Advertisement

ಮುದ್ರಣ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ: ಗೌತಮ್‌ ಪೈ

03:45 AM Feb 03, 2017 | Team Udayavani |

ಉಡುಪಿ: ಮುದ್ರಣ ಕ್ಷೇತ್ರಕ್ಕೆ ಭವಿಷ್ಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಮಣಿಪಾಲ್‌ ಟೆಕ್ನಾಲಜೀಸ್‌ ಲಿ. ಆಡಳಿತ ನಿರ್ದೇಶಕ ಟಿ.ಗೌತಮ್‌ ಪೈ ಹೇಳಿದರು. 

Advertisement

ಮಣಿಪಾಲ ಎಂಐಟಿಯ ಪ್ರಿಂಟಿಂಗ್‌ ಆ್ಯಂಡ್‌ ಮೀಡಿಯ ಎಂಜಿನಿಯರಿಂಗ್‌ ವಿಭಾಗ ಮುದ್ರಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ಒತ್ತಾಸೆ ನೀಡುವ ಗುರಿಯೊಂದಿಗೆ ಗುರುವಾರ ಆಯೋಜಿಸಿದ ರಾಷ್ಟ್ರ ಮಟ್ಟದ ಅಂತರ್‌ ಕಾಲೇಜು ತಾಂತ್ರಿಕ ಸವಾಲು  “ಇಂಪ್ರಶನ್ಸ್‌ 2017′ ಉದ್ಘಾಟನೆ ಮತ್ತು ಪ್ರೊ| ಕೆ.ಪಿ. ರಾವ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕ ಕ್ಷೇತ್ರದಲ್ಲಿ ಮುದ್ರಣ ಕ್ಷೇತ್ರದ ಪಾಲು ಮತ್ತು ಇದರಲ್ಲಿ ಭಾರತದ ಪಾತ್ರ ಬಹುಮುಖ್ಯವಾಗಿದೆ ಎಂದರು. 

ಮಣಿಪಾಲದ ಸ್ಥಾನ
ಈ ಕ್ಷೇತ್ರದಲ್ಲಿ ಭಾರತ ಯುನೈಟೆಡ್‌ ಕಿಂಗ್‌ಡಮ್‌ನ್ನು ಹಿಂದಿಕ್ಕಿಯಾಗಿದೆ. ಭಾರತ ಸರಕಾರ ಉತ್ಪಾದನೆ ಆಧಾರಿತ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ. ಇತ್ತೀಚೆಗೆ ಹ್ಯಾರಿಪಾಟರ್‌ ಪುಸ್ತಕದ ಮುದ್ರಣ ಜಗತ್ತಿನ ಮೂರು ಕೇಂದ್ರಗಳಲ್ಲಿ ನಡೆಯಿತು. ಇದರಲ್ಲಿ ಒಂದು ಕೇಂದ್ರ ಮಣಿಪಾಲ. ಇದು ಹೊರತುಪಡಿಸಿದರೆ ಅಮೆರಿಕ, ಯೂರೋಪ್‌ ಇನ್ನೆರಡು ತಾಣಗಳು. ಚೀನಕ್ಕೆ ಈ ಅವಕಾಶ ಸಿಗಲಿಲ್ಲ. ಇದು ಭಾರತದ ಗುಣಮಟ್ಟ, ಕಾರ್ಯದಕ್ಷತೆಯನ್ನು ತೋರಿಸುತ್ತಿದೆ. ಇ ಬುಕ್‌ಗಳಿಗೂ ಹೆಚ್ಚಿನ ಬೇಡಿಕೆ ಮೂಡಿದೆ. ಪ್ಯಾಕೇಜಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಪೈ ಹೇಳಿದರು. 

ಮನೆ ನಿರ್ಮಾಣ, ರಿಯಲ್‌ ಎಸ್ಟೇಟ್‌, ಆಟೋಮೊಬೈಲ್‌, ಆರೋಗ್ಯ ಹೀಗೆ ವಿವಿಧ ಕ್ಷೇತ್ರಗಳು ವಿಕಾಸ ಹೊಂದುತ್ತಿದ್ದು ಇದು ಮುದ್ರಣ ಕ್ಷೇತ್ರದ ಭವಿಷ್ಯವನ್ನು ಮತ್ತಷ್ಟು ಉತ್ತಮಪಡಿಸಲಿದೆ. ನಿರ್ದಿಷ್ಟ ಯೋಚನಾಶಕ್ತಿ, ಆಸಕ್ತಿ, ಉದ್ಯಮಶೀಲತೆ, ಸವಾಲುಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಯುವಕರಿಗೆ ಅತ್ಯಗತ್ಯ ಎಂದು ಗೌತಮ್‌ ಪೈ ತಿಳಿಸಿದರು. 

