Advertisement

ಕೈನಲ್ಲಿ ಪರ್ಯಾಯ ನಾಯಕತ್ವದ ಲೆಕ್ಕಾಚಾರ

10:48 PM Jul 20, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಬಹುಮತ ಸಾಬೀತು ಪಡಿಸದಿದ್ದರೆ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿ ಸರ್ಕಾರ ರಚನೆಗೆ ಪ್ರಸ್ತಾಪ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಪರ್ಯಾಯ ನಾಯಕತ್ವದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಪ್ರಸ್ತಾಪ ಸಲ್ಲಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Advertisement

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡರೆ, ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ನಿಂದ ಪರ್ಯಾಯ ನಾಯಕತ್ವದಲ್ಲಿ ವಿಶ್ವಾಸ ಮಂಡನೆಗೂ ಅವಕಾಶವಿದೆ. ಹೀಗಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಪ್ರಸ್ತಾಪ ಮಂಡಿಸುವ ಕುರಿತು ಚರ್ಚೆ ನಡೆಸಿದೆ ಎನ್ನಲಾಗುತ್ತಿದೆ.

ಖರ್ಗೆ ಅವರ ಹೆಸರು ಪ್ರಸ್ತಾಪ ಮಾಡಿದರೆ, ಮುಂಬೈನಲ್ಲಿರುವ ಅತೃಪ್ತರಲ್ಲಿ ಕೆಲವು ಶಾಸಕರಾದರೂ, ವಾಪಸ್‌ ಬರುತ್ತಾರೆ ಎನ್ನುವ ವಿಶ್ವಾಸ ಕಾಂಗ್ರೆಸ್‌ ನಾಯಕರದ್ದಾಗಿದೆ. ಈಗಿರುವ ಸಂಖ್ಯಾ ಬಲದಲ್ಲಿ ಬಿಜೆಪಿ 105 ಹಾಗೂ ಪಕ್ಷೇತರ ಇಬ್ಬರು ಶಾಸಕರನ್ನು ಸೇರಿಸಿಕೊಂಡು 107 ಸಂಖ್ಯಾ ಬಲ ಹೊಂದಿದೆ. ಮೈತ್ರಿ ಪಕ್ಷಗಳು ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಸೇರಿಕೊಂಡು 101 ಶಾಸಕರ ಬಲ ಹೊಂದಿವೆ.

ಶ್ರೀಮಂತ ಪಾಟೀಲ್‌ ರಾಜೀನಾಮೆ ಸಲ್ಲಿಸದೇ ಸದನಕ್ಕೆ ಗೈರು ಹಾಜರಾಗಿರುವುದರಿಂದ ಸದ್ಯ ಮೈತ್ರಿ ಸಂಖ್ಯಾ ಬಲ 100 ಕ್ಕೆ ಇಳಿದಿದೆ. ಮೈತ್ರಿ ಸರ್ಕಾರ ರಚನೆಗೆ ಬೇಕಿರುವುದು ಏಳು ಶಾಸಕರು ಮಾತ್ರ. ಮಲ್ಲಿಕಾರ್ಜುನ ಖರ್ಗೆ ನಾಯಕತ್ವದ ಪ್ರಸ್ತಾಪವಾದರೆ, ರಮೇಶ್‌ ಜಾರಕಿಹೊಳಿ ಸೇರಿ ಅವರೊಂದಿಗೆ ಗುರುತಿಸಿಕೊಂಡ ಎಂಟು ಶಾಸಕರು ಮುಂಬೈನಿಂದ ವಾಪಸ್‌ ಬರುತ್ತಾರೆಂಬ ಲೆಕ್ಕಾಚಾರ ಕಾಂಗ್ರೆಸ್‌ ಕೆಲವು ನಾಯಕರದ್ದು. ಜತೆಗೆ ಪಕ್ಷೇತರ ಶಾಸಕ ನಾಗೇಶ್‌ ಕೂಡ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಚರ್ಚಿತವಾಗುತ್ತಿವೆ.

ಗೌಡರ ಒಪ್ಪಿಗೆಯೂ ಮುಖ್ಯ: ಕಾಂಗ್ರೆಸ್‌ ನಾಯಕರ ಪರ್ಯಾಯ ಅಸ್ತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಸಹಮತಿ ಅತ್ಯಂತ ಮುಖ್ಯವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ದೇವೇಗೌಡರು ತಮ್ಮ ಕಾರ್ಯತಂತ್ರಕ್ಕೆ ಸಹಮತ ವ್ಯಕ್ತಪಡಿಸಬಹುದೆಂಬ ಆಲೋಚನೆ ಕಾಂಗ್ರೆಸ್‌ ನಾಯಕರದ್ದಾಗಿದೆ ಎಂದು ಹೇಳಲಾಗಿದೆ.

