Advertisement

ರಾಜಧಾನಿಗೂ ಬಂತು ಹೌಸ್‌ ಲಿಫ್ಟಿಂಗ್‌

12:04 PM Sep 25, 2018 | Team Udayavani |

ಬೆಂಗಳೂರು: ನಗರದಲ್ಲಿ ಸ್ವಲ್ಪ ಮಳೆ ಬಿದ್ದರೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದು ಸಾಮಾನ್ಯ. ಇದಕ್ಕೆ ಪ್ರಮುಖ ಕಾರಣ ಮನೆಗಳು ತಗ್ಗು ಪ್ರದೇಶಗಳಲ್ಲಿ ಇರುವುದು. ಹೀಗಿರುವಾಗ ಮಳೆ ನೀರು ಮನೆಯೊಳಗೆ ನುಗ್ಗದಂತೆ ಆ ಮನೆಗಳನ್ನೇ ಬುಡ ಸಹಿತ ಮೇಲಕ್ಕೆದರೆ ಹೇಗಿರುತ್ತದೆ?

Advertisement

ಕಲ್ಪನೆಗೂ ಮೀರಿದ ಇಂತಹದ್ದೊಂದು ಪ್ರಯೋಗ ಈಗ ನಗರದಲ್ಲಿ ನಡೆದಿದೆ. ಆವಲಹಳ್ಳಿಯ ಎಂಇಎಸ್‌ ಬಡಾವಣೆಯ ತಗ್ಗು ಪ್ರದೇಶದಲ್ಲಿರುವ ಒಂದು ಮನೆ ಮೇಲೆ ಈ ಪ್ರಯೋಗ ನಡೆದಿದ್ದು, ಯಶಸ್ವಿಯೂ ಆಗಿದೆ. ಮಳೆಗಾಲದಲ್ಲಿ ಆವಲಹಳ್ಳಿ ಸುತ್ತಮುತ್ತಲಿನ ಪ್ರದೇಶ ಜಲಾವೃತ್ತಗೊಂಡು ಮನೆಗಳಿಗೆ ನೀರು ನುಗ್ಗುತ್ತದೆ. ಈ ಭಾಗದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪಾಲಿಕೆ ರಸ್ತೆಯ ಎತ್ತರ ಹೆಚ್ಚಿಸಿದೆ.

ಇದರಿಂದಾಗಿ ಮಳೆ ಬಂದಾಗ ಯಾವ ಕ್ಷಣ ನೀರು ಮನೆಗೆ ನುಗ್ಗುತ್ತದೋ ಎಂದು ಇಲ್ಲಿನ ಜನ ಅಕ್ಷರಶಃ ಜಾಗರಣೆ ಮಾಡುತ್ತಾರೆ. ಹೀಗಿರುವಾಗ ಅಲ್ಲಿನ ಮನೆ ಮಾಲೀಕರೊಬ್ಬರು ಹೊಸ ತಂತ್ರಜ್ಞಾನ ಬಳಸಿ ತಮ್ಮ ಮನೆಯನ್ನು, ನೆಲಮಟ್ಟದಿಂದ ನಾಲ್ಕರಿಂದ ಐದು ಅಡಿ ಎತ್ತರಿಸಿ, ಮನೆಗೆ ನೀರು ನುಗ್ಗುವ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇದು ಸುತ್ತಲಿನ ಜನರ ಹುಬ್ಬೇರಿಸುವಂತೆ ಮಾಡಿದ್ದು, ತಾವೂ ಆ ತಂತ್ರಜ್ಞಾನದ ಮೊರೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ವಿದೇಶಕ್ಕೆ ಸಿಮೀತವಾಗಿದ್ದ ಮತ್ತು ದೇಶದ ಕೆಲವೇ ಕಡೆಗಳಲ್ಲಿ ಇದ್ದ “ಹೌಸ್‌ ಲಿಫ್ಟಿಂಗ್‌’ ತಂತ್ರಜ್ಞಾನ ಈ ಮೂಲಕ ಬೆಂಗಳೂರಿಗೂ ಕಾಲಿಟ್ಟಿದೆ. ಆವಲಹಳ್ಳಿ ಭಾಗದಲ್ಲಿ ಪಾಲಿಕೆಯವರು ರಸ್ತೆ ಹಾಗೂ ಚರಂಡಿಯ ಎತ್ತರ ಹೆಚ್ಚಿಸಿದ್ದರಿಂದ ಮನೆಗಳು ರಸ್ತೆ ಮಟ್ಟಕ್ಕಿಂತ ಕೆಳಗೆ ಹೋಗುತ್ತಿವೆ. ಇದರಿಂದಾಗಿ ಸ್ವಲ್ಪ ಮಳೆ ಬಂದರೂ ನೀರು ಸರಾಗವಾಗಿ ಮನೆಗಳಿಗೆ ನುಗ್ಗುತ್ತಿದೆ.

