ಸಾಹಿತಿ ಜಿ.ಕೆ. ಚೆಸ್ಟರ್‌ಟನ್ ಮತ್ತು ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಒಳ್ಳೆಯ ಗೆಳೆಯರಾಗಿದ್ದರು. ಷಾ ಸಣಕಲ. ಚೆಸ್ಟರ್‌ಟನ್ ಸಣಕಲ ಎಂಬ ಪದಕ್ಕೆ ವಿರುದ್ಧಾರ್ಥಕ ಪದ ಎಂಬಂತೆ ದಢೂತಿ ದೇಹಿ. ಇಬ್ಬರೂ ಜೊತೆಯಾಗಿ ನಿಂತರೆ ಲಾರೆಲ್ ಮತ್ತು ಹಾರ್ಡಿಯನ್ನು ನೋಡಿದಂತೆಯೇ ಭಾಸವಾಗುತ್ತಿತ್ತು. ಇಬ್ಬರೂ ತಮ್ಮ ಮೈಕಟ್ಟನ್ನು ಹೋಲಿಸಿಕೊಂಡು ಜೋಕ್ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಒಮ್ಮೆ ಷಾ ಹೇಳಿದರು: ನಾನು ನಿನ್ನ ಹಾಗೆ ದಢೂತಿಯಾಗಿದ್ದರೆ ಬೇಸರ ಬಂದು ನೇಣು ಹಾಕ್ಕೊಳ್ತಿದ್ದೆ. ಚೆಸ್ಟರ್‌ಟನ್ ತಿರುಗೇಟು ಕೊಟ್ಟರು: ನನಗೇನಾದರೂ ಹಾಗೆ ಸಾಯಬೇಕು ಅಂತ ಯೋಚನೆ ಬಂದಿದ್ದರೆ ನಿನ್ನನ್ನೇ ಹಗ್ಗವಾಗಿ ಮಾಡಿಕೊಳ್ತಿದ್ದೆ. ಇನ್ನೊಂದು ಸಂದರ್ಭದಲ್ಲಿ ಚೆಸ್ಟರ್‌ಟನ್, ಷಾರನ್ನು ತಿವಿದರು: ಹೊರದೇಶದವರು ಯಾರಾದರೂ ನಿನ್ನನ್ನು ನೋಡಿದರೆ ನಮ್ಮ ದೇಶಕ್ಕೆ ಕ್ಷಾಮ ಬಂದಿದೆ ಅಂತ ತಿಳಿಯುತ್ತಾರೆ ಕಣಯ್ಯ! ಷಾ ಏನು ಬಿಟ್ಟಾರೆ? ತಿರುಗಿ ಮಾತಿನಿಂದ ಬಾರಿಸಿದರು: ಮತ್ತು ನಿನ್ನನ್ನು ನೋಡಿದರೆ ಆ ಕ್ಷಾಮಕ್ಕೆ ಕಾರಣ ತಿಳಿಯುತ್ತಾರೆ.
ರೋಹಿತ್ ಚಕ್ರತೀರ್ಥ