ಬೆಂಗಳೂರು: ಸಿಬಿಐ ಬಿಜೆಪಿಯ ಅಂಗ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಎಐಸಿಸಿ ಮಾಧ್ಯಮ ಘಟಕದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸಿಬಿಐ ತನಿಖೆ ನಡೆಸುತ್ತಿದ್ದ ಕರ್ನಾಟಕದ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಮುಚ್ಚಿ ಹಾಕುವ ಮಾಡುವ ಮೂಲಕ ರೆಡ್ಡಿ ಸಹೋದರರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ದೂರಿದರು.
ಕರ್ನಾಟಕ ಆಂಧ್ರಪ್ರದೇಶ, ಗೋವಾ ಹಾಗೂ ತಮಿಳುನಾಡಿನ ಒಂಬತ್ತು ಬಂದರುಗಳಿಂದ 35 ಸಾವಿರ ಕೋಟಿ ರೂ. ಬೆಲೆ ಬಾಳುವ ಅದಿರನ್ನು ವಿದೇಶಕ್ಕೆ ಅಕ್ರಮವಾಗಿ ಸಾಗಾಣೆ ಮಾಡಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿತ್ತು.
ಬಿಜೆಪಿ ಯಡಿಯೂರಪ್ಪ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ತಕ್ಷಣ ಗೋವಾದ ಎರಡು ಬಂದರಿನಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿದ್ದ ಅದಿರಿನ ಬಗ್ಗೆ ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ ಎಂದು ಸಿಬಿಐ ಪ್ರಕರಣವನ್ನು ಮುಚ್ಚಿ ಹಾಕಿದೆ.
ಇದೇ ವೇಳೆ, ಚುನಾವಣಾ ಸಮೀಕ್ಷೆಗಳು ರಾಜ್ಯದ ಜನತೆಗೆ ಅವಮಾನ ಮಾಡುತ್ತಿವೆ. ಆರು ಕೋಟಿ ಜನರ ಅಭಿಪ್ರಾಯವನ್ನು ಕೆಲವೇ ಕೆಲವು ಮಂದಿಯಿಂದ ಪಡೆದು ಸಮೀಕ್ಷೆ ಬಿಡುಗಡೆ ಮಾಡುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅಪಮಾನ ಎಂದರು.