ಏಳನೇ ತರಗತಿಗೇ ಶಾಲೆಗೆ ಗುಡ್‌ಬೈ ಹೇಳಿದ್ದ ಹುಡುಗನೊಬ್ಬ ಕೇವಲ 24 ರೂಪಾಯಿ ಇಟ್ಟುಕೊಂಡು 1991ರಲ್ಲಿ, ಅಬ್ಬೇಪಾರಿಯಂತೆ ಮುಂಬಯಿಗೆ ಬಂದ. ಈಗ ಆತ ವರ್ಷಕ್ಕೆ 25 ಲಕ್ಷ ರೂ. ದುಡಿಯುತ್ತಾನೆ! ಹಿಂದಿ ಚಿತ್ರರಂಗದ ದಂತಕತೆ ಅಮಿತಾಭ್ ಬಚ್ಚನ್‌ರಿಂದ ಹಿಡಿದು ಎಲ್ಲಾ ತಾರೆಯರೊಂದಿಗೂ ಆತನಿಗೆ ಸ್ನೇಹವಿದೆ. ಆತ ಒಬ್ಬ ಸಾಮಾನ್ಯ ಫೋಟೋಗ್ರಾಫರ್! -ಮುನ್ನಾ ಠಾಕೂರ್ ಎಂಬ ಸಾಧಕನ ಕಥೆ ಇದು.
ಒಬ್ಬ ಆರ್ಡಿನರಿ ಫೋಟೋಗ್ರಾಫರ್, ಬಾಲಿವುಡ್‌ನ ಸ್ಟಾರ್‌ಗಳೊಂದಿಗೆ ಫ್ರೆಂಡ್‌ಶಿಪ್ ಬೆಳೆಸಲು ಸಾಧ್ಯವೆ? ನಿಮ್ಮಲ್ಲಿ ಅಂಥಾ ವಿಶೇಷ ಏನಿದೆ? ಫೋಟೋಗ್ರಫಿಯನ್ನು ನೀವು ಒಲಿಸಿಕೊಂಡಿದ್ದು ಹೇಗೆ? ಸ್ಟಾರ್‌ಗಳೊಂದಿಗೆ ನಂಟು ಬೆಳೆದಿದ್ದು ಹೇಗೆ ಎಂಬ ಪ್ರಶ್ನೆಗಳನ್ನು ಮುನ್ನಾ ಠಾಕೂರ್ ಅವರಿಗೇ ಕೇಳಿದಾಗ, ಒಂದು ಸಿನೆಮಾಕ್ಕೆ ವಸ್ತುವಾಗಬಲ್ಲ ಕಥೆ ಅನಾವರಣಗೊಂಡಿತು. ಅದನ್ನು ಮುನ್ನಾ ಠಾಕೂರ್ ಅವರ ಮಾತುಗಳಲ್ಲಿಯೇ ಹೇಳುವುದಾದರೆ…
“ಮಹಾರಾಷ್ಟ್ರದ ಅಕೋಲಾ ಎಂಬ ಹಳ್ಳಿ ನನ್ನ ಹುಟ್ಟೂರು. ಮೂವರು ಮಕ್ಕಳು, ಅಪ್ಪ-ಅಮ್ಮ ಇದ್ದ ಕುಟುಂಬ ನಮ್ಮದು. ನಾನೇ ಹಿರಿಯ ಮಗ. ಅಪ್ಪನಿಗೆ ಕಾಟನ್ ಮಿಲ್‌ನಲ್ಲಿ ಕೆಲಸವಿತ್ತು. ಅವರ ಸಂಪಾದನೆ, ಹೊಟ್ಟೆ-ಬಟ್ಟೆಗೆ ಸರಿಯಾಗುತ್ತಿತ್ತು. “ನಾವು ಆರ್ಥಿಕವಾಗಿ ಸಶಕ್ತರಾಗಿಲ್ಲ. ಅಪ್ಪನ ದುಡಿಮೆ ಅಲ್ಲಿಗಲ್ಲಿಗೆ ಸರಿ ಹೋಗುತ್ತದೆ” ಎಂದು ಅರ್ಥವಾಗುವ ಹೊತ್ತಿಗೆ ನಾನು 7ನೇ ತರಗತಿ ಮುಗಿಸಿದ್ದೆ. ಮುಂದೆ ಓದುವ ಬದಲು, ಏನಾದರೂ ಕೆಲಸ ಮಾಡಿ “ಮನೆ ನಡೆಸಲು” ಅಪ್ಪನಿಗೆ ನೆರವಾಗಬೇಕು ಎಂಬ ಐಡಿಯಾ ಬಂತು. ಮನೆಯಲ್ಲೂ ಬೇಡವೆನ್ನಲಿಲ್ಲ. ಓದಿಗೆ ಗುಡ್ ಬೈ ಹೇಳಿ ದುಡಿಮೆಗೆ ನಿಂತೆ. ಕಾರ್ಪೆಂಟರ್, ಪೈಂಟಿಂಗ್ ಸೇರಿದಂತೆ ಸಿಕ್ಕಿದ ಕೆಲಸವನ್ನೆಲ್ಲ ಮಾಡಿದೆ. ಹೀಗೇ ಎರಡು ವರ್ಷ ಕಳೆದವು.