Advertisement

ಕುಮಾರಸ್ವಾಮಿಯವರು ಸೋಮವಾರವೂ ಬಹುಮತ ಸಾಬೀತು ಪಡಿಸಲು ವಿಳಂಬ ಧೋರಣೆ ಅನುಸರಿಸಿದರೆ, ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಅಮಾನತಿನಲ್ಲಿಟ್ಟು, ನಂತರ ಬೇರೆ ಪಕ್ಷಕ್ಕೆ ಬಹುಮತ ಸಾಬೀತಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಆ ಸಂದರ್ಭದಲ್ಲಿ ಸದ್ಯ ರಾಜೀನಾಮೆ ಸಲ್ಲಿಸಿರುವ 16 ಜನ ಶಾಸಕರ ರಾಜೀನಾಮೆಗಳು ಅಂಗೀಕಾರವಾಗದೇ ಇರುವುದರಿಂದ ಅವರು ತಾಂತ್ರಿಕವಾಗಿ ಈಗಲೂ ಆಯಾ ಪಕ್ಷಗಳ ಸದಸ್ಯರಾಗಿದ್ದಾರೆ.

ಕುಮಾರಸ್ವಾಮಿ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅವರು ಇದುವರೆಗೂ ಬಹಿರಂಗವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲ. ಹೀಗಾಗಿ, ಪರ್ಯಾಯ ನಾಯಕತ್ವ ಎಂದರೆ ಅವರು ಬರಬಹುದೆಂದು ಹೇಳಲಾಗುತ್ತಿದೆ. ಸೋಮವಾರ ಆದಷ್ಟು ಸರ್ಕಾರ ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳುವುದು. ಕೊನೆಯದಾಗಿ ಬಿಜೆಪಿ ಅಧಿಕಾರ ಹಿಡಿಯುವ ಪ್ರಸ್ತಾಪ ಮಾಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಮಾಡುವ ಯೋಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅತೃಪ್ತರು ಬರುವುದು ಅನುಮಾನ: ಮತ್ತೂಂದೆಡೆ ಅತೃಪ್ತ ಶಾಸಕರ ನಡೆ ಅತ್ಯಂತ ಮಹತ್ವದ್ದಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಮಾಡಿದರೂ, ಮುಂಬೈನ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ವಿಶ್ವಾಸ ಮತ ಯಾಚನೆಗೆ ಬರುತ್ತಾರಾ ಎಂಬ ಅನುಮಾನವೂ ಇದೆ. ಕಾಂಗ್ರೆಸ್‌ನವರು ಆರೋಪಿಸಿರುವಂತೆ ಅವರು ಬಿಜೆಪಿಯವರ ಹಿಡಿತದಲ್ಲಿಯೇ ಇದ್ದರೆ, ಕುಮಾರಸ್ವಾಮಿ ಸರ್ಕಾರ ಪತನವಾಗಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗುವವರೆಗೂ ಅವರು ಮುಂಬೈ ಬಿಟ್ಟು ವಾಪಸ್‌ ಬರುವುದು ಅನುಮಾನ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಅತೃಪ್ತರಿಗೆ ಕಂಟಕ: ಈಗಾಗಲೇ ಕಾಂಗ್ರೆಸ್‌ ವಿಪ್‌ ಜಾರಿ ಮಾಡಿದ್ದರೂ, ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದೇ ಹೊರಗುಳಿಯುವ 15 ಶಾಸಕರಿಗೆ ಸುಪ್ರೀಂಕೋರ್ಟ್‌ ರಕ್ಷಣೆ ನೀಡಿದೆ. ಆದರೆ, ಈ ಸರ್ಕಾರ ಪತನವಾದ ನಂತರವೂ ಸ್ಪೀಕರ್‌ ರಮೇಶ್‌ ಕುಮಾರ್‌ ಅತೃಪ್ತರ ರಾಜೀನಾಮೆ ಅಂಗೀಕರಿಸದೇ ಹಾಗೆಯೇ ಉಳಿಸಿಕೊಂಡಿದ್ದರೆ, ಬಿಜೆಪಿ ಮೊದಲು ಸ್ಪೀಕರ್‌ ಬದಲಾವಣೆಗೆ ಮುಂದಾಗಬಹುದು. ಆ ಸಂದರ್ಭದಲ್ಲಿಯೂ ಅತೃಪ್ತರಿಗೆ ಮೈತ್ರಿ ಪಕ್ಷಗಳು ರಮೇಶ್‌ಕುಮಾರ್‌ ಪರ ಮತ ಚಲಾಯಿಸುವಂತೆ ವಿಪ್‌ ನೀಡುವ ಸಾಧ್ಯತೆ ಇದೆ. ಆಗಲೂ ಗೈರು ಹಾಜರಾದರೆ, ಕಾಂಗ್ರೆಸ್‌ ಅವರ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮತ್ತೂಂದು ದೂರು ನೀಡಬಹುದು.

* ಶಂಕರ್‌ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next