ನನಗೆ ಸಿನಿಮಾ ಅಂದ್ರೆ ಪಂಚಪ್ರಾಣ. ಹಾಗಾಗಿ, ಉತ್ತಮೋತ್ತಮ ಸಿನಿಮಾಗಳ ಡಿವಿಡಿಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತು. ಅದು 2009ರ ಕಾಲ. ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದ ನಾನು ಅಲ್ಲಿನ ಪ್ರತಿಷ್ಠಿತ ಡಿವಿಡಿ ಮಾರಾಟ ಮಳಿಗೆಯಲ್ಲಿ ಬ್ಲಾಕ್ ಫ್ರೈಡೇ ಚಿತ್ರದ ಡಿವಿಡಿಯನ್ನು ಖರೀದಿಸಿದೆ.
ಕೌಂಟರಿನಲ್ಲಿ ಬಿಲ್ ಪಾವತಿಸಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರವಿದ್ದ ರೂಮಿಗೆ ಹೋಗಿ, ಲ್ಯಾಪ್‌ಟಾಪ್‌ನಲ್ಲಿ ಚಿತ್ರ ನೋಡೋಣವೆಂದು ಡಿವಿಡಿ ಪ್ಯಾಕ್ ಓಪನ್ ಮಾಡಿ ನೋಡಿದರೆ ಡಿವಿಡಿ ಅರ್ಧಕ್ಕೆ ಬಿರುಕುಬಿಟ್ಟುಕೊಂಡಿತ್ತು! ತಕ್ಷಣವೇ ಅದೇ ಅಂಗಡಿಗೆ ಬಿಲ್ ಸಮೇತ ಬಂದು ಆ ಡಿವಿಡಿಯ ಸ್ಥಿತಿ ತೋರಿಸಿ ಬೇರೊಂದು ಡಿವಿಡಿ ಕೊಡಿ ಎಂದು ಬೇಡಿಕೆ ಇಟ್ಟಾಗ, ಆ ಅಂಗಡಿಯಾತ ನನ್ನ ಮಾತನ್ನು ನಂಬಲು ಸಿದ್ಧವಿರಲಿಲ್ಲ. ಅಂಗಡಿಯಿಂದ ಹೊರಹೋದ ಮೇಲೆ ನೀವೇ ಎಲ್ಲೋ ನೋಡಿಕೊಂಡು ಡಿವಿಡಿಯಿದ್ದ ಪ್ಯಾಕ್ ಅನ್ನು ಕೆಳಗೆ ಬೀಳಿಸಿರಬಹುದು ಅಥವಾ ಡಿವಿಡಿ ಪ್ಯಾಕ್ ಓಪನ್ ಮಾಡುವ ಭರದಲ್ಲಿ ಜೋರಾಗಿ ಪ್ರಸ್ ಮಾಡಿ ಡಿವಿಡಿಯನ್ನು ಹಾಳು ಮಾಡಿರಬಹುದು ಎಂದು ವಾದಕ್ಕೆ ಇಳಿದುಬಿಟ್ಟ.
ಆಗ ನನ್ನ ಸಿನಿಮಾ ಪ್ರೀತಿಯನ್ನು ಹಾಗೂ ಆವರೆಗೆ ನೂರಾರು ಡಿವಿಡಿಗಳನ್ನು ಖರೀದಿಸಿದ್ದು, ಹೀಗಾಗಿ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೆಂದು ಗೊತ್ತಿದೆ ಅನ್ನೋದನ್ನು ಆತನಿಗೆ ಮನವರಿಕೆ ಮಾಡಲೆತ್ನಿಸಿದೆ. ಖರೀದಿಸಿದಾಗಲೇ ಇಲ್ಲೇ ಓಪನ್ ಮಾಡಿ, ತೋರಿಸಿ ಚೆಕ್ ಮಾಡಬೇಕಿತ್ತು ಎಂಬುದು ಆತನ ವಾದ. ನೀಟಾಗಿ ಪ್ಯಾಕ್ ಆಗಿ ಬಂದಿರುವ ಡಿವಿಡಿಯನ್ನು ಕೊಳ್ಳುವವರು ಯಾರೂ ಹಾಗೆ ಮಾಡುವುದಿಲ್ಲ ಎಂದು ಪ್ರತಿವಾದ ಮಾಡಿದೆ. ಅದ್ಯಾವುದನ್ನೂ ಆತ ಸುತರಾಂ ಒಪ್ಪಲೇ ಇಲ್ಲ. ನಾನೂ ವಾದ ಬಿಡಲಿಲ್ಲ. ಕೊನೆಗೆ ನಾನು ಖರೀದಿಸಿದ್ದ ಡಿವಿಡಿಯ ಮಾಲನ್ನು ಆತನಿಗೆ ಸರಬರಾಜು ಮಾಡಿದ್ದ ಡಿಸ್ಟ್ರಿಬ್ಯೂಟರ್‌ಗೆ ಫೋನಾಯಿಸಿ ಇದನ್ನು ತಿಳಿಸಿದ.
