ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಸುರಿದ ಮಳೆ ಹಾಗೂ ಬಿರುಗಾಳಿಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಯ ಆರ್ಭಟಕ್ಕೆ ತಗಡಿನ ಮನೆಗಳು ನಡುಗಿವೆ. ನಗರದಲ್ಲಿ ಹಾಸ್ಟೆಲ್ನ ಛತ್ತು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡ ಪ್ರಸಂಗ ನಡೆದಿದೆ.
ಇನ್ನೂ ಕೊಪ್ಪಳ ನಗರ ಸೇರಿದಂತೆ ಸುತ್ತಲಿನ ಕೆಲವು ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಜೊತೆಗೆ ಬೀಸಿದ ಬಿರುಗಾಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ತಗಡು ಮನೆಗಳ ಮೇಲ್ಛಾವಣೆ ಗಾಳಿಗೆ ಹಾರಿ ಹೋಗಿದ್ದು ಜನರು ಮಳೆಯ ಅಸ್ಥವ್ಯಸ್ಥಕ್ಕೆ ತೊಂದರೆ ಅನುಭವಿಸಿದ್ದಾರೆ. ಇನ್ನೂ ಗಾಳಿಯ ಹೊಡೆತಕ್ಕೆ ಹೊಲದಲ್ಲಿನ ಗಿಡಗಳು ನೆಲಕ್ಕುರಳಿವೆ. ನಗರ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಗ್ರಾಮೀಣ ಪ್ರದೇಶದಲ್ಲಿ ಮಳೆ, ಗಾಳಿಯಿಂದಾಗಿ ವಿದ್ಯುತ್ ಕಡಿತ ಮಾಡಿದ್ದು, ಅಲ್ಲಲ್ಲಿ ದುರಸ್ಥಿ ಮಾಡುವ ಕಾರ್ಯ ಶುಕ್ರವಾರ ಜರುಗಿತು.
ಇನ್ನೂ ಮಳೆ, ಗಾಳಿ ಸಿಡಿಲಿನ ಹಿನ್ನೆಲೆಯಲ್ಲಿ ನಗರದಲ್ಲಿನ ಎಸ್‌ಸಿ, ಎಸ್‌ಟಿ ಬಾಲಕರ ವಸತಿ ನಿಲಯದ ಮೇಲ್ಛಾವಣೆಯ ಛತ್ತು ಕುಸಿದಿದೆ. ಇದರಿಂದ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡ ತುಂಬ ಹಳೆಯಾಗಿದ್ದು, ಗಾಳಿ-ಮಳೆಗೆ ಮೇಲ್ಛಾವಣಿ ಕುಸಿದಿದೆ. ಗಾಯಗೊಂಡ ಕಷ್ಣ, ಅನೀಲ, ರುದ್ರೇಶ ಅವರನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸ್ಟೆಲ್ ಸ್ಥಿತಿಯ ಬಗ್ಗೆ ಎಸ್‌ಎಫ್‌ಐ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಬೇಕೆಂದು ಪ್ರತಿಭಟನೆ ನಡೆಸಿದರು.
Advertisement
ಜಿಲ್ಲೆಯಲ್ಲಿ ಗುರುವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆಯ ಆರ್ಭಟ, ಗುಡುಗು ಸಿಡಿಲಿನ ಬಡಿತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಮುಂಗಾರು ಪೂರ್ವ ಮಳೆ ಜನರಲ್ಲಿ ನಿರೀಕ್ಷೆ ಮೂಡಿಸಿವೆ. ಹಲವು ಹೋಬಳಿಯಲ್ಲಿ ಮಳೆ ಜೋರಾಗಿ ಸುರಿದಿದ್ದು ರೈತರಲ್ಲಿ ಖುಷಿ ಮೂಡಿದೆ. ಬಿತ್ತನೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತ ಸಮೂಹದಲ್ಲಿನ ಖುಷಿಗೆ ಕೃಷಿ ಇಲಾಖೆಯೂ ತಯಾರಿ ನಡೆಸಿದೆ. ಕೆಲವು ಹೋಬಳಿಯಲ್ಲಿ ಇನ್ನೂ ಭೂಮಿ ಹಸನಗೊಳಿಸುವಂತ ಮಳೆಯಾಗಿಲ್ಲ.