Advertisement
ರಸಗೊಬ್ಬರ ಧಾರಣೆ ಮತ್ತು ನಿರ್ವಹಣೆ ವೆಚ್ಚ ಏರುತ್ತಿದೆ. ಆದರೆ ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿರುವುದು ಆದಾಯ ಮತ್ತು ನಿರ್ವಹಣೆ ವೆಚ್ಚದ ನಡುವೆ ಅಂತರ ಸೃಷ್ಟಿಸಿದೆ. ನಿಷೇಧ ಭೀತಿ, ರೋಗ, ನೀರಿನ ಕೊರತೆಗಳು ತೋಟ ಮುಂಬರುವ ದಿನಗಳಲ್ಲಿ ಉಳಿಯಬಹುದೇ ಎಂಬ ಆತಂಕ ಸೃಷ್ಟಿಸಿವೆ.
Related Articles
Advertisement
ಮದ್ದು ಸಿಂಪಡಣೆ, ಇತರ ಕೆಲಸಕ್ಕೆ ಕಾರ್ಮಿಕರು ಸಿಗುವುದೇ ಅಪರೂಪ. ಪರಿಣಾಮ ಕೂಲಿ ಏರಿಕೆ. ಔಷಧ ಸಿಂಪಡಿಸುವವರಿಗೆ 10 ವರ್ಷಗಳ ಹಿಂದೆ 300ರಿಂದ 350 ರೂ. ಇದ್ದ ಕೂಲಿ ಈಗ 1,500 ರೂ. ಒಂದೇ ವರ್ಷದ ಅಂತರದಲ್ಲಿ 300 ರೂ.ನಷ್ಟು ಏರಿದೆ.
ಐದು ವರ್ಷಗಳ ಹಿಂದೆ 150-160 ರೂ. ಇದ್ದ ಮೈಲುತುತ್ತು ಧಾರಣೆ ಈಗ 220 ರೂ.ಗೆ ತಲುಪಿದೆ. 15 -20 ರೂ.ನಲ್ಲಿದ್ದ ಕೆಜಿ ಸುಣ್ಣಕ್ಕೆ ಈಗ 40 ರೂ. ಔಷಧ ಸಿಂಪಡಣೆಯ ಸಹಾಯಕನಿಗೆ 250 ರೂ. ಇದ್ದ ಸಂಬಳ ಈಗ 700ರಿಂದ 900 ರೂ. ತನಕವಿದೆ.
ಒಂದು ಬ್ಯಾರೆಲ್ ಔಷಧ ಸಿಂಪಡಣೆಗೆ ಕೂಲಿ ವೆಚ್ಚ, ಔಷಧ, ಸಹಾಯಕನ ವೇತನ ಸೇರಿ ಕಡಿಮೆ ಅಂದರೆ 2,500 ರೂ. ಬೇಕು. ಎರಡು ದಿನ ಔಷಧ ಸಿಂಪಡಿಸುವ ತೋಟಕ್ಕೆ ಬೆಳೆಗಾರ ವ್ಯಯಿಸಬೇಕಾದ ಖರ್ಚು ಏಳೆಂಟು ಸಾವಿರ ರೂ.!
ಶ್ರಮಕ್ಕೆ ಸಿಗದ ನ್ಯಾಯ!
ಅಡಿಕೆ ಸುಲಿಯಲು ಕೆಜಿಗೆ 1.5 ರೂ. ಕೂಲಿ ಇದ್ದ ಕಾಲದಲ್ಲಿ ಕೆಜಿ ಹೊಸ ಅಡಿಕೆಗೆ 200-250 ರೂ. ತನಕ ಧಾರಣೆ ಇತ್ತು. ಈಗ ಅಡಿಕೆ ಸುಲಿಯಲು ಕೆಜಿಗೆ 10 ರೂ. ನೀಡಬೇಕು. ಆದರೆ ಧಾರಣೆ 200ರಿಂದ 243 ರೂ. ಮಾತ್ರ. ಅಡಿಕೆಗೆ ಹತ್ತಾರು ವರ್ಷಗಳಿಂದ ಧಾರಣೆ ಹೆಚ್ಚುಕಮ್ಮಿ ಒಂದೇ ಇದ್ದರೆ ಕೃಷಿಗೆ ವ್ಯಯಿಸಬೇಕಾದ ಮೊತ್ತ ಹತ್ತು ಪಟ್ಟು ಏರಿದೆ.
