ಶಿವಮೊಗ್ಗ: ಅಬ್ಬಲಗೆರೆ ಕೆರೆಯ ಮಣ್ಣು ತೆಗೆದ ಪ್ರಕರಣಕ್ಕೆ ಸಂಬಂ ಧಿಸಿ ವರದಿ ಸಲ್ಲಿಸದ ಶಿವಮೊಗ್ಗ ಜಿ.ಪಂ. ಸಿಇಒ ಬಂಧನಕ್ಕೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಡಿ.21ರಂದು ವಾರಂಟ್ ಹೊರಡಿಸಿದೆ. ಫೆ. 16ರಂದು ಬೆಳಗ್ಗೆ 11 ಗಂಟೆಗೆ ಕೋರ್ಟ್‌ಗೆ ವರದಿ ಸಲ್ಲಿಸ ಬೇಕು ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಪ್ರಕರಣದ ವಿವರ
ಶಿವಮೊಗ್ಗದಲ್ಲಿ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಖಾಸಗಿ ಬಡಾವಣೆ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡಲು ನಗರ ಹೊರವಲಯದ ಅಬ್ಬಲಗೆರೆ ಕೆರೆಯಲ್ಲಿ ನಿಯಮ ಬಾಹಿರವಾಗಿ ಮಣ್ಣು ತೆಗೆದು ಸರಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ್ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸರಕಾರ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಜಿಪಂ ಕಾರ್ಯ ಪಾಲಕ ಎಂಜಿನಿಯರ್, 500 ಲೋಡ್ ಮಣ್ಣು ತೆಗೆಯಲು 56 ಸಾವಿರ ರೂ. ಮಾತ್ರ ಪಾವತಿಸಲಾಗಿದೆ. ಆದರೆ ಕೆರೆಯಲ್ಲಿ 72,01,920 ರೂ. ರಾಜಧನದಷ್ಟು 15,004 ಲೋಡ್ ಫಲ ವತ್ತಾದ ಮಣ್ಣನ್ನು ಸಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ ನ್ಯಾಯಾಲಯದ ನ್ಯಾಯಿಕ ಸದಸ್ಯ ಪಾಟೀಲ್ ನಾಗಲಿಂಗನಗೌಡ ಅವರು ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಕಲಂ 9ರಡಿ ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಳ್ಳಬಹುದಾಗಿದೆ ಎಂದು ಟಿಪ್ಪಣಿ ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಇದಕ್ಕೆ ಸಂಬಂಧಿಸಿ ನ.24ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಅ.20ರಂದು ಆದೇಶ ನೀಡಿತ್ತು.
ನಮ್ಮ ಅಧಿಕಾರಿಗಳಿಂದ ವರದಿ ತಯಾರಿಕೆ ತಡವಾದ ಕಾರಣ ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈಗ ವರದಿ ಸಿದ್ಧವಾಗಿದ್ದು, ಕೂಡಲೇ ನ್ಯಾಯಾಲಯಕ್ಕೆ ಸಲ್ಲಿಸಿ ಆದೇಶ ಪಾಲಿಸಲಾಗುವುದು.
– ಸ್ನೇಹಲ್ ಸುಧಾಕರ್ ಲೋಖಂಡೆ, ಸಿಇಒ, ಶಿವಮೊಗ್ಗ ಜಿ.ಪಂ.