Advertisement

ಗಾಂಜಾ ಮಾರುತ್ತಿದ್ದ ಮೂವರು ವಿದ್ಯಾರ್ಥಿಗಳ ಸೆರೆ

06:52 AM May 16, 2019 | Lakshmi GovindaRaj |

ಬೆಂಗಳೂರು: ಕೇರಳ ಮತ್ತು ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದ ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸುದ್ದಗುಂಟೆಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೇರಳ ಮೂಲದ ಶ್ಯಾಮ್‌ದಾಸ್‌ (25), ಆರಿಶ್‌ ಕುಮಾರ್‌ (24) ಮತ್ತು ಜಬೀನ್‌ ಜಾನ್‌ (21) ಬಂಧಿತರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಗೋಕುಲ್‌ ಮತ್ತು ಆರೋಮಲ್‌ ಎಂಬವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಆರೋಪಿಗಳಿಂದ 23 ಕೆ.ಜಿ 300 ಗ್ರಾಂ ಗಾಂಜಾ ಮತ್ತು ಎರಡು ತೂಕದ ಯಂತ್ರಗಳು ಹಾಗೂ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿಗಳ ಪೈಕಿ ಜಬೀನ್‌ ಜಾನ್‌ ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ-ಟೆಕ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾನೆ. ಶ್ಯಾಮ್‌ದಾಸ್‌ ನಗರದ ಖಾಸಗಿ ಕಾಲೇಜಿನಲ್ಲಿ ಬಿಎ ಇಂಗ್ಲಿಷ್‌ ಸಾಹಿತ್ಯ, ಆರಿಶ್‌ ಕುಮಾರ್‌ ಸಿವಿಲ್‌ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ತಲೆಮರೆಸಿಕೊಂಡಿರುವ ಗೋಕುಲ್‌ ಮತ್ತು ಆರೋಮಲ್‌ ಎಂಬಿಎ ಪದವಿ ಪಡೆದಿದ್ದು, ಕೆ.ಆರ್‌.ಪುರ ಸಮೀಪದ ಆವಲಹಳ್ಳಿಯಲ್ಲಿ ವಾಸವಾಗಿದ್ದರು ಎಂದು ಅವರು ಹೇಳಿದರು.

ಕೇರಳ ಮತ್ತು ಆಂಧ್ರಪ್ರದೇಶದ ಗಾಂಜಾ ದಂಧೆಕೋರರ ಜತೆ ನೇರ ಸಂಪರ್ಕದಲ್ಲಿರುವ ಜಬೀನ್‌ ಜಾನ್‌, ಕಡಿಮೆ ಮೊತ್ತಕ್ಕೆ ಅಲ್ಲಿಂದ ಕೆಜಿಗಟ್ಟಲೇ ಗಾಂಜಾ ತಂದು ಇತರೆ ಆರೋಪಿಗಳಿಗೆ ಕೊಡುತ್ತಿದ್ದ. ನಂತರ ಅವುಗಳನ್ನು 50, 100 ಗ್ರಾಂ ತೂಕದ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ, ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮಾದಕ ವಸ್ತು ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದರು.

Advertisement

ಅಲ್ಲದೆ, ಶ್ಯಾಮ್‌ದಾಸ್‌, ಆರಿಶ್‌ ಕುಮಾರ್‌ ಮತ್ತು ಗೋಕುಲ್‌, ನೆರೆ ರಾಜ್ಯದಿಂದ ಗಾಂಜಾ ಬರುತ್ತಿದ್ದಂತೆ ತಮ್ಮ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ “ಮಾಲು ಬಂದಿದೆ’ ಎಂದು ಸಂದೇಶ ನೀಡುತ್ತಿದ್ದರು. ಈ ಮಾಹಿತಿ ಪಡೆದ ಕೆಲ ವ್ಯಸನಿಗಳು ನಿಗದಿತ ಜಾಗಕ್ಕೆ ಹೋಗಿ ಹೆಚ್ಚಿನ ಬೆಲೆಗೆ ಗಾಂಜಾ ಖರೀದಿ ಮಾಡುತ್ತಿದ್ದರು.

ಆರೋಪಿಗಳು ಇತ್ತೀಚೆಗೆ ಸುದ್ದಗುಂಟೆಪಾಳ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕೆ.ಆರ್‌.ಪುರದಲ್ಲಿರುವ ಪ್ರಮುಖ ಆರೋಪಿ ಗೋಕುಲ್‌ ಮನೆ ಮೇಲೆ ದಾಳಿ ನಡೆಸಲಾಯಿತು. ಆದರೆ, ಆ ವೇಳೆಗಾಗಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಬೇಸಿಗೆ ರಜೆ, ಪಾರ್ಟಿ ಜೋರು: ಬೇಸಿಗೆ ರೆಜೆ ಇರುವುದರಿಂದ ಸಾಮಾನ್ಯವಾಗಿ ನಗರ ಹಾಗೂ ನಗರದ ಹೊರವಲಯದ ಕೆಲವೆಡೆ ಯುವ ಸಮೂಹ ಜೋರು ಪಾರ್ಟಿ ಮಾಡುತ್ತದೆ. ಅದನ್ನೇ ಗುರಿಯಾಗಿರಿಸಿಕೊಂಡಿದ್ದ ಆರೋಪಿಗಳು, ಹತ್ತಾರು ಕೆ.ಜಿ ಗಾಂಜಾ ತಂದು, ಪಾರ್ಟಿ ನಡೆಯುವ ನಿರ್ದಿಷ್ಟ ಪ್ರದೇಶಗಳಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ, ನಗರದಲ್ಲಿರುವ ಇತರೆ ಗಾಂಜಾ ಮಾರಾಟಗಾರರಿಗೂ ಕೊಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಗಾಂಜಾ ಮಾರಾಟ ಮಾಡಿ ಬಂದ ಹಣದಲ್ಲಿ ಆರೋಪಿಗಳು ಮೋಜಿನ ಜೀವನ ನಡೆಸುತ್ತಿದ್ದರು. ಸದಾ ಪಾರ್ಟಿ, ಪಬ್‌, ಪ್ರವಾಸ ಎಂದೆಲ್ಲ ಹಣ ವ್ಯಯ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next