ಸರಕಾರಕ್ಕೆ ಆದಾಯ, ಬೆಳೆಗಾರರಿಗೆ ಬರ
ಅಡಿಕೆ ವಹಿವಾಟಿನಿಂದ ಕೇಂದ್ರ ಸರಕಾರಕ್ಕೆ ವರ್ಷಕ್ಕೆ 1,800ರಿಂದ 2,200 ಕೋ.ರೂ. ತನಕ ತೆರಿಗೆ ಸಿಗುತ್ತದೆ, ರಾಜ್ಯ ಸರಕಾರಕ್ಕೆ 150ರಿಂದ 200 ಕೋ.ರೂ. ತನಕ ದೊರೆಯುತ್ತದೆ. ಜಿಎಸ್‌ಟಿ, ಸೀಮಾ ಸುಂಕ, ಆಮದು ಮೇಲಿನ ಕಸ್ಟಮ್ಸ್ ಸುಂಕ, ಎಪಿಎಂಸಿ ತೆರಿಗೆ ಹೀಗೆ ನಾನಾ ಪಾಲು ಸರಕಾರಗಳ ಬೊಕ್ಕಸಕ್ಕೆ ಜಮೆ ಆಗುತ್ತದೆ. ಇದಕ್ಕೆ ಸಮನಾದ ಪಾಲು ಬೆಳೆಗಾರನಿಗೆ ಸಿಗುತ್ತಿಲ್ಲ.
ಕೇಂದ್ರ ಸರಕಾರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಮಾವಳಿಯಡಿ ತಂಬಾಕಿನ ಜತೆಗೆ ಅಡಿಕೆ ಉತ್ಪನ್ನ ಸೇರಿಸಿರುವುದು ಅಡಿಕೆ ಹಾನಿಕಾರಕ ಎನ್ನಲು ಮೂಲ ಕಾರಣ. ಈ ಪಟ್ಟಿಯಿಂದ ಅಡಿಕೆಯನ್ನು ತೆಗೆದುಹಾಕುವ ಪ್ರಯತ್ನ ನಡೆದಿರುವುದು ಅಷ್ಟಕ್ಕಷ್ಟೆ. ಹೀಗಾಗಿ ನಿಷೇಧದ ಗುಮ್ಮ ಕಾಡುತ್ತಿದೆ.
ಅಡಿಕೆಯಲ್ಲಿ ಹಾನಿಕರ ಅಂಶಗಳಿವೆ ಎಂದು 2011ರಲ್ಲಿ ಯುಪಿಎ ಸರಕಾರ ಸುಪ್ರೀಂ ಕೋರ್ಟಿಗೆ ಅಫಿದವಿತ್ ಸಲ್ಲಿಸಿದ್ದು ವಿವಾದದ ಮೂಲ. 2017ರಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಅಡಿಕೆ ಬಾಯಿ ಕ್ಯಾನ್ಸರ್‌ಗೆ ಕಾರಣ ಎಂದು ನೀಡಿದ ಹೇಳಿಕೆ ಮತ್ತೆ ಸಮಸ್ಯೆ ಸೃಷ್ಟಿಸಿತು. ಆರೋಗ್ಯಕ್ಕೆ ಹಾನಿಯಿಲ್ಲ ಎನ್ನುವ ಅಧ್ಯಯನ ವರದಿಯನ್ನು ಕಾಸರಗೋಡು ಸಿಪಿಸಿಆರ್‌ಐ ಕೇಂದ್ರ ಆರೋಗ್ಯ ಇಲಾಖೆಗೆ ನಾಲ್ಕು ತಿಂಗಳ ಹಿಂದೆ ಸಲ್ಲಿಸಿದ್ದರೂ ಅದನ್ನು ಕಡತಕ್ಕೆ ಸೇರಿಸಿಲ್ಲ.