ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸಲು ಚುನಾವಣಾ ಆಯೋಗಕ್ಕೆ ಲಂಚ ಕೊಡಲು ಮುಂದಾಗಿ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಬೆಂಗಳೂರು ಮೂಲದ ಬಾಲಾಜಿ ಅಲಿಯಾಸ್ ಸುಕೇಶ್ ಚಂದ್ರಶೇಖರ್, ನಗರದಲ್ಲಿಯೂ ಉದ್ಯಮಿಗಳು ಸೇರಿದಂತೆ ಹಲವರಿಗೆ ವಂಚಿಸಿದ್ದಾನೆ.
ಅಧಿಕಾರಸ್ಥ ರಾಜಕೀಯ ಮುಖಂಡರ ಸಂಬಂಧಿಕನೆಂದು ಹೇಳಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿ ಪೊಲೀಸರ ಬಲೆಗೆ ಬಿದ್ದು ಜೈಲಿಗೆ ಹೋಗಿದ್ದ ಸುಕೇಶ್ ಚಂದ್ರಶೇಖರ್, ನಂತರ ಜೈಲಿನಿಂದ ಹೊರಬಂದು ಉದ್ಯೋಗ ಮೇಳ ನಡೆಸಿ ಉದ್ಯೋಗ ಕೊಡಿಸುವುದಾಗಿ ಹಲವರ ಬಳಿ 75 ಕೋಟಿ ರೂ.ವರೆಗೆ ಪಡೆದು ವಂಚಿಸಿ ಮತ್ತೆ ಜೈಲು ಸೇರಿದ್ದ.
ಸುಖೇಶ್ ಚಂದ್ರಶೇಖರ್ ವಿರುದ್ಧ ನಗರದ ಹಲಸೂರು, ಕಬ್ಬನ್‌ಪಾರ್ಕ್, ಹುಳಿಮಾವು ಸೇರಿದಂತೆ ಹತ್ತಾರು ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಚಂದ್ರಲೇಔಟ್ ನಿವಾಸಿಯಾದ ಸುಖೇಶ್ ಚಂದ್ರಶೇಖರ್, ರೆಸೆಡೆನ್ಸಿ ರಸ್ತೆಯಲ್ಲಿರುವ ಬಿಷಪ್ ಕಾಟನ್ ಶಾಲೆಯಲ್ಲಿ 9ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. ನಂತರ ಸಣ್ಣ-ಪುಟ್ಟ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಾ ತನ್ನ 17ನೇ ವಯಸ್ಸಿನಲ್ಲೇ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ.
2011ರಲ್ಲಿ ತನ್ನ ತಂದೆಯ ಮೊಬೈಲ್‌ನಿಂದ ಉದ್ಯಮಿಗಳಿಗೆ ಕರೆ ಮಾಡಿ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡು, ಸರ್ಕಾರಿ ಶಾಲೆಗಳಿಗೆ ಅಡುಗೆ ಸಾಮಗ್ರಿ ಟೆಂಡರ್ ಕೊಡಿಸುವುದಾಗಿ ಉದ್ಯಮಿಗಳಿಂದ ಲಕ್ಷಾಂತರ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ಪ್ರಕರಣದಲ್ಲಿ ಬಂಧನವಾಗಿ ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ತನ್ನ ವರಸೆ ಪ್ರಾರಂಭಿಸಿ ನಾನು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಎಂದು ಹೇಳಿಕೊಂಡು ತಮಿಳುನಾಡು ಮೂಲದ ಲಯನ್ ಡೇಟ್ಸ್ ಕಂಪನಿಗೆ ಕರೆ ಮಾಡಿ ಶಾಲೆಗಳಿಗೆ ಖರ್ಜೂರ ವಿತರಿಸುವ ಟೆಂಡರ್ ಕೊಡಿಸುವುದಾಗಿ ಹೇಳಿ 80 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ನಂತರ ಮತ್ತೆ ಕರೆ ಮಾಡಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.
ಇದರಿಂದ ಅನುಮಾನಗೊಂಡ ಕಂಪನಿ ಅಧಿಕಾರಿಗಳು, ರಾಜ್ಯ ಸರ್ಕಾರದ ಪತ್ರದ ಮೂಲಕ ವ್ಯವಹರಿಸುವಂತೆ ಸೂಚಿಸಿ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಅವರಿಗೆ ದೂರು ನೀಡಿದ್ದು, ಪ್ರಕರಣ ಸಿಸಿಬಿ ವರ್ಗಾವಣೆಯಾಗಿ ತನಿಖೆ ನಡೆಸಿದ ಪೊಲೀಸರು ಕೋರಮಂಗಲ ಸಮೀಪದ ರಹೇಜಾ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದರು. ಅಲ್ಲದೆ, ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖೀಲ್‌ಗೌಡನ ಸ್ನೇಹಿತ ಎಂದು ಹೇಳಿಕೊಂಡು ಕೆಲವರ ಬಳಿ ಹಣ ಪಡೆದಿದ್ದ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.