ಇದರಿಂದ ಬೇಸತ್ತ ವ್ಯಕ್ತಿಯೊಬ್ಬರು (ಹೆಸರು ಹೇಳಲು ನಿರಾಕರಿಸಿದ್ದಾರೆ) ಮನೆ ನೆಲಸಮ ಮಾಡಿ, ಪಾಯದ ಎತ್ತರ ಹೆಚ್ಚಿಸಿ ಹೊಸ ಮನೆ ನಿರ್ಮಿಸಲು ಮುಂದಾಗಿದ್ದರು. ಈ ವೇಳೆ ಅವರ ಸ್ನೇಹಿತರೊಬ್ಬರು, ಮನೆ ಕೆಡವಿ ಕಟ್ಟಲು ವೆಚ್ಚ ಹೆಚ್ಚಾಗುತ್ತದೆ. ಅದರ ಬದಲು ಮನೆಯನ್ನು ಇದ್ದ ಜಾಗದಿಂದಲೇ ಜಾಕ್‌ ಮೂಲಕ ಮೇಲಕ್ಕೆತ್ತಲು ಸಲಹೆ ನೀಡಿದ್ದರು. ಅದರಂತೆ “ಹೌಸ್‌ ಲಿಫ್ಟಿಂಗ್‌’ ತಂತ್ರಜ್ಞಾನ ಬಳಸಿ ಮನೆಯನ್ನು ಐದು ಅಡಿಯಷ್ಟು ಎತ್ತರಿಸಿ, ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆದಿದ್ದಾರೆ.

Advertisement

ಹರಿಯಾಣ ಮೂಲದ ಹೌಸ್‌ ಲಿಫ್ಟಿಂಗ್‌ ಕಂಪನಿ ಈ ಕಾಮಗಾರಿಯನ್ನು ಯಶಸ್ವಿಯಾಗಿ ನಡೆಸಿದೆ. ಇದರಿಂದ ಪ್ರೇರಣೆಗೊಂಡಿರುವ ಇನ್ನೂ ಕೆಲವರು ತಮ್ಮ ಮನೆಗಳನ್ನು ಇದೇ ರೀತಿ ಎತ್ತರಿಸಲು ನಿರ್ಧರಿಸಿದ್ದಾರೆ ಎಂದು ಈ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಹೇಳಿದ್ದಾರೆ.

ಏನಿದು ತಂತ್ರಜ್ಞಾನ?: ವಿದೇಶಗಳಲ್ಲಿ ಈ ಹೌಸ್‌ಲಿಫ್ಟಿಂಗ್‌ ತಂತ್ರಜ್ಞಾನ ಸಾಮಾನ್ಯವಾಗಿದೆ. ಮೊದಲು ಕಟ್ಟಡದ ಪಿಲ್ಲರ್‌ಗಳಿಗೆ ಕತ್ತರಿ ಹಾಕಿ ಅವುಗಳ ಜಾಗಗಳಲ್ಲಿ ಬೈಕ್‌ ಹಾಗೂ ಕಾರ್‌ಗಳನ್ನು ಮೇಲೆತ್ತುವ ಮಾದರಿಯ ಜಾಕ್‌ಗಳನ್ನು ಅಳವಡಿಸಲಾಗುತ್ತದೆ.

ಇದೇ ರೀತಿ ಕಟ್ಟಡದ ಸುತ್ತಲ ಪಾಯವನ್ನು ಒಡೆಯುತ್ತಾ ಅಲ್ಲಲ್ಲಿ ಜಾಕ್‌ಗಳನ್ನು ಹಾಕಲಾಗುತ್ತದೆ. ನಂತರ ಜಾಕ್‌ಗಳ ಸಹಾಯದಿಂದ ಇಡೀ ಕಟ್ಟಡವನ್ನು ಐದಾರು ಅಡಿಗಳಷ್ಟು ಎತ್ತರಕ್ಕೆ ಏರಿಸಲಾಗುತ್ತದೆ. ಮನೆ ಕೆಳಗಿನ ಖಾಲಿ ಜಾಗಕ್ಕೆ ಕಾಂಕ್ರಿಟ್‌ ತುಂಬಲಾಗುತ್ತದೆ. ಜತೆಗೆ ಕತ್ತರಿಸಿರುವ ಪಿಲ್ಲರ್‌ಗಳಿಗೆ ಹೊಸ ಪಿಲ್ಲರ್‌ಗಳ ಬೆಂಬಲ ನೀಡಿ ಅವುಗಳನ್ನು ಜೋಡಿಸಲಾಗುತ್ತದೆ.

