Advertisement

ಗಡ್ಡಿ ಜನರಿಗೆ ಸೇತುವೆಯೇ ಗಡ್ಡಿ

09:43 AM Jul 30, 2019 | Team Udayavani |

ಕಕ್ಕೇರಾ: ಬಸವಸಾಗರ ಜಲಾಶಯ ಭರ್ತಿಗೊಂಡು ಹೆಚ್ಚುವರಿ ನೀರು ಪ್ರತಿವರ್ಷ ಕೃಷ್ಣಾ ನದಿಗೆ ಹರಿಸಿದಾಗ ಉಂಟಾಗುವ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡು ಉಕ್ಕಿ ಹರಿಯುವ ನದಿಯಲ್ಲಿ ಈಜಿ ಜೈಸುವ ಸಮಸ್ಯೆ ಎದುರಾಗಿ ಪ್ರತಿಯೊಂದಕ್ಕೂ ಅಸಾಯಕತೆ ಜೀವನ ಅವರದಾಗಿತ್ತು. ಆದರೆ ಈ ಬಾರಿ ಪ್ರವಾಹ ಸಮಸ್ಯೆಯಿಂದ ಮುಕ್ತಿಗೊಂಡು ನೆಮ್ಮದಿ ಜೀವನಕ್ಕೆ ಸೇತುವೆ ದಾರಿಯಾಗಿ ನಿಂತಿದೆ.

Advertisement

ಈ ಬಾರಿಯೂ ಬಸವಸಾಗರ ಅಣೆಕಟ್ಟು ಭರ್ತಿಯಾದ ಹಿನ್ನಲೆ 17 ಕ್ರಸ್ಟ್‌ಗೇಟ್ ಮೂಲಕ ಎತ್ತಿ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್‌ ಹೆಚ್ಚುವರಿ ನೀರು ಹರಿಸಿದ್ದು, ಕಕ್ಕೇರಾ ಭಾಗದ ಕೃಷ್ಣಾ ನದಿ ನಡುಗಡ್ಡೆಯಾದ ನೀಲಕಂಠರಾಯನ ಗಡ್ಡಿ ಜನರು ಪ್ರವಾಹಕ್ಕೆ ಆತಂಕ ಪಡದೆ ದೈನಂದಿನ ವಸ್ತುಗಳಿಗಾಗಿ ಸೆೇತುವೆ ಮೇಲೆ ಸಂಚರಿಸುವುದು ಕಂಡು ಬಂತು.

ಎಚ್ಕೆಆರ್‌ಡಿಬಿ ವತಿಯಿಂದ 2.50 ಕೋಟಿ ರೂ.ಅನುದಾನದಲ್ಲಿ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಿಕೊಡಲಾಗಿದ್ದು, ಹೀಗಾಗಿ ನೀಲಕಂಠರಾಯನ ಗಡ್ಡಿ ಜನರ ದಶಕಗಳ ಕನಸು ಅಂತೂ ನನಸಾಗಿ ಸಮಸ್ಯೆ ಬಗೆಹರಿದಂತಾಗಿದೆ.

ಪ್ರವಾಹ ಬಂದಾಗೊಮ್ಮೆ ಅಲ್ಲಿನ ಜನರಿಗೆ ದೈನಂದಿನ ಉಪಜೀವನಕ್ಕಾಗಿ ಆಹಾರ ಇನ್ನಿತರ ಔಷಧೋಪಚಾರವನ್ನು ಅಧಿಕಾರಿಗಳ ತಂಡವು ನದಿಗೆ ಬೋಟ್ ಇಳಿಸುವ ಮೂಲಕ ನೆರವಿಗೆ ದಾವಿಸಲಾಗುತ್ತಿತ್ತು. ಅಲ್ಲದೇ ಅಗ್ನಿ ಶ್ಯಾಮಕ ಮತ್ತು ಕಂದಾಯ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ತುರ್ತು ನಿಗಾ ವಹಿಸಬೇಕಿತ್ತು.

ಅಂದಾಗೇ 2013ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಉಂಟಾದಾಗ ಗರ್ಭಿಣಿ ಯಲ್ಲಮ್ಮ ಎಂಬುವಳು ಈಜುಕಾಯಿ ಹಾಗೂ ಗ್ರಾಮಸ್ಥರ ಸಹಾಯದೊಂದಿಗೆ ನದಿ ಈಜಿದ್ದು ದೇಶದಲ್ಲಿ ಸುದ್ದಿಯಾಗಿದ್ದು ಸ್ಮರಿಸಬಹುದು. 2009ರಲ್ಲಿ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್‌ ನೀರು ಹರಿಸಿದ್ದಾಗ ಮೂರು ಜನ ನೀರಲ್ಲಿ ಕೊಚ್ಚಿಕೊಂಡು ಹೋದ ಪ್ರಸಂಗವು ಅಂದು ನಡೆದಿದೆ. ಅಲ್ಲದೇ ಅಂದು ಶಾಸಕರಾಗಿದ್ದ ನರಸಿಂಹ ನಾಯಕ (ರಾಜುಗೌಡ) ಅವರು ಕೂಡ ಬೋಟ್ ಸಹಾಯದೊಂದಿಗೆ ನಮ್ಮನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ್ದರು ಎನ್ನುತ್ತಾರೆ ಇಲ್ಲಿನ ಜನ.

