Advertisement

ಕೈ ಶಾಸಕಾಂಗ ಸಭೆಯಲ್ಲಿ ಗದ್ದಲ

06:00 AM Dec 19, 2018 | |

ಬೆಳಗಾವಿ: ನಮ್ಮ ಕ್ಷೇತ್ರಗಳಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ನಮ್ಮ ಶಿಫಾರಸುಗಳಿಗೂ ಮಾನ್ಯತೆ ದೊರೆಯುತ್ತಿಲ್ಲ ಎಂದು ಬಹುತೇಕ ಶಾಸಕರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಂಪುಟ ಸಹಿತ ಇತರ ಪ್ರಮುಖ ಹುದ್ದೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಈ ಭಾಗದ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ, ರೋಶನ್‌ ಬೇಗ್‌, ಎಂ.ಬಿ.ಪಾಟೀಲ್‌ ಹಾಗೂ ಬಂಡಾಯ ನಾಯಕ ಎಂದೇ ಬಿಂಬಿತರಾಗಿರುವ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಗೈರು ಹಾಜರಾಗಿದ್ದು, ಪರೋಕ್ಷವಾಗಿ ತಮ್ಮ ಕೋಪ ಹೊರಹಾಕಿದ್ದಾರೆ.

Advertisement

“ಡಿ. 22ರಂದು ಸಂಪುಟ ವಿಸ್ತರಣೆಯಾಗಲಿದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಭರವಸೆ ನೀಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಶಾಸಕರು ಹೆಚ್ಚು ಕೋಪ-ತಾಪ ಪ್ರದರ್ಶಿಸದಂತೆ ಆಕ್ರೋಶ ತಣಿಸುವ ಪ್ರಯತ್ನ ಮಾಡಿದರು.

ಸರಕಾರವಿದ್ದೂ ಬೆಲೆಯಿಲ್ಲ
ಎರಡು ಗಂಟೆಗಳ ಕಾಲ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಶಾಸಕರು ತಮ್ಮ  ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸದಿದ್ದರೆ ನಮ್ಮ ಸರಕಾರ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್‌ಗೆ ಬೆಂಬಲ ನೀಡಿದ್ದೀರಿ. ಆದರೆ ನಮ್ಮದೇ ಸರಕಾರ ಇದ್ದರೂ ನಮಗೆ ಬೆಲೆ ಇಲ್ಲವೇ ಎಂದು ಅಲವತ್ತುಕೊಂಡರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸಮಾಧಾನ
ಶಾಸಕರನ್ನು ಸಮಾಧಾನಪಡಿಸಿದ ಸಿದ್ದು, ಅನುದಾನ ಬಿಡುಗಡೆ, ಅಧಿಕಾರಿಗಳ ವರ್ಗಾವಣೆ ಕುರಿತು ಸಮನ್ವಯ ಸಮಿತಿ ಯಲ್ಲೂ  ಚರ್ಚಿಸಲಾಗಿದೆ. ಸಿಎಂ ಜತೆಯೂ ಮತ್ತೆ ಚರ್ಚಿಸಲಾಗುವುದು. ಸದ್ಯದಲ್ಲೇ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆದು ಸಿಎಂ ಅವರನ್ನೂ ಕರೆಸಲಾಗುವುದು. ಡಿ. 20ರಂದೇ ನಾನು ದಿಲ್ಲಿಗೆ ಹೋಗುತ್ತಿದ್ದು, ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್‌ ಜತೆ ಚರ್ಚಿಸಲಾಗುವುದು ಎಂದರು.

ಕೊಂಡಯ್ಯ ಆಕ್ರೋಶ: ಉತ್ತರ ಕರ್ನಾಟಕ ಭಾಗಕ್ಕೆ ಪ್ರಮುಖ  ಹುದ್ದೆಗಳನ್ನು ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಅನ್ಯಾಯ ವಾಗುತ್ತಿದೆ ಎಂದು ಕೆ.ಸಿ.ಕೊಂಡಯ್ಯ ಅಸಮಾಧಾನ ಹೊರಹಾಕಿದರು. 

Advertisement

ಅರ್ಧಕ್ಕೂ ಹೆಚ್ಚು ಶಾಸಕರು ಗೈರು: ಶಾಸಕಾಂಗ ಪಕ್ಷದ ಸಭೆಗೆ ಅರ್ಧಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲಿ 117 ಮಂದಿ ಭಾಗವಹಿಸಬೇಕಿತ್ತು. ಆದರೆ 58 ಜನ ಶಾಸಕರು ಮಾತ್ರ ಸಭೆಗೆ ಹಾಜರಾಗಿದ್ದರು.

ಹಿರಿಯರನ್ನು ಕೈಬಿಡಲು ಆಗ್ರಹ: ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಬಹುತೇಕ ಕಾಂಗ್ರೆಸ್‌ ಶಾಸಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ವಿಸ್ತರಣೆ ಬದಲು ಪುನಾರಚನೆ
ಡಿ.22ರಂದು ಸಂಪುಟ ವಿಸ್ತರಿಸಲು ಕಸರತ್ತು ಆರಂಭಿಸಿರುವ ಕಾಂಗ್ರೆಸ್‌ ನಾಯಕರು ಪುನಾರಚನೆ ಮಾಡುವ ಕುರಿತೂ ಆಲೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಖಾಲಿ ಇರುವ ಆರು ಸ್ಥಾನಗಳ ಜತೆಗೆ ನಾಲ್ವರು ಸಚಿವರನ್ನು ಬದಲಾಯಿಸುವ ಕುರಿತೂ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬಹುದು. ಡಿ.20ರಂದು ದಿಲ್ಲಿಗೆ ತೆರಳಿ, ಆ ದಿನ ಸಂಜೆ ಸಭೆ ನಡೆಯಲಿದೆ. ರಮೇಶ್‌ ಜಾರಕಿಹೊಳಿ ಗೈರಿನ ಬಗ್ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉ. ಕರ್ನಾಟಕಕ್ಕೆ ಆದ್ಯತೆ ಕೊಡಬೇಕೆಂದು ಕೇಳಿದ್ದಾರೆ. ಈ ಬಗ್ಗೆ ಗಮನ ಹರಿಸಲಾಗುವುದು.
– ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next