ನಂತರ ಸುತ್ತಲೂ ಭದ್ರವಾದ ಗೋಡೆ ಕಟ್ಟಿ ಅದು ಒಣಗಿದ ಮೇಲೆ ಒಂದೊಂದೇ ಜಾಕ್‌ಗಳನ್ನು ತೆಗೆಯುತ್ತಾರೆ. ಮನೆಯ ಎತ್ತರ ಹಾಗೂ ವಿಸ್ತೀರ್ಣದ ಆಧಾರದ ಮೇಲೆ ಜಾಕ್‌ಗಳನ್ನು ಬಳಸಲಾಗುತ್ತದೆ. ಪ್ರಸ್ತುತ ಅವಲಹಳ್ಳಿಯಲ್ಲಿರುವ ಮನೆಗೆ 130 ಜಾಕ್‌ಗಳನ್ನು ಬಳಸಲಾಗಿದೆ ಎಂದು ಕಾಮಗಾರಿ ನಡೆಸಿದ ಗುತ್ತಿಗೆದಾರರು ತಿಳಿಸಿದ್ದಾರೆ.

ಹಣ, ಸಮಯ ಎರಡೂ ಉಳಿತಾಯ: ತಗ್ಗು ಪ್ರದೇಶದಲ್ಲಿರುವ ಮನೆಗಳನ್ನು ಸಾಮಾನ್ಯವಾಗಿ ನೆಲಸಮ ಮಾಡಿ ಪುನಃ ಕಟ್ಟುತ್ತಾರೆ. ಇದರಿಂದ ಕನಿಷ್ಠ 50 ಲಕ್ಷ ರೂ. ಖರ್ಚಾಗುತ್ತದೆ. ಜತೆಗೆ ನಾಲ್ಕೈದು ತಿಂಗಳ ಕಾಲಾವಧಿಯೂ ಬೇಕಾಗುತ್ತದೆ. ಆದರೆ, ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನಕ್ಕೆ ವೆಚ್ಚವಾಗುವ ಹಣ ಕೇವಲ ಎರಡು ಮೂರು ಲಕ್ಷ ರೂ. 15ರಿಂದ 20 ದಿನದೊಳಗೆ ಕಾಮಗಾರಿ ಮುಗಿಯುತ್ತದೆ.

ಪ್ರಸ್ತುತ ಅವಲಹಳ್ಳಿಯಲ್ಲಿ ನಡೆಯುತ್ತಿರುವ ತಮ್ಮ ಮನೆಯ ಕಾಮಗಾರಿಗೆ 15 ದಿನಗಳ ಕಾಲ 9 ಕಾರ್ಮಿಕರು ಕೆಲಸ ಮಾಡಿದ್ದಾರೆ. ಸುಮಾರು ಎರಡೂವರೆ ಲಕ್ಷ ರೂ. ಖರ್ಚು ಬಂದಿದೆ ಎನ್ನುತ್ತಾರೆ ಮನೆ ಮಾಲೀಕರು. ವಿಶೇಷವೆಂದರೆ ಈ ಕಾಮಗಾರಿಯಿಂದ ಮನೆಯ ಒಳವಿನ್ಯಾಸಕ್ಕಾಗಲೀ, ಪಾಯ, ಗೋಡೆಗಳಿಗಾಗಲಿ ಯಾವುದೇ ಧಕ್ಕೆಯಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಈ ಕಾಮಗಾರಿ ಮಾಡುತ್ತಿದ್ದೇವೆ. ಮೂರು ಅಂತಸ್ತಿನವರೆಗಿನ ಕಟ್ಟಡಗಳನ್ನು ಈ ತಂತ್ರಜ್ಞಾನ ಬಳಸಿ ಮೇಲೆತ್ತಬಹುದು. ಕಾಮಗಾರಿಗೆ ಕನಿಷ್ಠ ಎರಡೂವರೆ ಲಕ್ಷ ರೂ. ತಗಲುತ್ತದೆ.
-ಕುಂದನ್‌ ಕುಮಾರ್‌, ಹೌಸ್‌ ಲಿಫ್ಟಿಂಗ್‌ ಕಾರ್ಮಿಕ

* ಜಯಪ್ರಕಾಶ್‌ ಬಿರಾದಾರ್‌ 

Advertisement

Udayavani is now on Telegram. Click here to join our channel and stay updated with the latest news.

Next