Advertisement

ಗಾಂಧೀಜಿ ತಂಗಿದ್ದ ಕಟ್ಟಡ ಅಭಿವೃದ್ಧಿ ಆಗಿಲ್ಲ!

06:31 PM Aug 15, 2021 | Team Udayavani |

ಮಹಾತ್ಮ ಗಾಂಧೀಜಿ ಇಡೀ ರಾಷ್ಟ್ರದ ದೇಶಭಕ್ತರನ್ನು ಸಂಘಟಿಸಲು ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ತುಮಕೂರಿಗೆ ಬಂದು ಎರಡು ದಿನ ತಂಗಿದ್ದ ಸರ್ಕಾರಿ ಕಾಲೇಜು ಕಟ್ಟಡ ಅಭಿವೃದ್ಧಿ ಪಡಿಸಿ ಸ್ಮಾರಕವನ್ನಾಗಿಸಬೇಕೆಂದು ಹಲವಾರು ವರ್ಷಗಳಿಂದ ಹಲವರ ಒತ್ತಾಯವಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವ ಕನಸ್ಸು ಇನ್ನು ನನಸಾಗಿಲ್ಲ.

Advertisement

ತುಮಕೂರು: ಹಲವಾರು ಸ್ವಾತಂತ್ರ್ಯ ಯೋಧರನ್ನು ನೀಡಿದ ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನೂರಾರು ಜನರು ಭಾಗವಹಿಸಿ ಹಲವರು ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಇಂತಹ ಗಂಡು ಮೆಟ್ಟಿದ ಶೈಕ್ಷಣಿಕ ನಗರ ತುಮಕೂರಿಗೆ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಸಿ, ಅದೇ ಕಾಲೇಜಿನ ಕೊಠಡಿಯಲ್ಲಿ ತಂಗಿದ್ದರು. ಮಹಾತ್ಮ ನೆಲೆಸಿದ್ದ ಈ ಸ್ಮಾರಕ ಅಭಿವೃದ್ಧಿ ಕಾಣದೇ ನಿರ್ಲಕ್ಷ್ಯಕ್ಕೊಳಪಟ್ಟಿದೆ.

ಮಹಾತ್ಮ ಗಾಂಧೀಜಿಯವರೊಂದಿಗೆ ದೇಶದ ಅನೇಕ ದೇಶಭಕ್ತರು ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದರು. ಇಂತಹ ಹೋರಾಟಗಾರರ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಆಗಲೇಬೇಕಾಗಿದೆ. ಗಾಂಧೀಜಿಯವರು ಈ ರಾಷ್ಟ್ರವನ್ನು ಬ್ರಿಟಿಷ್‌ ದಾಸ್ಯ ಸಂಕೋಲೆಯಿಂದ ಮುಕ್ತಗೊಳಿಸಲು ಇಡೀ ದೇಶದಲ್ಲಿ ಸಂಚಾರ ಮಾಡಿ ಜನಜಾಗೃತಿ ಉಂಟು ಮಾಡಿ ಹೋರಾಟಕ್ಕೆ ಉರಿದುಂಬಿಸಲು ಬಂದಿದ್ದ ಸಂದರ್ಭದಲ್ಲಿ ತುಮಕೂರಿನಲ್ಲೂ ಒಂದು ದಿನ ತಂಗಿ ಜನಜಾಗೃತಿ ಉಂಟು ಮಾಡಿ ತುಮಕೂರು ಜಿಲ್ಲೆಯಲ್ಲೂ ಸ್ವಾತಂತ್ರ್ಯಹೋರಾಟದ ಕಹಳೆ ಮೊಳಗಲು ಕಾರಣರಾದರು. ಅವರು ತಂಗಿದ್ದ ಸರ್ಕಾರಿ ಕಾಲೇಜು ಕಟ್ಟಡ ಇಂದು ಸ್ಮಾರಕವಾಗಿದೆ. ಆದರೆ, ಅದರ ಅಭಿವೃದ್ಧಿ ಆಗದೇ ಇರುವುದು ವಿಪರ್ಯಾಸವಾಗಿದೆ. 1932ರಲ್ಲಿ ಮಹಾತ್ಮ ಗಾಂಧಿ ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸದರಿ ಜಾಗದಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಭಾಷಣ ಮಾಡಿದ ನಂತರ ಒಂದು ದಿನ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆ ಈ ಕಟ್ಟಡವನ್ನು ಮಹಾತ್ಮ ಗಾಂಧಿ ಸ್ಮಾರಕ ಕಟ್ಟಡವಾಗಿ ಮಾಡಲಾಗಿತ್ತು. ಆದರೆ, ಇದರ ನಿರ್ವಹಣೆ ಅಭಿವೃದ್ಧಿ ಪಡಿಸದೆ ಇಡೀಕಟ್ಟಡ ಹಾಳಾಗಿ ಹೋಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಸರ್ಕಾರಿ ಜೂನಿಯರ್‌ಕಾಲೇಜಿನ ವತಿಯಿಂದ ಸುಣ್ಣ ಬಣ್ಣ ಬಳಿದು ಕಟ್ಟಡ ಹಾನಿಯಾಗದಂತೆ
ನೋಡಿಕೊಂಡು ಬಂದಿದೆ.

