Advertisement

ಕೊಕ್ರಾಡಿ: ವಿದ್ಯುತ್‌ ದುರಂತಕ್ಕೆ ಸಿಡಿಲು ಕಾರಣ?

09:27 AM Apr 06, 2019 | Team Udayavani |

ವೇಣೂರು: ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಗುರುವಾರ ತಡರಾತ್ರಿ ವಿದ್ಯುತ್‌ ಸ್ಪರ್ಶವಾಗಿ ದಂಪತಿ ದಾರುಣವಾಗಿ ಸಾವಿಗೀಡಾಗಲು ಸಿಡಿಲು ಕಾರಣ ಎಂದು ಶಂಕಿಸಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಕೊಕ್ರಾಡಿ ಗ್ರಾಮದ ಪಾಡಿ ಬನತ್ಯರಡ್ಡ ಮನೆ ಸಂಜೀವ ಮೂಲ್ಯ (61) ಹಾಗೂ ಅವರ ಪತ್ನಿ ಸರೋಜಿನಿ (44) ಮೃತಪಟ್ಟಿದ್ದು, ಪುತ್ರಿ ಅಶ್ವಿ‌ತಾ ಹಾಗೂ ಸಂಬಂಧಿ ಸುಜಿತ್‌ ಪಾರಾಗಿದ್ದಾರೆ.

ನಡೆದದ್ದೇನು?
ಗುರುವಾರ ತಡರಾತ್ರಿ ಗುಡುಗು ಸಹಿತ ಮಳೆ ಬರುತ್ತಿದ್ದು, ವಿದ್ಯುತ್‌ ಕಡಿತವಾಗಿತ್ತು. ಆ ಸಂದರ್ಭ ದಿಢೀರ್‌ ವಿದ್ಯುತ್‌ ಪ್ರವಹಿಸಿ ಸ್ವಿಚ್‌ ಬೋರ್ಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾವಡಿಯಲ್ಲಿ ಬೀಡಿ ಕಟ್ಟುತ್ತಿದ್ದ ಸರೋಜಿನಿ ಅವರು ಗಾಬರಿಯಿಂದ ಫ್ಯೂಸ್‌ ತೆಗೆಯಲೆಂದು ಹೊರಗೆ ಓಡಿದಾಗ ಅಂಗಳದಲ್ಲಿದ್ದ ಅರ್ಥ್ ವಯರ್‌ನಿಂದ ವಿದ್ಯುತ್‌ ಸ್ಪರ್ಶವಾಗಿ ಸಾವನ್ನಪ್ಪಿದರು.

ಆಗತಾನೆ ಮಲಗಿದ್ದ ಸಂಜೀವ ಮೂಲ್ಯರು ಪತ್ನಿಯ ಬೊಬ್ಬೆ ಕೇಳಿ ಹೊರಗೆ ಬಂದಿದ್ದು, ಅವರು ಕೂಡ  ಅರ್ಥ್ ವಯರ್‌ ತುಳಿದು ಸ್ಥಳದಲ್ಲೇ ಮಟೃತಟ್ಟರು. ಮನೆಯಲ್ಲಿದ್ದ ಪುತ್ರಿ ಅಶ್ಚಿತಾ ಹಾಗೂ ಸಂಬಂಧಿ ಸುಜಿತ್‌ ಬೇರೆ ಬಾಗಿಲಿನಿಂದ ಹೊರ ಬಂದ ಕಾರಣ ಪಾರಾಗಿದ್ದಾರೆ. ಸ್ವಿಚ್‌ ಬೋರ್ಡ್‌ ಹಾಗೂ ವಯರಿಂಗ್‌ ಸುಟ್ಟು ಕರಕಲಾಗಿದ್ದು, ಸೋಫಾ ಕೂಡ ಕರಟಿಹೋಗಿದೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಿಹಾರ ಘೋಷಿಸಲು ಆಗ್ರಹ
ಮೃತಪಟ್ಟ ದಂಪತಿಯ ಕುಟುಂಬಕ್ಕೆ ಪರಿಹಾರ ಘೋಷಿಸು ವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದಿದ್ದರೂ ಪರಿಹಾರ ಘೋಷಿ ಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಸಿಐ ಸಂದೇಶ್‌ ಪಿ.ಜಿ., ಶಾಸಕ ಹರೀಶ್‌ ಪೂಂಜ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌ ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಎಎಸ್‌ಪಿ ಸಾಹಿದುಲ್ಲಾ ಅದಾವತ್‌ ಮನೆಗೆ ಭೇಟಿ ನೀಡಿದ್ದಾರೆ.

Advertisement

ಬಡ ಕುಟುಂಬ
ಸಂಜೀವ ಮೂಲ್ಯರು ಹಲವು ಕಡೆಗಳಲ್ಲಿ ಪ್ರಶಸ್ತಿ ಗಳಿಸಿದ್ದ ಪ್ರಗತಿಪರ ಕೃಷಿಕರು. ಸರೋಜಿನಿ ಬೀಡಿ ಕಾರ್ಮಿ ಕೆ. ಪುತ್ರಿ ಅಶ್ವಿ‌ತಾ ಅವರು ವಾಮದಪದವು ಸ.ಪ್ರ.ದ. ಕಾಲೇಜಿನ ಪದವಿ ವಿದ್ಯಾರ್ಥಿನಿ. ಈಗ ಹೆತ್ತವರನ್ನು ಕಳೆದುಕೊಂಡ ಪುತ್ರಿ ಅನಾಥೆಯಾಗಿದ್ದಾರೆ.

ಟ್ರಾನ್ಸ್‌ಫಾರ್ಮರ್‌ನಲ್ಲೂ ಬೆಂಕಿ
ಟ್ರಾನ್ಸ್‌ಫಾರ್ಮರ್‌ಗೆ ಏಕಾಏಕಿ ಅಧಿಕ ಪ್ರಮಾಣದ ವಿದ್ಯುತ್‌ ಪ್ರವಹಿಸಿದ ಪರಿಣಾಮ ಟ್ರಾನ್ಸ್‌ಫಾರ್ಮರ್‌ನಲ್ಲಿ ಭಾರೀ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸ್ಥಳದಲ್ಲಿದ್ದ ಪೊದೆಯೂ ಕರಟಿ ಹೋಗಿದೆ. ಈ ಟ್ರಾನ್ಸ್‌ಫಾರ್ಮರ್‌ನಿಂದ ಸಂಪರ್ಕಿಸುವ ಮೂರ್‍ನಾಲ್ಕು ಮನೆಗಳ ವಯರಿಂಗ್‌ಗಳು ಕೂಡ ಸುಟ್ಟುಹೋಗಿದೆ ಎಂದು ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next