ಮುಂದಿನ ಬಾರಿ ತನಗೆ ಡಿವಿಡಿಗಳ ಪಾರ್ಸೆಲ್‌ಗಳನ್ನು ರವಾನಿಸುವಾಗ ಬ್ಲಾಕ್ ಫ್ರೈಡೇ ಚಿತ್ರದ ಒಂದು ಡಿವಿಡಿ ಕಳುಹಿಸುವಂತೆ ಸೂಚಿಸಿದ. ಆನಂತರ, ನನ್ನ ಮುಖ ನೋಡಿ ಒಂದು 15 ದಿನ ಬಿಟ್ಟು ಬನ್ನಿ ಎಂದ. ಸರಿ, ಕೊನೆಗೂ ಮನವರಿಕೆ ಆಯ್ತಲ್ಲ ಅಂತ ಸಮಾಧಾನವಾಯಿತು. ಆದರೆ, ಅಲ್ಲಿಂದ ಮುಂದಕ್ಕೆ ನನ್ನ ನಿರೀಕ್ಷೆಗೆ ಸಿಕ್ಕಿದ್ದು ಮಾತ್ರ ಶೂನ್ಯ ಫಲಿತಾಂಶ. ಆತ ಹೇಳಿದಂತೆ ಸರಿಯಾಗಿ 15 ದಿನ ಬಿಟ್ಟು ಹೋದರೂ, ವಾರ ಬಿಟ್ಟು ಬನ್ನಿ, ತಿಂಗಳು ಬಿಟ್ಟು ಬನ್ನಿ, ಅಯ್ಯೋ ಮತ್ತೆ ಅಂಥದ್ದೇ ಡಿಫೆಕ್ಟ್ ಮಾಲು ಕಳಿಸಿದ್ದ. ಅದಕ್ಕೆ ನಾನೇ ವಾಪಸ್ ಕಳುಹಿಸಿದೆ ಎಂದೆಲ್ಲಾ ರೈಲು ಬಿಡುತ್ತಾ ಸುಮಾರು ಎರಡೂವರೆ ತಿಂಗಳು ತಳ್ಳಿಬಿಟ್ಟ. ಅಷ್ಟರಲ್ಲಿ
ನಾನು ಆ ಏರಿಯಾ ಬಿಟ್ಟು ವಿಜಯನಗರದ ಕಡೆ ಶಿಫ್ಟ್ ಆದೆ. ಅಷ್ಟಾದರೂ ಒಂದೆರಡು ಬಾರಿ ಮತ್ತೆ ಹೋಗಿ ಡಿವಿಡಿ ಎಲ್ಲಿ ಸ್ವಾಮೀ ಅಂದೆ. ಆಗಲೂ ಪ್ರಯೋಜನವಾಗಲಿಲ್ಲ. ಈಗ ವರ್ಷಗಳು ಉರುಳಿವೆ. ಆದರೆ, ಈ ಪಿಗ್ಗಿ ಬಿದ್ದ ಪ್ರಸಂಗ ಮಾತ್ರ ಮರೆಯಲು ಸಾಧ್ಯವಾಗಿಲ್ಲ.
ಚೇತನ್ ಓ. ಆರ್. ಬೆಂಗಳೂರು