ಇದನ್ನೂ ಓದಿ:ಆಂಧ್ರ ಪ್ರದೇಶದಲ್ಲಿ ಆಗಸ್ಟ್ 21ರವರೆಗೆ ಕರ್ಫ್ಯೂ ಮುಂದೂಡಿಕೆ

ಶೀಘ್ರ ಅಭಿವೃದ್ಧಿ ಆಗಲಿ: ಸ್ಮಾರ್ಟ್‌ಸಿಟಿ ಯೋಜನೆ ಹಣದಲ್ಲಿ 4.75 ಕೋಟಿ ಹಣ ಖರ್ಚು ಮಾಡಿ ಮೂಲ ಸ್ಮಾರಕ ಇರುವ ಜಾಗ ಬಿಟ್ಟು ಬೇರೆ ಕಡೆ ಗಾಂಧಿ ಸ್ಮಾರಕ ನಿರ್ಮಿಸಲು ಮುಂದಾಗಿದ್ದರು. ಆದರೆ, ನಾಗರಿಕರಿಂದ ವಿರೋಧ ಬಂದ ಹಿನ್ನೆಲೆ ಅದು ಸ್ಥಗಿತವಾಗಿದೆ. ಶಾಸಕ ಜಿ.ಬಿ. ಜ್ಯೋತಿ ಗಣೇಶ್‌ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆ ನಡೆಸಿ ಇರುವ ಸ್ಮಾರಕದ ಸ್ಥಳದಲ್ಲಿಯೇ ಅಭಿವೃದ್ಧಿ ಪಡಿಸಲು ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಡಾ.ಎಸ್‌. ರಫೀಕ್‌ ಅಹಮದ್‌ ಕೂಡಾ ಭೇಟಿ ನೀಡಿ ಸಣ್ಣ ಪುಟ್ಟ ದುರಸ್ಥಿ ಕಾಮಗಾರಿ ಕೈಗೊಂಡಿದ್ದರು. ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಶೀಘ್ರವಾಗಿ ಅಭಿವೃದ್ಧಿಯಾಗಲೆಂದು ಜನರ ಹಾಗೂ ವಿದ್ಯಾರ್ಥಿಗಳ ಆಶಯವಾಗಿದೆ.

Advertisement

ತುಮಕೂರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಂದು ತಂಗಿ ಇಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದರು. ಅವರು ತಂಗಿದ್ದ ಸರ್ಕಾರಿ ಜೂನಿಯರ್‌ ಕಾಲೇಜಿನ ಕೊಠಡಿಯನ್ನು ಸ್ಮಾರಕವಾಗಿ ಅಂದಿನಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಮೂಲ ಕಟ್ಟಡಕ್ಕೆಯಾವುದೇ ತೊಂದರೆ ಆಗದಂತೆ ಆ ಜಾಗವನ್ನು ಅಭಿವೃದ್ಧಿ ಪಡಿಸಿ ಗ್ರಂಥಾಲಯ ಸೇರಿದಂತೆ ಗಾಂಧೀಜಿಯವರ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ದೊರಕುವಂತೆ ಮಾಡಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿಕಾಮಗಾರಿ ಕೈಗೊಳ್ಳಲು ತೀರ್ಮಾನಕೈಗೊಂಡಿದ್ದೇವೆ.
-ಜಿ.ಬಿ. ಜ್ಯೋತಿಗಣೇಶ್‌, ಶಾಸಕ

– ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next