Advertisement

ಸಿಎಜಿ ವರದಿ ತನಿಖೆಗೆ ಆಗ್ರಹ

06:00 AM Dec 09, 2018 | |

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ 35 ಸಾವಿರ ಕೋಟಿ ರೂ. ದುರುಪಯೋಗ ಆಗಿರುವ ಬಗ್ಗೆ ಸಿಎಜಿ ನೀಡಿರುವ ವರದಿಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಗಂಭೀರವಾಗಿ ಪರಿಗಣಿಸಿ ಸದನ ಸಮಿತಿ ರಚನೆ ಮಾಡಿ, ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಿಂದಿನ ಸರ್ಕಾರ ಮಾಡಿದ ಹಣ ದುರುಪಯೋಗದ ಕುರಿತು ಸಿಎಜಿ ವರದಿ ಆಧಾರಿಸಿ ಬಿಜೆಪಿ ಸಮಗ್ರ ವರದಿ ಬಿಡುಗಡೆ ಮಾಡಿತ್ತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಘುವಾಗಿ ಉತ್ತರ ನೀಡಿದ್ದಾರೆ. ಜನರಿಗೆ ಲೆಕ್ಕ ನೀಡುವ ಅಗತ್ಯವಿಲ್ಲ ಹಾಗೂ ಬಜೆಟ್‌ ಗಾತ್ರ ಹೆಚ್ಚಾದಂತೆ ವ್ಯತ್ಯಾಸ ಸ್ವಾಭಾವಿಕವಾಗಿರುತ್ತದೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಜನರಿಗೆ ಹಣದ ಲೆಕ್ಕ ನೀಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಸಿಎಂ ಕುಮಾರಸ್ವಾಮಿಯವರು ಸದನ ಸಮಿತಿ ರಚನೆ ಮಾಡಿ, ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇಂತಹ ಗಂಭೀರ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಜಾಣ ಮೌನ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ತನಿಖೆಗೆ ಆದೇಶಿಸಿದರೆ ಎಲ್ಲಿ ತಮ್ಮ ಕುರ್ಚಿಗೆ ಕಂಟಕ ಬರುತ್ತದೋ ಎಂಬ ಭಯ ಮುಖ್ಯಮಂತ್ರಿಯವರಿಗೆ ಕಾಡುತ್ತಿದೆ. ಯಾರ ಹಂಗಿನಲ್ಲೂ ಇಲ್ಲ ಎಂದು ಪದೇ ಪದೆ ಹೇಳುವ ಕುಮಾರಸ್ವಾಮಿಯವರು ಸಿಎಜಿ ವರದಿಯ ಸಮಗ್ರ ತನಿಖೆಗೆ ಆದೇಶಿಸಿ, ಯಾರ ಹಂಗಿನಲ್ಲೂ ಇಲ್ಲ ಎಂಬುದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಇದೊಂದು ಸಾಮಾನ್ಯ ಪ್ರಕ್ರಿಯೆ ಹೊರತು ಯಾವುದೇ ಹಗರಣ ನಡೆದಿಲ್ಲ. ರಾಜಕೀಯ ಕಾರಣಗಳಿಗಾಗಿ ಬಿಜೆಪಿಯವರು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
– ಸಿದ್ದರಾಮಯ್ಯ, ಮಾಜಿ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next