Advertisement
ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿಗ್ ಬಾಸ್ ಮನೆಯ ಅದ್ಧೂರಿ ಸೆಟ್ ಇದೆ. ಕನ್ನಡಿಗರ ಮನೆಮಾತಾಗಿರುವ ಈ ಜನಪ್ರಿಯ ರಿಯಾಲಿಟಿ ಶೋಗೆ ಬಳಕೆಯಾಗುತ್ತಿದ್ದ ಬೃಹತ್ ಮನೆಯಲ್ಲಿ ಬಿಗ್‌ಬಾಸ್ ನ ಐದು ಸೀಸನ್‌ಗಳ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ.
Related Articles
Advertisement
ಸತತ ಐದು ಗಂಟೆ ಕಾರ್ಯಾಚರಣೆ: ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಸಮೀಪದಲ್ಲೇ ಇರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ ಬಾಷ್ ಕಂಪನಿಗಳು ನೆರವಿಗೆ ಧಾವಿಸಿದ್ದು, ತಮ್ಮಲ್ಲಿರುವ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿವೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸುವ ಮೊದಲೇ ಈ ಖಾಸಗಿ ವಾಹನಗಳು ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದವು.
ನಂತರ ರಾಮನಗರ, ಚನ್ನಪಟ್ಟಣ, ಕನಕಪುರ, ಕೆಂಗೇರಿ, ಬೆಂಗಳೂರು ಕಡೆಯಿಂದ ಆಗಮಿಸಿದ ಸುಮಾರು 30 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗ್ನಿ ಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು.
ಭಸ್ಮವಾದ ಭವ್ಯ ಬಂಗಲೆ!: ಬೆಳಗಿನಜಾವ 3.30ರ ಸುಮಾರಿಗೆ ವ್ಯಾಕ್ಸ್ ಮ್ಯೂಸಿಯಂನಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ನಂತರ ಕಲೆವೇ ಕ್ಷಣಗಳಲ್ಲಿ ಬೆಂಕಿ ಬಿಗ್‌ಬಾಸ್ ಮನೆಗೂ ಅವರಿಸಿ ಪಕ್ಕದಲ್ಲಿದ್ದ ಮಾದರಿ ಬಿಗ್ ಬಾಸ್ ಮನೆಗೂ ಹಬ್ಬಿದೆ. ಬಿಗ್‌ಬಾಸ್ ರಿಯಾಲಿಟಿ ಶೋಗಾಗಿಯೇ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಭವ್ಯವಾದ ಮನೆ ನಿರ್ಮಾಣವಾಗಿತ್ತು.
ಇಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋದ ಚಿತ್ರೀಕರಣ ನಡೆಯುತ್ತಿತ್ತು. ಇನ್ನು ಬಿಗ್‌ಬಾಸ್ ಮನೆಗೆ ಭೇಟಿ ಕೊಡಲು ಪ್ರವಾಸಿಗರು ಹಾತೊರೆಯುತ್ತಿದ್ದ ಕಾರಣ ಫಿಲಂ ಸಿಟಿಯ ಆಡಳಿತ, ಬಿಗ್‌ಬಾಸ್ ಮನೆಯ ಮಾದರಿ ಮನೆ ನಿರ್ಮಿಸಿತ್ತು. ಆಮೂಲಕ ಪ್ರವಾಸಿಗರು ಸಹ ಬಿಗ್‌ಬಾಸ್ ಮನೆಯೊಳಗೆ ಹೋಗಿ ಸರ್ಧಿಗಳು ಪಡೆಯುವ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಿಗಿನ ಜಾವ ನಡೆದ ಬೆಂಕಿ ಅವಘಡದಲ್ಲಿ ಈ ಎರಡೂ ಮನೆಗಳು ಭಸ್ಮವಾಗಿವೆ.
ಬೆಂಕಿ ಬಿಸಿಗೆ ಕರಗಿದ ಪ್ರತಿಮೆಗಳು: ಬೆಂಕಿ ಅವಘಡದಿಂದಾಗಿ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿದ್ದ ವ್ಯಾಕ್ಸ್ ಮ್ಯೂಸಿಯಂನಲ್ಲಿ ಮಹಾತ್ಮಗಾಂಧಿ, ಐನ್‌ಸ್ಟಿನ್, ಮದರ್ ಥೆರೆಸಾ, ಬಿಲ್ ಕ್ಲಿಂಟನ್, ದಲೈಲಾಮ, ಮೋನಾಲಿಸಾ, ಚಾರ್ಲಿ ಚಾಪ್ಲಿನ್ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಹಾಗೂ ಪ್ರಸಿದ್ಧ ವ್ಯಕ್ತಿಗಳ, ಪ್ರಾಣಿ ಪಕ್ಷಿಗಳ, ಡಿಸ್ನಿ ಪಾತ್ರಗಳು ಸೇರಿದಂತೆ 60ಕ್ಕೂ ಹೆಚ್ಚು ಮೇಣದ ಪ್ರತಿಮೆಗಳಿದ್ದವು. ಗುರುವಾರ ಬೆಳಗಿನಜಾವ ಕಾಣಿಸಿಕೊಂಡ ಬೆಂಕಿಯ ಬಿಸಿಗೆ ಈ ಎಲ್ಲ ಪ್ರತಿಮೆಗಳು ಕರಗಿ ಹೋಗಿವೆ. 10 ವರ್ಷಗಳ ಹಿಂದೆ ಈ ಮ್ಯೂಸಿಯಂ ಸ್ಥಾಪನೆಯಾಗಿದ್ದು, ಇದು ಭಾರತದ ಪ್ರಥಮ ವ್ಯಾಕ್ಸ್ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ತನಿಖೆಯಿಂದ ಕಾರಣ ಸ್ಪಷ್ಟ: ಬಿಗ್‌ಬಾಸ್ ಮನೆಗೆ ಬೆಂಕಿ ಬೀಳಲು ಶಾರ್ಟ್ ಸರ್ಕಿಟ್ ಕಾರಣ ಎಂದು ಶಂಕಿಸಲಾಗಿದೆ. ಆದರೆ ವಿಧಿವಿಜ್ಞಾನ ತನಿಖೆಯ ವರದಿ ಬಂದ ನಂತರವಷ್ಟೇ ನಿಜ ಕಾರಣ ತಿಳಿಯಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ಡಿವೈಎಸ್ಪಿ ತಮ್ಮಯ್ಯ ಹಾಗೂ ಫಿಲಂ ಸಿಟಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.