ಅದೊಮ್ಮೆ ಕೆಲಸದ ನಡುವಿನ ವಿರಾಮದಲ್ಲಿ ಜತೆಗಾರರೊಂದಿಗೆ ಟೀ ಕುಡಿಯುತ್ತಿದ್ದಾಗ, ಊರಲ್ಲಿದ್ದು ಬಿಡಿಗಾಸು ಸಂಪಾದಿಸುವ ಬದಲು, ಮುಂಬಯಿಗೆ ಹೋಗಿ ಅದೃಷ್ಟ ಪರೀಕ್ಷಿಸಬಾರದೇಕೆ ಅನ್ನಿಸಿತು. ಸಹೋದ್ಯೋಗಿಗಳಾಗಿದ್ದ ಇಬ್ಬರು ಮಿತ್ರರೂ ಈ ಮಾತಿಗೆ ಸಮ್ಮತಿ ಸೂಚಿಸಿದರು. ಲಕ್ಷಾಂತರ ಮಂದಿಯನ್ನು ಪೊರೆಯುವ ಮುಂಬಯಿಯಲ್ಲಿ, ನಮಗೂ ಏನಾದರೂ ಒಳ್ಳೆಯ ಕೆಲಸ ಮತ್ತು ಖರ್ಚಿಗೆ ಆಗಿ ಮಿಗುವಷ್ಟು ಸಂಬಳ ಸಿಗುತ್ತದೆ ಎಂಬುದು ನಮ್ಮ ನಂಬಿಕೆಯಾಗಿತ್ತು. ಆ ಧೈರ್ಯದಲ್ಲೇ 1991ರಲ್ಲಿ,ಇಬ್ಬರು ಗೆಳೆಯರೊಂದಿಗೆ ಮುಂಬಯಿ ತಲುಪಿಕೊಂಡೆ.
Related Articles
ಮುಂಬಯಿಗೆ ಬಂದಾಗ ನನ್ನ ಜೇಬಲ್ಲಿ ಇದ್ದುದು ಕೇವಲ 24 ರೂಪಾಯಿ. ನನಗಾಗ 15 ವರ್ಷ. ಹೋದ ದಿನವೇ ಏನಾದರೂ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು. ಆದರೆ ಅಲ್ಲಿ ನಮಗೆ ಯಾರೊಬ್ಬರ ಪರಿಚಯವೂ ಇರಲಿಲ್ಲ. ಉಳಿಯಲು ಮನೆಯಿಲ್ಲ, ಖರ್ಚಿಗೆ ಕಾಸಿಲ್ಲ ಎಂಬಂತಾಯಿತು. ಪರಿಣಾಮ; ಎಷ್ಟೋ ದಿನ-ರಾತ್ರಿ ಗಳನ್ನು ಫುಟ್‌ಪಾತ್‌ನಲ್ಲಿ ಕಳೆಯಬೇಕಾಯಿತು. ಉಹೂಂ, ಇಂಥ ಕಷ್ಟ ಗಳು ನನ್ನನ್ನು ಹೆದರಿಸಲಿಲ್ಲ. ಇವತ್ತಲ್ಲ ನಾಳೆ, ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ. ಈಗಲ್ಲದಿದ್ದರೆ, ವರ್ಷಗಳ ಅನಂತರವಾದರೂ ಒಳ್ಳೆಯದಾಗುತ್ತದೆ. ಸಿಕ್ಕಿದ ಕೆಲಸವನ್ನೆಲ್ಲ ಶ್ರದ್ಧೆಯಿಂದ ಮಾಡಬೇಕು. ಪ್ರತೀ ತಿಂಗಳೂ ಮನೆಗೆ ದುಡ್ಡು ಕಳಿಸಬೇಕು ಅನ್ನುವುದಷ್ಟೇ ನನ್ನ ಯೋಚನೆ- ನಿರ್ಧಾರವಾಗಿತ್ತು. ನನ್ನಂತೆಯೇ ಕನಸು ಕಾಣುವ ಸಾವಿರಾರು ಜನ ಕಣ್ಣೆದುರು ಇದ್ದುದರಿಂದ, ಅವರಲ್ಲಿ ಒಬ್ಬನಾಗಿ ಬದುಕಲು ನನಗೆ ಸಂಕೋಚವಿರಲಿಲ್ಲ.
