Advertisement
ಉಪನ್ಯಾಸಕರ ಅರಿಯರ್ ವಸೂಲಾತಿ ಸಂಬಂಧ ಇಲಾಖೆಯಿಂದ ಮೂರ್‍ನಾಲ್ಕು ಆದೇಶ ಹೊರಡಿಸಲಾಗಿದೆ. ಯುಜಿಸಿ ಹಿಂಬಾಕಿಯ ಸಂದರ್ಭದಲ್ಲಿ ಹೆಚ್ಚುವರಿ ಹಿಂಬಾಕಿ ವೇತನ ಪಡೆದಿರುವುದನ್ನು ವಾಪಸ್ ಪಡೆಯುವಂತೆ ಸೆ.12ರಂದು ಸುತ್ತೋಲೆ ಹೊರಡಿಸಿದ್ದರು. ಇದರ ವಿರುದ್ಧ ಪ್ರಾಧ್ಯಾಪಕರು ಪ್ರತಿಭಟನೆ ನಡೆಸಿದ್ದರಿಂದ ಹೆಚ್ಚುವರಿ ಹಿಂಬಾಕಿ ವೇತನದ ಬದಲಿಗೆ ತುಟ್ಟಿಭತ್ಯೆಯ ಹಿಂಬಾಕಿಯನ್ನು ವಸೂಲಿ ಮಾಡುವಂತೆ ಹೊಸ ಆದೇಶ ನೀಡಿದೆ. 2006ರ ಜನವರಿ 1ರಿಂದ 2009ರ ಡಿ.23ರ ಅವಧಿಯ ಸ್ಥಾನೀಕರಣ ಹಿಂಬಾಕಿ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ಮೂಲ ವೇತನದ ಲೆಕ್ಕಚಾರದ ಬದಲಿಗೆ ತುಟ್ಟಿಭತ್ಯೆ, ಮನೆ ಬಾಡಿಗೆಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಜತೆಗೆ ಇತರೆ ಭತ್ಯೆಗಳನ್ನು ಸೇರಿಸಿ ಲೆಕ್ಕಚಾರ ಮಾಡಲಾಗಿತ್ತು. ಹೀಗಾಗಿ ಸುಮಾರು 5 ಸಾವಿರ ಉಪನ್ಯಾಸಕರು ಸ್ಥಾನೀಕರಣ ಹಿಂಬಾಕಿಯ ಜತೆಗೆ ಇತರೆ ಭತ್ಯೆಯನ್ನು ಪಡೆದಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ತುಟ್ಟಿ ಭತ್ಯೆಯನ್ನು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಇಲಾಖೆಯ ಈ ನಿರ್ಣಯದ ವಿರುದ್ಧ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಜಿಸಿಯಿಂದ 2009ರಲ್ಲಿ ಹೊರಡಿಸಿರುವ ಪಿಎಚ್.ಡಿ ನಿಯಮಕ್ಕೆ ಅನುಸಾರವಾಗಿ 2009ರ ಜು.11ರ ನಂತರ ಪಿಎಚ್.ಡಿಗೆ ನೋಂದಣಿ ಮಾಡಿ, ಯುಜಿಸಿ ನಿಯಮವನ್ನು ಪಾಲಿಸದೇ ಪದವಿ ಪಡೆದಿರುವ ಅನುದಾನಿತ ಕಾಲೇಜಿನ ಬೋಧಕರಿಗೆ ಮುಂಗಡ ವೇತನ ಬಡ್ತಿಯನ್ನು ನೀಡಲಾಗಿದೆ. ಆಯಾ ಕಾಲೇಜುಗಳಲ್ಲಿ ಇದನ್ನು ಪರಿಶೀಲಿಸಿ, ಮುಂಗಡ ಬಡ್ತಿಯನ್ನು ವಾಪಾಸ್ ಪಡೆದು ಸೆ.28ರೊಳಗೆ ವರದಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.