ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಏಕರೂಪ ಕಟ್ಟಡ ವಿನ್ಯಾಸ ಮತ್ತು ಲೋಗೋಗಳನ್ನು ಆದಷ್ಟು ಬೇಗ ಆಯ್ಕೆ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ಬಿಎಂಆರ್‌ಡಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಆಗಸ್ಟ್ 15ಕ್ಕೆ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈಗಾಗಲೇ ಪಾಲಿಕೆಗೆ ಸಾವಿರಾರು ಜನರು ಕಟ್ಟಡ ವಿನ್ಯಾಸ ಹಾಗೂ ಲೋಗೋ ಕುರಿತಂತೆ ಸಲಹೆಗಳು ಬಂದಿದ್ದು, ಅವುಗಳಲ್ಲಿ ಉತ್ತಮವಾದವುಗಳನ್ನು ಗುರುತಿಸಿ ಪಟ್ಟಿ ಮಾಡಿ ಎಂದು ಅವರು ಸೂಚಿಸಿದ್ದಾರೆ.
ನಮ್ಮ ಕ್ಯಾಂಟೀನ್‌ಗೆ ಪರಿಷ್ಕೃತ ವಿಸ್ತೀರ್ಣದ ಜಾಗಗಳನ್ನು ಆದಷ್ಟು ಬೇಗ ಗುರುತಿಸುವಂತೆ ಸೂಚಿಸಿರುವ ಸಚಿವರು, ಜಾಗ ದೊರೆಯದ ಭಾಗಗಳಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲು ತಿಳಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಮೇ ತಿಂಗಳೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಪರಿಸರ ಜಾಗೃತಿಗೆ ವನ ಮಹೋತ್ಸವ: ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಮೂಲಕ ಬೆಂಗಳೂರಿನಲ್ಲಿ ಹಸಿರು ಹೆಚ್ಚಿಸಲು ಜುಲೈ 15ರಂದು ವನ ಮಹೋತ್ಸವವನ್ನು ಆಯೋಜಿಸುವಂತೆ ಅರಣ್ಯ ಇಲಾಖೆ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಜಾರ್ಜ್ ಸೂಚಿಸಿದ್ದಾರೆ.
ವನಮಹೋತ್ಸವದ ಅಂಗವಾಗಿ ಬಿಡಿಎ ವತಿಯಿಂದ 1.88 ಲಕ್ಷ ಮತ್ತು ಪಾಲಿಕೆಯಿಂದ 10 ಲಕ್ಷ ಸಸಿ ಸೇರಿ ಅರಣ್ಯ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 16.5 ಲಕ್ಷ ಸಸಿಗಳನ್ನು ನೆಡಲು ಕ್ರಮಕೈಗೊಳ್ಳಬೇಕು.
ಆ ಮೂಲಕ ನಗರದಲ್ಲಿ ಸಸಿಗಳ ಸಂಖ್ಯೆಯನ್ನು ಹೆಚ್ಚಿಸಿ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಆಯುಕ್ತ ಎನ್. ಮಂಜುನಾಥ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸೇರಿದಂತೆ ಪ್ರಮುಖರು ಹಾಜರಿದ್ದರು.