ವಾರಗಟ್ಟಲೆ ಅಲೆದಾಡಿದ ಅನಂತರ 1993ರಲ್ಲಿ ಕಡೆಗೂ ಒಂದು ಕೆಲಸ ಸಿಕ್ಕಿಯೇ ಬಿಟ್ಟಿತು. ಅದು, ಮನೆಮನೆಗೆ ಪೇಪರ್ ಹಾಕುವ ಕೆಲಸ. ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು, ಸೈಕಲ್‌ಗೆ ಪೇಪರ್ ಹೇರಿಕೊಂಡು ಹೊರಟರೆ, 8 ಗಂಟೆಯ ಹೊತ್ತಿಗೆ ಆ ಕೆಲಸ ಮುಗಿಯುತ್ತಿತ್ತು. ಜಾಸ್ತಿ ಸಂಪಾದಿಸಬೇಕು ಎಂಬ ಉದ್ದೇಶವಿತ್ತಲ್ಲ; ಹಾಗಾಗಿ ಉಳಿದ ಅವಧಿಯಲ್ಲಿ ಸಿಕ್ಕಿದ ಕೆಲಸಗಳನ್ನೆಲ್ಲ ಮಾಡುತ್ತಿದ್ದೆ. ಡೈಮಂಡ್ ಕಟರ್ ಕಂ ಪಾಲಿಶರ್, ವೆಲ್ಡರ್, ಶಾಪ್- ಅಂಗಡಿಗಳಲ್ಲಿ ಹೆಲ್ಪರ್, ಕ್ಲೀನರ್…ಹೀಗೆ. ಎಷ್ಟೋ ಬಾರಿ ನನ್ನ ವಿವಿಧ ಕೆಲಸಗಳನ್ನು, ಅವತಾರಗಳನ್ನು ಕಂಡು ಜನ-ಪೇಪರ್ ಬಾಯ್, ಆಫೀಸ್ ಬಾಯ್ ಎಂದೆಲ್ಲ ಆಡಿಕೊಳ್ಳುತ್ತಿದ್ದರು. ಆಗೆಲ್ಲ ಬೇಸರ ವಾಗುತ್ತಿತ್ತು. “ಆಡಿಕೊಳ್ಳುವವರು ಅನ್ನ ಕೊಡುವುದಿಲ್ಲ. ಅವರೆಲ್ಲ ನನ್ನನ್ನು ಬೆರಗಿನಿಂದ ನೋಡುವ ದಿನ ಬಂದೇ ಬರುತ್ತೆ’ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡು ಸುಮ್ಮನಾಗುತ್ತಿದ್ದೆ.
