಮೇಲಿನ ಪ್ರಕರಣಗಳನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಬೆಳಕಿಗೆ ಬಂರಲಿದೆ. ಹೀಗಾಗಿ ಸಿಬಿಐಗೆ ವಹಿಸಲು ರಾಜ್ಯಸರ್ಕಾರಕ್ಕೆ ನಿರ್ದೇಶಿಸಬೇಕು,’ ಎಂದು ನಾಗರಾಜ್ ಅರ್ಜಿಯಲ್ಲಿ ಕೋರಿದ್ದ.
ನೋಟು ಅಮಾನ್ಯದ ಬಳಿಕ ಹಲವು ಉದ್ಯಮಿಗಳಿಗೆ ಹಳೇ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಕರೆಸಿಕೊಂಡು ಬಳಿಕ ಅಪಹರಣ ಮಾಡಿ, ಹಲ್ಲೆ ನಡೆಸಿ ಕೋಟ್ಯಾಂತರ ರೂ. ದರೋಡೆ ಮಾಡಿರುವ ಸಂಬಂಧ ಬಾಣಸವಾಡಿ, ಶ್ರೀರಾಂಪುರ, ಕೆಂಗೇರಿ, ಸೇರಿ ಆರು ಠಾಣೆಗಳಲ್ಲಿ ನಾಗ ಹಾಗೂ ಆತನ ಮಕ್ಕಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ನಾಗರಾಜ್‌ನ ಬಂಧನದ ಬಳಿಕ ವಿಚಾರಣೆ ಪೂರ್ಣಗೊಳಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.