Advertisement

ಮದುವೆ ಮನೆಯ ಬಾಲಕನಿಗೆ ಸಮುದ್ರದಲೆಯಲ್ಲಿ ಕಾದಿತ್ತು ಸಾವು

11:57 AM Apr 24, 2018 | Team Udayavani |

ಉಳ್ಳಾಲ: ಅಣ್ಣನ ಮದುವೆಯ ಸಂಭ್ರಮ. ಅತ್ತಿಗೆಯನ್ನು ಕರೆತರಲು ಸಂಬಂಧಿಕರೊಂದಿಗೆ ಸಂಭ್ರಮದಿಂದ ತೆರಳಿದ್ದ ಬಾಲಕ ಜುನೈದ್‌ಗೆ ಮರವಂತೆ ಬಳಿ ಸಾವು ಸಮುದ್ರದ ರೂಪದಲ್ಲಿ ಕಾದಿತ್ತು. ಶೀರೂರಿನಿಂದ ಉಪ್ಪಿನಂಗಡಿಗೆ ವಾಪಸಾಗುತ್ತಿದ್ದ ಮದುವೆ ಕಾರ್ಯಕ್ರಮದ ಬಸ್ಸಿನಲ್ಲಿದ್ದ ಮಕ್ಕಳ ಬೀಚ್‌ಗೆ ತೆರಳುವ ಹಂಬಲ ಸಾವಿನೊಂದಿಗೆ ಪರ್ಯಾವಸಾನಗೊಂಡಿದೆ.

Advertisement

ಮಂಗಳೂರು ತಾಲೂಕಿನ ಮಂಜನಾಡಿ  ಕೋಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ  ರಶೀದ್‌ ಮತ್ತು ಜಮೀಲಾ ದಂಪತಿಯ ಮೂವರು ಪುತ್ರರಲ್ಲಿ ಜುನೈದ್‌(12) ಎರಡನೆಯವನು. ಮಂಜನಾಡಿಯ ಸರಕಾರಿ ಮೌಲಾನಾ ಆಝಾದ್‌ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯಿಂದ 7ನೇ ತರಗತಿಗೆ ಪಾಸಾಗಿದ್ದ ಜುನೈದ್‌ ಕಲಿಕೆಯಲ್ಲೂ ಮುಂದು.  ಈತನಿಗೆ 8ನೇ ತರಗತಿಯಲ್ಲಿ  ಕಲಿಯುತ್ತಿರುವ ಉನೈಸ್‌ ಹಾಗೂ  ಐದು ವರ್ಷದ  ರಹೀಸ್‌ ಎಂಬಿಬ್ಬರು ಸಹೋದರರಿದ್ದಾರೆ.

10 ದಿನಗಳ ಹಿಂದೆ ಉಪ್ಪಿನಂಗಡಿಗೆ ತೆರಳಿದ್ದರು
ಜುನೈದ್‌ನ ತಾಯಿ ಜಮೀಲಾ ಅವರ ಸಹೋದರಿಯ ಪುತ್ರನ ಮದುವೆ ವಾರದ ಹಿಂದೆ  ಉಪ್ಪಿನಂಗಡಿಯಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮ ಕ್ಕೆಂದು ರಶೀದ್‌ ಕುಟುಂಬ ಮನೆಗೆ ಬೀಗ ಹಾಕಿ 10 ದಿನದ ಹಿಂದೆಯೇ ಉಪ್ಪಿನಂಗಡಿಗೆ ತೆರಳಿತ್ತು. ಶೀರೂರಿನ ಯುವತಿಯನ್ನು ಜುನೈದ್‌ ಅವರ ಅಣ್ಣ ಮದುವೆಯಾಗಿದ್ದು, ಮದುವೆಯ ಬಳಿಕ ವಧು ಶೀರೂರಿನ ತಾಯಿ ಮನೆಗೆ ತೆರಳಿದ್ದು, ರವಿವಾರ ಅವರನ್ನು ಕರೆ ತರುವ ಕಾರ್ಯಕ್ರಮವಿತ್ತು.

ಬೆಳಗ್ಗೆ 9 ಗಂಟೆಗೆ ಹೊರಟಿದ್ದರು
ಉಪ್ಪಿನಂಗಡಿಯ ಮನೆಯಿಂದ ಶೀರೂರಿನಲ್ಲಿರುವ ವಧುವಿನ ಮನೆಗೆ ವರನ ಕಡೆಯಿಂದ ಸುಮಾರು 50ಕ್ಕೂ ಹೆಚ್ಚು ಸಂಬಂಧಿಕರು ತೆರಳಿದ್ದರು. 