ಹೀಗೇ 4 ವರ್ಷಗಳು ಕಳೆದವು. ದಿನವೂ ಐದಾರು ಬಗೆಯ ಕೆಲಸ ಮಾಡುವುದು ಅಭ್ಯಾಸವಾಗಿತ್ತು. ಶಾಪ್‌ಗ್ಳಲ್ಲಿ ಸಹಾಯಕನ ಕೆಲಸ ಮಾಡುತ್ತಿದ್ದೆ ಅಂದೆನಲ್ಲ; ಅದರಲ್ಲಿ ಒಂದು ಸ್ಟುಡಿಯೋ ಕೂಡ ಇತ್ತು. ಅಲ್ಲಿಗೆ ಸೆಲೆಬ್ರಿಟಿಗಳೆಲ್ಲಾ ಬರುತ್ತಿದ್ದರು. ನನಗೂ ಫೋಟೋ ತೆಗೆಯುವ ಆಸೆಯಿತ್ತು. ಆದರೆ ಮಾಲಕರು ಒಪ್ಪಲಿಲ್ಲ. “ಕೆಮರಾಗಳು ದುಬಾರಿ. ಅವನ್ನು ಹಿಡಿದುಕೊಳ್ಳುವಾಗ ಸ್ಲಿಪ್ ಆಗಿ ಬಿದ್ದರೆ ಕಷ್ಟ” ಅಂದುಬಿಟ್ಟರು. ಮರು ಮಾತಾಡದೆ, ಕ್ಲೀನರ್ ಕೆಲಸ ಮಾಡತೊಡಗಿದೆ. ವರ್ಷ ಕಳೆಯುವುದರೊಳಗೆ, ಮಾಲಕರಿಗೆ ನನ್ನ ಮೇಲೆ ನಂಬಿಕೆ ಬಂತು. ಫೋಟೋ ತೆಗೆಯಲು ಅವಕಾಶ ಕೊಟ್ಟರು. ಅಲ್ಲಿದ್ದ ಬಿಲಾಲ್ ಎಂಬ ಹುಡುಗ ಫೋಟೋಗ್ರಫಿಯ ಗುಟ್ಟುಗಳನ್ನು ಹೇಳಿಕೊಟ್ಟ. ಮುಂದೆ ಅವನ ತಂಡದೊಂದಿಗೆ ವೆಡ್ಡಿಂಗ್ ಫೋಟೋಗ್ರಫಿ ಮಾಡಿದೆ. ಅನಂತರ ಪ್ರಸಿದ್ಧ ಮಾಡೆಲ್ ಫೋಟೋಗ್ರಾಫರ್ ಸುಬಿ ಸ್ಯಾಮ್ಯುಯೆಲ್ ಅವರಿಗೆ ಸಹಾಯಕನಾದೆ. ನನಗಿದ್ದ ಫೋಟೋಗ್ರಫಿ ಆಸಕ್ತಿ ಗಮನಿಸಿದ ಬಾಬಿ ಪೂನಿಯಾ ಎಂಬ ಗೆಳೆಯ, ತಮ್ಮ ಕೆಮರಾ ಕೊಟ್ಟು “ಗುಡ್ ಲಕ್” ಎಂದರು. ಅನಂತರ ಪೈಸೆಗೆ ಪೈಸೆ ಸೇರಿಸಿ ನಿಕಾನ್ ಕೆಮರಾ ಖರೀದಿಸಿದೆ.
ನನ್ನದೇ ಸ್ವಂತ ಕೆಮರಾ ಬಂದಮೇಲೆ, ಸೆಲೆಬ್ರಿಟಿಯೊಬ್ಬರ ಫೋಟೋ ಶೂಟ್ ಮಾಡಿದರೆ ಹೇಗೆ ಅನ್ನಿಸಿತು. ಖ್ಯಾತನಟ ಅರ್ಜುನ್ ರಾಮ್‌ಪಾಲ್ ಅವರ ಮನೆಗೂ ನಾನು ಪೇಪರ್ ಹಾಕುತ್ತಿದ್ದೆ. ಅವರ ಫೋಟೋ ಶೂಟ್ ಮಾಡಿದರೆ ಹೇಗೆ ಅನ್ನಿಸಿತು. ಅವರ ಪರಿಚಯವಿರಲಿಲ್ಲ. ಆಗ ನಾನೊಂದು ಉಪಾಯ ಮಾಡಿದೆ. ರಾಮ್‌ಪಾಲ್ ಅವರ ಮನೆ ಕೆಲಸ ದಾಕೆಯನ್ನು ಪರಿಚಯಿಸಿಕೊಂಡು ನನ್ನ ಆಸೆಯ ಬಗ್ಗೆ ಹೇಳಿದೆ. ಎರಡೇ ನಿಮಿಷದ ಭೇಟಿಗೆ ಅವಕಾಶ ಕೊಡಿಸಿ, ಎಂದು ಕೇಳಿಕೊಂಡೆ. ಎರಡು ದಿನಗಳ ಅನಂತರ ರಾಮ್‌ಪಾಲ್ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕೇಬಿಟ್ಟಿತು. “ಈ ಮೊದಲು ಮಾಡಿರುವ ಫೋಟೋಶೂಟ್ ತೋರಿಸಿ” ಅಂದರು ರಾಮ್‌ಪಾಲ್. “ಸಾರಿ ಸರ್, ನಾನು ಈ ಫೀಲ್ಡ್‌ಗೆ ಹೊಸಬ. ನನಗೆ ಕನಸುಗಳಿವೆ. ಏನಾದ್ರೂ ಸಾಧಿಸಬೇಕು ಅಂತ ಆಸೆಯಿದೆ. ನಿಮ್ಮದೇ ಮೊದಲ ಫೋಟೋಶೂಟ್. ದಯವಿಟ್ಟು ಅವಕಾಶ ಕೊಡಿ” ಅಂದೆ. ರಾಮ್‌ಪಾಲ್ ಅದೆಂಥ ಹೃದಯವಂತರು ಅಂದ್ರೆ, ನಯಾಪೈಸೆ ಪಡೆ ಯದೇ, ಮಾಡೆಲ್ ಆಗಲು ಒಪ್ಪಿದರು! ಇದೆಲ್ಲ ನಡೆದದ್ದು 1998ರಲ್ಲಿ. ನನ್ನ ಬದುಕಿಗೆ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕ ಸಂದರ್ಭ ಅದು.
ಅನಂತರದಲ್ಲಿ ಒಂದೊಂದೇ ಅವಕಾಶಗಳು ಸಿಗತೊಡಗಿದವು. ಆಗಲೇ ಆಕಸ್ಮಿಕವಾಗಿ ಸಿಕ್ಕವರು ಸೋನು ಸೂದ್. ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಅವರು ಹೆಣಗುತ್ತಿದ್ದ ದಿನಗಳವು. ಉಚಿತವಾಗಿ ಪೋಸ್ ಕೊಡುವ ರೂಪದರ್ಶಿಗೆ ನಾನು ಹುಡುಕುತ್ತಿದ್ದಂತೆಯೇ, ಫ್ರೀ ಆಗಿ ಫೋಟೋ ತೆಗೆದುಕೊಡುವವರಿಗಾಗಿ ಅವರೂ ಹುಡುಕುತ್ತಿದ್ದರು. ಹೊಸ ಹೊಸ ಐಡಿಯಾ ಬಂದಾಗೆಲ್ಲ ಅವರ ಪೋಟೋ ತೆಗೆಯುತ್ತಿದ್ದೆ. ಅವರೂ ಧಾರಾಳವಾಗಿ ಪೋಸ್ ಕೊಡುತ್ತಿದ್ದರು. ಈ ಮಧ್ಯೆ ಸೋನು ಮತ್ತು ಗೆಳೆಯರು ಹೊಸದೊಂದು ಬಾಡಿಗೆ ಮನೆಗೆ ಶಿಫ್ಟ್ ಆದರು. ನನಗೆ, ಉಳಿಯಲು ಸ್ಥಳವಿಲ್ಲದಿದ್ದ ದಿನಗಳವು. ಹೇಗೂ ಪರಿಚಯವಿತ್ತಲ್ಲ; ಆ ಸಲುಗೆಯಲ್ಲಿ-“ನಿಮ್ಮ ರೂಮ್‌ನಲ್ಲಿ ನನಗೂ ಜಾಗ ಕೊಡುವಿರಾ?” ಎಂದು ಕೇಳಿಯೇ ಬಿಟ್ಟೆ. “ಮನಸ್ಸಿನಲ್ಲೇ ಜಾಗ ಕೊಟ್ಟು ಆಗಿದೆ, ಮನೆಯಲ್ಲಿ ಕೊಡಲ್ಲ ಅಂತೀವಾ? ಬನ್ನಿ..” ಎಂದು ನಕ್ಕರು ಸೋನು. ಆ ದಿನಗಳ ಸಂಭ್ರಮವನ್ನು ಹೇಳಲೇಬೇಕು: ನಾವು ತಿಂಗಳ ಕೊನೆಯಲ್ಲಿ ಖರ್ಚು ಹಂಚಿಕೊಳ್ಳುತ್ತಿದ್ದೆವು. ಸಿನೆಮಾ ನೋಡಲು, ಪಾರ್ಟಿ ಮಾಡಲು ಹಣ ಕೂಡಿಸುತ್ತಿದ್ದೆವು. ಉಳಿದೆಲ್ಲರಿಗಿಂತ ಸೋನು ಅವರೇ ಹೆಚ್ಚು ಹಣ ಕೊಡುತ್ತಿದ್ದರು. ಅವರೊಳಗೆ ಒಬ್ಬ ಹೃದಯವಂತನಿದ್ದಾನೆ ಎಂದು ಜಗತ್ತಿಗೆ ಗೊತ್ತಾದದ್ದು ಕೋವಿಡ್ ಬಂದಾಗ. ಆದರೆ ಸೋನು ಅವರದ್ದು ತಾಯಿ ಮನಸ್ಸು ಎಂಬುದನ್ನು ನಾನು 1998ರಲ್ಲಿಯೇ ಕಂಡಿದ್ದೆ.