Advertisement

2014ರಿಂದ 18ರ ವರೆಗೂ ಸತತ ಪ್ರವಾಹ: 2014ರಿಂದ 2018ರ ವರೆಗೂ ಸತತ ಗಡ್ಡಿಯ ಜನರಿಗೆ ಪ್ರವಾಹ ಉಂಟಾಗಿ ಸಂಚಾರ ಸ್ಥಗಿತಗೊಂಡು ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಈಜುಕಾಯಿ ಹಾಕಿಕೊಂಡು ನದಿ ದಾಟುವ ಪರಸ್ಥಿತಿ ತಿಳಿಯಾಗಿರಲಿಲ್ಲ. ಅಲ್ಲದೇ ಬೋಟ್ ವ್ಯವಸ್ಥೆಯು ಕಲ್ಪಿಸಿ ಸಂತೆ, ಇನ್ನಿತರ ದೈನಂದಿನ ವಸ್ತುಗಳ ಖರೀದಿಗೆ ಜನರ ತಂದು ಬಿಡುವುದು ನಿರಂತರ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಜಿಲ್ಲಾಡಳಿತ ಮಾಡಿದೆ.

ಮಕ್ಕಳ ಶಿಕ್ಷಣಕ್ಕೂ ಪೆಟ್ಟು: ಪ್ರವಾಹ ಆವರಿಸಿದಾಗೊಮ್ಮೆ ಅಲ್ಲಿನ ಶಾಲಾ ಮಕ್ಕಳ ಶಿಕ್ಷಣಕ್ಕೂ ಪೆಟ್ಟು ಬೀಳುವಂತಾಗಿತ್ತು. ಶಿಕ್ಷಕರು ಶಾಲೆಗೆ ತೆರಳಲು ಕೃಷ್ಣಾ ನದಿ ಪ್ರವಾಹ ಅಡ್ಡಾಗಿ ಹದಿನೈದು ದಿನಗಳವರೆಗೂ ಶಾಲಾ ರಜೆ ಘೋಷಿಸಿ ಪ್ರವಾಹ ಇಳಿದಾಗ ಶಾಲೆ ನಡೆಸಿದ್ದು ಸ್ಮರಿಸಬಹುದು.

ಬೋಟ್ ಕೊಚ್ಚಿ ಹೋಗುವ ಪ್ರಸಂಗ: 2016ರಲ್ಲಿ ಅಂದಿನ ಸುರಪುರ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅವರು ಬೋಟ್ ಮೂಲಕ ನೀಲಕಂಠರಾಯನ ಗಡ್ಡಿಗೆ ತೆರಳುವಾಗ ನೀರಿನ ರಬಸಕ್ಕೆ ಬೋಟ್ ಕೊಚ್ಚಿಕೊಂಡು ಹೋಗುತಿದ್ದಂತೆ ಸುರಕ್ಷತೆಯಾಗಿ ಮತ್ತೆ ಮರಳಿ ದಂಡೆಗೆ ಬರಬೇಕಾಯಿತು. ಭಗವಂತ ಹಾಗೂ ಗಂಗಾಮಾತೆ ಕೃಪೆಯಿಂದ ಅಂದು ಎಲ್ಲರೂ ಬಚಾವ್‌ ಆದರು.

ಕಷ್ಟದ ಜೀವನಕ್ಕೆ ಕೊನೆ?: ನೀಲಕಂಠರಾಯನ ಗಡ್ಡಿಯ ಜನರು ಪ್ರವಾಹ ಬಂದರೆ ಸಾಕು ಒಪ್ಪತಿನ ಊಟಕ್ಕೂ ಪರದಾಡುತಿದ್ದರು. ಪ್ರವಾಹ ಇಳಿದಾಗ ಕಲ್ಲು-ಮುಳ್ಳು ತಾಗಿ ಕೃಷ್ಣಾನದಿ ದಾಟಿಕೊಂಡು ಬರಬೇಕಾಗಿತ್ತು. ರಾತ್ರಿಯಾದರೆ ದೇವರ ಬಲ್ಲ. ಜೀವನಕ್ಕೆ ಬೇರೆ ದಾರಿಯೇ ಇರಲಿಲ್ಲ.

ಹೀಗೇ ದಶಕಗಳ ಕಾಲ ಕಷ್ಟದ ಜೀವನ ಸಾಗಿಸಿದ್ದ ಅವರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಸುರಪುರ ಕ್ಷೇತ್ರದ ಆಗಿನ ಶಾಸಕ ರಾಜಾ ವೆಂಟಕಪ್ಪ ನಾಯಕ ಅವರು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಕೊಡಿಸಿದರು. ಆ ಪರಿಣಾಮವಾಗಿಯೇ ಇಂದು ಸೇತುವೆ ಭಾಗ್ಯ ಒದಗಿ ಬಂದಿದ್ದು, ಸದ್ಯ 2019ರ ಪ್ರವಾಹ ಕಷ್ಟದ ಜೀವನ ಕೊನೆಗೊಂಡಿದೆ ಎಂಬುದು ಇಲ್ಲಿನ ಬಹುತೇಕ ಗ್ರಾಮಸ್ಥರ ಅಭಿಪ್ರಾಯ.

 

•ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next