ಗೌರವ ಅತಿಥಿಗಳಾದ ಮಣಿಪಾಲ ವಿ.ವಿ. ಕುಲಪತಿ ಡಾ|ಎಚ್‌.ವಿನೋದ ಭಟ್‌ ಅವರು, ಉನ್ನತ ಶಿಕ್ಷಣ ಭಾರತದಲ್ಲಿ ಶೇ.25 ದಾಟಿಲ್ಲ. ಶಿಕ್ಷಣವೆಂದರೆ ಕೇವಲ ಪದವಿಯಾಗಿರದೆ ಅದರ ಜೊತೆ ಆದಾಯವೂ ಹೆಚ್ಚಿ ಜೀವನ ಮಟ್ಟ ಸುಧಾರಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳೂ ಮಣಿಪಾಲ ಶಿಕ್ಷಣ ಸಂಸ್ಥೆಗಳಲ್ಲಿದೆ ಎಂದು ಹೇಳಿದರು. 

Advertisement

ಅಧ್ಯಕ್ಷತೆಯನ್ನು ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ವಹಿಸಿದ್ದರು. ವಿಭಾಗ ಮುಖ್ಯಸ್ಥ ಡಾ| ಅಮೃತರಾಜ್‌ ಎಚ್‌. ಕೃಷ್ಣನ್‌ ಸ್ವಾಗತಿಸಿ “ಇಂಪ್ರಶನ್ಸ್‌’ ಸಂಚಾಲಕ ನಾಗರಾಜ ಕಾಮತ್‌ ಪ್ರಸ್ತಾವನೆಗೈದರು. ಇದಕ್ಕೂ ಮೊದಲು ಮಣಿಪಾಲ ಪ್ರಸ್‌ನಿಂದ ಆರಂಭಗೊಂಡ ಮೆರವಣಿಗೆ ವೇಳೆ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈಧಿಯವರು ಧ್ವಜಾರೋಹಣ ಮಾಡಿದರು. 

“ತರಂಗ’ ವ್ಯವಸ್ಥಾಪಕ ಸಂಪಾದಕಿ ಟಿ. ಸಂಧ್ಯಾ ಪೈ ಅವರು ಮೆರವಣಿಗೆಗೆ ಚಾಲನೆ ನೀಡಿದರು. ದೇಶದ ವಿವಿಧೆಡೆಗಳಿಂದ ಸುಮಾರು 500 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಕೆ.ಪಿ. ರಾವ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಮೋನೋಟೈಪ್‌ ಮುದ್ರಣದ ಕಾಲದಿಂದ ಇದುವರೆಗೆ ಆದ ಬೆಳವಣಿಗೆಗಳನ್ನು ವಿವರಿಸಿದ ಮುದ್ರಣ ಶಿಕ್ಷಣ ಕ್ಷೇತ್ರದ ದಂತಕತೆ ಎನಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ.ಪಿ. ರಾವ್‌ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ವಿಕಾಸ ಹೊಂದುತ್ತಿರುವಾಗ ತಾಂತ್ರಿಕ ವಿಷಯಗಳ ಬೋಧನೆ ಸುಲಭದ್ದಲ್ಲ. 

ಕಲಿಯುವಿಕೆಯನ್ನು ಮುಂದುವರಿಸಬೇಕು, ಕಲಿಯುವಿಕೆಗೆ ನಿವೃತ್ತಿ ಎಂಬುದಿಲ್ಲ ಎಂಬ ಸ್ವಾನುಭವವನ್ನು ತಿಳಿಸಿದರು. ಪ್ರಶಸ್ತಿಯನ್ನು ತಮ್ಮ ಗುರು ಡಿ.ಡಿ. ಕೋಸಾಂಬಿ ಮತ್ತು ಮಾರ್ಗದರ್ಶನ ನೀಡಿದ್ದ ಟಾಟಾ ಪ್ರಸ್‌ನಲ್ಲಿ ಉನ್ನತಾಧಿಕಾರಿಯಾಗಿದ್ದ ದೇಸಾಯಿಯವರಿಗೆ ಸಮರ್ಪಿಸುವುದಾಗಿ ಕೆ.ಪಿ. ರಾವ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next