ಮುಂದೆ ಸುನಿಲ್ ಶೆಟ್ಟಿ ಅವರ ಪರಿಚಯವಾಯಿತು. ಅವರು ನನ್ನ ಕೆಲಸವನ್ನು ಮೆಚ್ಚಿ ಹರಸಿದರು. ಹಲವರಿಗೆ-“ಈತ ನಮ್ಮ ಮನೆಯ ಹುಡುಗ” ಎಂದೇ ಪರಿಚಯಿಸಿದರು. ಈ ಮಧ್ಯೆ ಕೇಶ ವಿನ್ಯಾಸಕ ಆಲಿಂ ಹಕೀಮ್ ಮೂಲಕ ಸಲ್ಮಾನ್‌ಖಾನ್ ಅವರ ಪರಿಚಯವಾಯಿತು. ಅವತ್ತು ಹಲೋ ಹಲೋ ಎಂದದ್ದು ಬಿಟ್ಟರೆ, ಮತ್ತೇನೂ ಮಾತುಕತೆ ನಡೆಯಲಿಲ್ಲ. ಅನಂತರದ ಕೆಲವೇ ದಿನಗಳಲ್ಲಿ ಒಂದು ಮಧ್ಯರಾತ್ರಿ, ಸಲ್ಮಾನ್ ಖಾನ್ ಅವರ ಗೆಳೆಯ ನದೀಮ್‌ಖಾನ್ ಫೋನ್ ಮಾಡಿ- “ಈಗ ಸಲ್ಮಾನ್ ಅವರ ಫೋಟೋಶೂಟ್ ಮಾಡೋಣ, ನೀವು ಬನ್ನಿ” ಅಂದರು! ಬೆಳಗಿನ ಜಾವ 2.30ರಿಂದ 3 ಗಂಟೆಯ ಅವಧಿಯಲ್ಲಿ ಚಿತ್ರೀಕರಣ ಮುಗಿದೇಹೋಯಿತು. ಮುಂದೆ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ತಾಪ್ಸಿ ಪನ್ನು, ಜಾಕಿ ಶ್ರಾಫ್, ಸಂಜಯ್ ದತ್, ಅನುಪಮ್ ಖೇರ್…ಹೀಗೆ ಘಟಾನುಘಟಿಗಳೆಲ್ಲ ನನ್ನ ಕೆಮರಾದಲ್ಲಿ ಸೆರೆಯಾದರು. ಒಂದು ಶುಭದಿನದಲ್ಲಿ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರ ಫೋಟೋ ಶೂಟ್ ಮಾಡುವ ಅವಕಾಶವೂ ಸಿಕ್ಕಿತು. ಸ್ಟಾರ್ ಡಸ್ಟ್ ಸೇರಿದಂತೆ ಎಲ್ಲ ಸಿನೆಮಾ ಪತ್ರಿಕೆಗಳಲ್ಲೂ ನಾನು ತೆಗೆದ ಚಿತ್ರಗಳು ಪ್ರಕಟವಾದವು. ಒಂದು ಕಾಲದಲ್ಲಿ ಮಿಡ್ ಡೇ ಪತ್ರಿಕೆಯನ್ನು ಮನೆಮನೆಗೆ ಹಾಕುತ್ತಿದ್ದವ ನಾನು. ಅದೇ ಮಿಡ್ ಡೇ ಪತ್ರಿಕೆಯಲ್ಲಿ ನನ್ನ ಕುರಿತು ಇಡೀ ಪುಟದ ಸ್ಟೋರಿ ಪ್ರಕಟವಾಯ್ತು!
