Advertisement

ಮಂಗಳೂರಲ್ಲಿ ಆಡಿದ್ದ ಹುಡುಗ ಈಗ ಭಾರತದ ಕ್ರಿಕೆಟ್‌ ಕ್ಯಾಪ್ಟನ್‌

11:14 PM Jan 19, 2022 | Team Udayavani |

ಮಂಗಳೂರು: ಸುಮಾರು ಒಂದೂವರೆ ದಶಕದ ಹಿಂದೆ ಮಂಗಳೂರಿನಲ್ಲಿ ಅಂಡರ್‌- 13 ಕ್ರಿಕೆಟ್‌ ಪಂದ್ಯಾಟದಲ್ಲಿ ದ್ವಿಶತಕ ಬಾರಿಸಿ ಗಮನಸೆಳೆದಿದ್ದ ಹುಡುಗ ಇದೀಗ ಭಾರತ ಕ್ರಿಕೆಟ್‌ ತಂಡದ ನಾಯಕನಾಗಿ ಮೊದಲ ಪಂದ್ಯ ಆಡಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುವ ಮೂಲಕ ಕ್ರಿಕೆಟ್‌ ಜಗತ್ತಿಗೆ ಕಾಲಿಟ್ಟ ಮಂಗಳೂರಿನ ಹುಡುಗ ಕೆ.ಎಲ್‌. ರಾಹುಲ್‌ ಅವರು ಬುಧವಾರ ನಡೆದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕನಾಗಿ ಗುರುತಿಸಿಕೊಂಡಿದ್ದು, ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

Advertisement

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಉನ್ನತ ವಿದ್ಯಾಬ್ಯಾಸಕ್ಕೆ ಬೆಂಗಳೂರಿನತ್ತ ಮುಖ ಮಾಡಿದರು.

ಮೂರು ಮಾದರಿಯಲ್ಲೂ ಶತಕ
ರಾಹುಲ್‌ ಅವರಿಗೆ ಬಾಲ್ಯದಲ್ಲೇ ಕ್ರಿಕೆಟ್‌ ಬಗ್ಗೆ ಆಸಕ್ತಿ ಇತ್ತು. ಇದೀಗ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಆಟಗಾರರಲ್ಲಿ ಕೆ.ಎಲ್‌. ರಾಹುಲ್‌ ಕೂಡ ಒಬ್ಬರು. 2018ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ 14 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ದಾಖಲೆ ಇವರದ್ದಾಗಿದೆ.

ಕುಡ್ಲದ ಕುವರ
ಕೆ.ಎಲ್‌. ರಾಹುಲ್‌ ಅವರಿಗೆ ಮಂಗಳೂರಿನ ಬಗ್ಗೆ ವಿಶೇಷ ಗೌರವ. ಕಳೆದ ಕೆಲ ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ಸುರಿದ ಮಳೆಯಿಂದ ಎದು ರಾದ ಸಮಸ್ಯೆಗಳನ್ನು ತಿಳಿದು “ಮಂಗಳೂರು ಜನರೇ ಸುರಕ್ಷಿತವಾಗಿರಿ. ನನ್ನ ಪಾರ್ಥನೆ ನಿಮಗಾಗಿ ಇದ್ದೇ ಇದೆ’ ಎಂದು ತಿಳಿಸಿ, ತುರ್ತು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ ಟ್ವೀಟ್‌ ಮಾಡಿದ್ದರು. ಕಳೆದ ವರ್ಷ ಭಾರತ-ಇಂಗ್ಲೆಂಡ್‌ ತಂಡಗಳ ನಡುವೆ ನಡೆದ ವಿಶ್ವಕಪ್‌ ಪಂದ್ಯಾಟದಲ್ಲಿ ಅಭಿಮಾನಿಗಳು ತುಳು ಡೈಲಾಗ್‌ ಹೇಳಿದಾಗ ಅವರತ್ತ ಕೈ ಬೀಸಿ ಸಂತಸ ವ್ಯಕ್ತಪಡಿಸಿದ್ದರು. ಇಲ್ಲಿನ ಬೀಚ್‌, ಐಸ್‌ಕ್ರೀಂ ಅಂದರೆ ರಾಹುಲ್‌ಗೆ ಅಚ್ಚುಮೆಚ್ಚು. ಬಿಡುವಿನ ಸಮಯದಲ್ಲಿ ಮಂಗಳೂರಿನ ಸುರತ್ಕಲ್‌ ಬಳಿ ಇದ್ದ ಮನೆಗೆ ಆಗಮಿ ಸುತ್ತಿದ್ದರು. ಸದ್ಯ ರಾಹುಲ್‌ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.

ದೇಶಕ್ಕೆ ಕೀರ್ತಿ ತರಲಿ
ಕೆ.ಎಲ್‌. ರಾಹುಲ್‌ ಭಾರತ ತಂಡದ ನಾಯಕನಾಗಿ ಆಯ್ಕೆಗೊಂಡಿದ್ದು ಖುಷಿ ತಂದಿದೆ. ಮಗನಿಗೆ ಶುಭಾಶಯ ತಿಳಿಸಿದ್ದೇವೆ. ಸಾಧಿಸಬೇಕೆಂಬ ಛಲ ಬಾಲ್ಯದಲ್ಲಿಯೇ ಅವನಲ್ಲಿತ್ತು. ರಾಹುಲ್‌ ಭಾರತ ಕ್ರಿಕೆಟ್‌ ತಂಡದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಅನೇಕ ಮಂದಿ ವಿಮರ್ಶಿಸಿದ್ದರು. ಈಗ ಅದು ನಿಜವಾಗಿದೆ. ದೇಶಕ್ಕೆ ಕೀರ್ತಿ ತರುವಂತೆ ಮಾಡಲಿ ಎನ್ನುವುದು ನಮ್ಮ ಹಾರೈಕೆ.
– ರಾಜೇಶ್ವರಿ ಲೋಕೇಶ್‌,
ಕೆ.ಎಲ್‌. ರಾಹುಲ್‌ ಅವರ ತಾಯಿ

Advertisement

ಖುಷಿಯ ವಿಚಾರ
ರಾಹುಲ್‌ ಅವರಿಗೆ 11 ವರ್ಷವಿರುವಾಗಲೇ ನಾನು ಕ್ರಿಕೆಟ್‌ ತರಬೇತಿ ನೀಡುತ್ತಿದ್ದೆ. ಕ್ರಿಕೆಟ್‌ಗೆ ಸಂಬಂಧಪಟ್ಟಂತೆ ಈಗಲೂ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಅವರು ಕೂಡ ಹಲವು ವಿಚಾರಗಳ ಬಗ್ಗೆ ನನ್ನಲ್ಲಿ ಚರ್ಚೆ ಮಾಡುತ್ತಿದ್ದಾರೆ. ಇದೀಗ ಭಾರತ ತಂಡದ ನಾಯಕನಾಗಿ ಮೊದಲ ಪಂದ್ಯ ಆಡುತ್ತಿದ್ದು ಖುಷಿ ತಂದಿದೆ.
– ಸ್ಯಾಮುವೆಲ್‌ ಜಯರಾಜ್‌,
ರಾಹುಲ್‌ ಅವರ ಕೋಚ್‌

-ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next