ಬೆಂಗಳೂರು: ಜೆಡಿಎಸ್‌ನಲ್ಲಿ “ಸೂಟ್‌ಕೇಸ್ ಸಂಸ್ಕೃತಿ’ ಇದೇ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಇದೀಗ ಪಕ್ಷದಲ್ಲೇ ಇರುವ ಕೆಲವು “ಬಕೆಟ್’ ಕಳ್ಳರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದರು ಎಂದು ಹೊಸ “ಬಾಂಬ್’ ಸಿಡಿಸಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ತಯಾರಿ ನಡೆಸಿರುವ ಅವರು ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಹುಣಸೂರು ಕ್ಷೇತ್ರದ ಕೆಲವು ಬಕೆಟ್ ಕಳ್ಳರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ನನ್ನ ಹೇಳಿಕೆ ತಿರುಚಿದ್ದರು ಎಂದು ಆಕ್ರೋಶ ಹೊರಹಾಕಿದರು.
ನಾನು ಬೆಳೆದರೆ ಅವರ ಕಳ್ಳಾಟ ತಡೀತೀನಿ ಅನ್ನೋ ಭಯ ಕೆಲವರಿಗಿದೆ. ಆದರೆ, ನಾನು ಈವರೆಗೆ ಬಿದ್ದಿಲ್ಲ, ಬೀಳುವುದೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.ಹುಣಸೂರು ಘಟನೆಯಿಂದ ಸಾಕಷ್ಟು ನೊಂದಿದ್ದೇನೆ. ಆರ್.ಆರ್. ನಗರ ನನಗೆ ಪುನರ್ಜನ್ಮ ನೀಡಿದೆ. ರಾಜರಾಜೇಶ್ವರಿ ತಾಯಿ ನಮ್ಮ ಕುಟುಂಬದ ಮೇಲಿದೆ. ನಮ್ಮ ತಾತ-ಅಜ್ಜಿ, ತಂದೆ- ತಾಯಿ ಏನೇ ಕೆಲಸಕ್ಕೆ ಮುಂದಾದರೂ ರಾಜರಾಜೇಶ್ವರಿ ತಾಯಿಯ ಆರ್ಶೀವಾದ ಪಡೆದೇ ಮುಂದಾಗುತ್ತಾರೆ. ಅದೇ ಶಕ್ತಿಯ ಭರವಸೆ ನನಗೂ ಇದೆ ಎಂದು ಹೇಳಿದರು.
ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸಂದೇಶ ಸಹ ರವಾನಿಸಿದರು.
ಮೊದಲಿಗೆ ಹಾಸನದ ಬೇಲೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದ ಪ್ರಜ್ವಲ್ ರೇವಣ್ಣ ನಂತರ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಓಡಾಟ ಮಾಡಿ ಅಲ್ಲಿ ಸ್ಪರ್ಧಿಸುವ ಬಯಕೆ ಹೊರ ಹಾಕಿದ್ದರು. ಅಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಪ್ರವೇಶಿಸಿ ತಾಕೀತು ಮಾಡಿ ಸುಮ್ಮನಾಗಿಸಿದ್ದರು. ಹುಣಸೂರು ಕ್ಷೇತ್ರದಲ್ಲಿ ಎಚ್.ವಿಶ್ವನಾಥ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತು.
ನಂತರ ಚುನಾವಣೆಗೆ ಸ್ಪರ್ಧೆ ಮಾಡುವುದೇ ಆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಪ್ರಜ್ವಲ್ ರೇವಣ್ಣ ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.