ಅದೃಷ್ಟದಿಂದ ಇಂಥ ಗೆಲುವು ಸಾಧ್ಯವಾಯ್ತು ಎಂಬುದು ಕೆಲವರ ಮಾತು. ಆದರೆ, ಪರಿಶ್ರಮ ಮತ್ತು ವೃತ್ತಿಯೆಡೆಗಿನ ಬದ್ಧತೆಯಿಂದ ಈ ಯಶಸ್ಸು ದಕ್ಕಿದೆ ಎಂಬ ನಂಬಿಕೆ ನನ್ನದು. ಮುಂಬಯಿಗೆ ಬಂದಾಗ ನನಗೆ ಮರಾಠಿಯಷ್ಟೇ ಗೊತ್ತಿತ್ತು. ಹೈಸ್ಕೂಲ್‌ನ ಮುಖವನ್ನೂ ನಾನು ನೋಡಿರಲಿಲ್ಲ. ಬೆಂಬಲಕ್ಕೆ ಗಾಡ್ ಫಾದರ್ ಇರಲಿಲ್ಲ. ಆದರೆ, ನನ್ನೊಳಗೆ ಹಸಿವಿತ್ತು. ಆಸೆಯಿತ್ತು. ಹಠವಿತ್ತು. ಎದೆಯ ತುಂಬಾ ಕನಸುಗಳಿದ್ದವು. ಹಸಿವನ್ನು ನೀಗಿಸಿಕೊಳ್ಳುವ ಪ್ರಯತ್ನದಲ್ಲಿಯೇ ನಾನು ಭಾಷೆ ಕಲಿತೆ. ಓದು-ಬರಹ ಕಲಿತೆ. ಈಗ ಚೆಂದದ ಹಿಂದಿ, ಇಂಗ್ಲಿಷ್ ಬರುತ್ತದೆ. 24 ರೂ. ಜೇಬಲ್ಲಿಟ್ಟು ಕೊಂಡು ಬಂದ ನಾನು, ಈಗ ವರ್ಷಕ್ಕೆ 25 ಲಕ್ಷ ದುಡಿಯುತ್ತೇನೆ. ಕಂಡ ಕನಸುಗಳೆಲ್ಲ ನನಸಾಗಿವೆ ಎಂದ ಮುನ್ನಾ ಠಾಕೂರ್, ತಮ್ಮ ಯಶೋ ಗಾಥೆಗೆ ಫುಲ್ ಸ್ಟಾಪ್ ಹಾಕುವ ಮುನ್ನ ಹೇಳಿದರು: “ನಾನು ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಫೋಟೋಶೂಟ್ ಮಾಡಿದ್ದೇನೆ. ಪುನೀತ್ ಅವರಿಗೆ ಫೋಟೋಗ್ರಫಿ ಬಗ್ಗೆ ತುಂಬಾ ತಿಳಿವಳಿಕೆ ಇತ್ತು. ಶಾಟ್‌ಗಳ ಬಗ್ಗೆ ಅವರು ಸಾಕಷ್ಟು ವಿಷಯ ತಿಳಿಸಿದ್ದರು. ಅವರ ನೆನಪಾದಾಗೆಲ್ಲ ಸಂಕಟ ಆಗುತ್ತೆ, ಕಣ್ತುಂಬಿ ಬರುತ್ತೆ…”
ಹಿಂದೊಮ್ಮೆ ಆಡಿಕೊಂಡಿದ್ದ ಜನರೇ ಈಗ ಹಾಡಿ ಹೊಗಳುವ ಮಟ್ಟಕ್ಕೆ ಬೆಳೆದ, ಒಬ್ಬ ಸಾಮಾನ್ಯ ಫೋಟೋಗ್ರಾಫರ್ ಆಗಿಯೂ ಹಲವರಿಗೆ ರೋಲ್ ಮಾಡೆಲ್ ಆದ ಮುನ್ನಾ ಠಾಕೂರ್ ಅವರಿಗೆ ಅಭಿನಂದನೆ ಹೇಳಲು- munna@munnas.com
ಎ.ಆರ್.ಮಣಿಕಾಂತ್