ಮಧ್ಯಾಹ್ನ ಊಟದ ಬಳಿಕ ವಾಪಸ್‌ ಹೊರಟಿದ್ದ ತಂಡ ಸಂಜೆ 5 ಗಂಟೆ  ಸುಮಾರಿಗೆ ಮರವಂತೆ ಬಳಿ ಬರುತ್ತಿದ್ದಾಗ ಬಸ್ಸಿನಲ್ಲಿದ್ದ ಮಕ್ಕಳು ಬೀಚ್‌ ಬಳಿ ಬಸ್‌ ನಿಲ್ಲಿಸಿ ಎಂದು ಹಠ ಹಿಡಿದರು. ಅಲ್ಲಿ ಬಸ್‌ ನಿಲ್ಲಿಸಲಾಗಿದ್ದು, ಸುಮಾರು ಅರ್ಧ ಗಂಟೆ  ಕಾಲ ಸಮುದ್ರದ ಅಲೆಗಳಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ತಂದೆಯೊಂದಿಗಿದ್ದ ಜುನೈದ್‌ ತನ್ನ ಸಹೋದರ ಉನೈಸ್‌ ಮತ್ತು ಸಂಬಂಧಿ ಇಯಾಝ್ನೊಂದಿಗೆ ಸಮುದ್ರದ ಅಲೆಯಲ್ಲಿ ಆಟವಾಡುತ್ತಿದ್ದಾಗ ಎದ್ದ ದೊಡ್ಡ ಅಲೆಗೆ  ಮೂವರೂ ಸಮುದ್ರ ಪಾಲಾಗಿದ್ದರು.  ಈ ಸಂದರ್ಭ ರಶೀದ್‌  ಅವರು ಇಯಾಝ್ ಮತ್ತು ಉನೈಸ್‌ನನ್ನು ರಕ್ಷಿಸಿದ್ದು, ಜುನೈದ್‌ ನೀರುಪಾಲಾಗಿದ್ದ. ರಕ್ಷಿಸಲ್ಪಟ್ಟ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ, ಅವರು ಚೇತರಿಸಿಕೊಂಡ  ಬಳಿಕ ಡಿಸಾcರ್ಜ್‌ ಮಾಡಲಾಗಿದೆ. 

Advertisement

ಬಸ್ಸಿನಲ್ಲಿದ್ದ ಮಹಿಳೆಯರನ್ನು ಉಪ್ಪಿನಂಗಡಿಗೆ ಸಂಜೆಯೇ ಕಳುಹಿಸಿ, ಜುನೈದ್‌ನ ಹುಡುಕಾಟಕ್ಕೆ  ಸುಮಾರು 15ಕ್ಕೂ ಹೆಚ್ಚು ಸಂಬಂಧಿಕರು ಮರವಂತೆಯಲ್ಲೇ ಉಳಿದರು.  ಸೋಮವಾರ ಸಂಜೆ ಶವ ಪತ್ತೆಯಾಗಿದ್ದು, ಅದನ್ನು  ಮಂಜನಾಡಿಗೆ ತರಲಾಗಿದೆ. ಮದುವೆ  ಸಂಭ್ರಮದ ಮನೆ ಈಗ   ಶೋಕಸಾಗರದಲ್ಲಿ ಮುಳುಗಿದೆ.

ಸೋಮವಾರ  ಮೃತದೇಹ ಪತ್ತೆ 
ಮರವಂತೆ: ಇಲ್ಲಿನ ಮಾರಸ್ವಾಮಿ ದೇವಸ್ಥಾನದ ಎದುರಿನ ಬೀಚ್‌ನಲ್ಲಿ ಕಡಲಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ  ಮೊಹಮ್ಮದ್‌ ಜುನೈದ್‌ (12)ನ ಮೃತದೇಹ ಮರವಂತೆ ಹೊರಬಂದರು ಕಾಮಗಾರಿ  ಸ್ಥಳದಲ್ಲಿ ಸೋಮವಾರ ಪತ್ತೆಯಾಗಿದೆ.

ಕಲ್ಲುಗಳ ನಡುವೆ ಸಿಲುಕಿತ್ತು
ಬೆಳಗ್ಗೆ 10 ಗಂಟೆ ಸುಮಾರಿಗೆ ಹೊರ ಬಂದರು ಬಳಿಯ ರಸ್ತೆಯ ದಡಕ್ಕೆ ಹಾಕಿರುವ ಕಲ್ಲುಗಳ ರಾಶಿಯ ನಡುವೆ ಬಾಲಕನ  ಮೃತದೇಹವಿರುವುದನ್ನು ಸ್ಥಳೀಯರು ಗಮನಿಸಿದರು. ಈ ಸಂದರ್ಭ  ಮತ್ತೆ ಅಲೆಗಳ ರಭಸಕ್ಕೆ ಸಿಲುಕಿದ ಮೃತ ದೇಹ  ಕಲ್ಲುಗಳ ಒಳಗೆ ಹೋಗಿ ಸೇರಿತು. ಸ್ಥಳೀಯ ಮೀನುಗಾರರು  ಅದನ್ನು ಹೊರ ತೆಗೆಯಲು ಸಾಕಷ್ಟು ಶ್ರಮಿಸಿದರೂ ಸಾಧ್ಯವಾಗದ ಕಾರಣ ದೇಹಕ್ಕೆ ಹಗ್ಗ ಕಟ್ಟಿ  ಪೊಲೀಸರಿಗೆ ಮಾಹಿತಿ ನೀಡಿದರು. ಕಡಲಿನ ಅಬ್ಬರ ತೀವ್ರವಾಗಿದ್ದರಿಂದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬಂದಿ ಕಲ್ಲುಗಳ ನಡುವೆ ಇಳಿಯುವ ಧೈರ್ಯ ಮಾಡಲಿಲ್ಲ, ಮಧ್ಯಾಹ್ನದ ಬಳಿಕ ಸ್ಥಳೀಯರಾದ ಸೊಹೈಲ್‌ ಕಲ್ಲುಗಳ ನಡುವೆ ಇಳಿದು  ಶವವನ್ನು ಹೊರತೆಗೆದರು.

Advertisement

Udayavani is now on Telegram. Click here to join our channel and stay updated with the latest news.

Next