ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಬಿರುಸಿನ ಪ್ರಚಾರ ನಡೆಸಿದ್ದರು. ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸಿ ಗೆಲುವಿಗೆ ಕಾರಣರಾಗಿದ್ದರು.
ಆದರೆ ಈ ಬಾರಿ ಸ್ಟಾರ್ ಚಂದ್ರು ಅವರನ್ನು ಗೆಲುವಿನ ದಡ ತಲುಪಿಸಲು ದರ್ಶನ್ ಜನಪ್ರಿಯತೆ ನೆರವಾಗಿಲ್ಲ.
ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ವರನಟ ಡಾ. ರಾಜ್ ಕುಮಾರ್ ಸೊಸೆ ಗೀತಾ ಪರ ಪತಿ ನಟ ಶಿವರಾಜ್ ಕುಮಾರ್ ನಿರಂತರವಾಗಿ ಪ್ರಚಾರ ನಡೆಸಿದ್ದರು. ಅವರ ಪರ ನಟರಾದ ದುನಿಯಾ ವಿಜಯ್, ವಿಜಯ್ ರಾಘವೇಂದ್ರ, ಚಿಕ್ಕಣ್ಣ, ಅನುಶ್ರೀ ಬ್ಯಾಟ್ ಬೀಸಿದ್ದರು. ಆದರೆ ಅಲ್ಲೂ ಗೆಲುವು ದಕ್ಕಿಲ್ಲ.
ಇನ್ನು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಟಾಳ್ಕರ್ ಪರ ಕಿರುತೆರೆ ನಟಿಯರಾದ ಮೇಘಾ ಶೆಟ್ಟಿ, ಮೌನ ಗುಡ್ಡೆಮನೆ, ಭವ್ಯ ಗೌಡ ಪ್ರಚಾರ ನಡೆಸಿದ್ದರು. ಆದರೂ ಮೃಣಾಲ್ ಸೋಲುಂಡಿದ್ದಾರೆ.
ಇನ್ನು ತೆಲುಗು ಜನಪ್ರಿಯ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದು, ಈ ಪೈಕಿ ರಾಯಚೂರು ಹೊರತು ಪಡಿಸಿ ಉಳಿದೆಡೆ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.